ಗದಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ತಿಂಗಳು ಎಲ್ಲ ಕೆಲಸ, ಕಾರ್ಯಗಳು ಸ್ಥಗಿತಗೊಂಡಿದ್ದರಿಂದ ಜನ ಸಾಮಾನ್ಯರಿಗೆ ನಿತ್ಯ ಜೀವನವೇ ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿನ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಎಲ್ಲ ಶುಲ್ಕಗಳನ್ನು ಮನ್ನಾ ಮಾಡಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಲ್ಲಿದ್ದರಿಂದ ಸದ್ಯಕ್ಕೆ ಶಾಲಾ-ಕಾಲೇಜುಗಳು ಬಾಗಿಲು ತೆರೆಯುವುದೇ ಅನುಮಾನ. ಹೀಗಾಗಿ ಶಾಲಾ-ಕಾಲೇಜು ಶುಲ್ಕ ಕಟ್ಟುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಒತ್ತಡ ಹೇರಬಾರದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಾಕಷ್ಟು ಬಾರಿ ಹೇಳಿಕೆ ನೀಡಿದ್ದಾರೆ. ಆದರೆ ಅದ್ಯಾವುದನ್ನೂ ಲೆಕ್ಕಿಸದ ಕೆಲ ಶಿಕ್ಷಣ ಸಂಸ್ಥೆಗಳು ವಾರ್ಷಿಕ ಶುಲ, ಡೊನೇಷನ್ ನೆಪದಲ್ಲಿ ಸಾವಿರಾರು ರೂ. ವಸೂಲಿ ಮಾಡುತ್ತಿವೆ. ನಿಗದಿತ ಅವಧಿಯಲ್ಲಿ ಶುಲ್ಕ ಪಾವತಿಸದಿದ್ದರೆ, ದಂಡ ವಿಧಿಸಲಾಗುತ್ತದೆ ಎಂಬ ಸಂದೇಶ ಕಳುಹಿಸುತ್ತಿರುವುದು ಪೋಷಕರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಆದರೆ, ಶ್ರೀ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ ಇದಕ್ಕೆ ಅಪವಾದ. ಸಂಸ್ಥೆ ಅಧಿಧೀನದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 8ರಿಂದ ದ್ವಿತೀಯ ಪಿಯು (ಕಲಾ ವಿಭಾಗ) ವರೆಗೆ ತರಗತಿಗಳು ನಡೆಯುತ್ತಿವೆ. ಪ್ರತೀ ವರ್ಷದಂತೆ ಸರಕಾರಿ ಮತ್ತು ಸಂಸ್ಥೆಯ ಶುಲ್ಕವನ್ನು ಒಳಗೊಂಡಂತೆ ಪ್ರೌಢಶಾಲೆ ಪ್ರವೇಶಕ್ಕೆ 1,000 ರೂ. ಹಾಗೂ ಪಪೂ ತರಗತಿಗೆ 5000 ರೂ. ಭರಿಸಬೇಕಾಗಿತ್ತು. ಸಂಸ್ಥೆಯಲ್ಲಿ ಬಡ ನೇಕಾರರ ಮಕ್ಕಳು, ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿ ಕೋವಿಡ್ ದಿಂದ ಎಲ್ಲ ಕ್ಷೇತ್ರಗಳೂ ಆರ್ಥಿಕವಾಗಿ ನಲುಗಿವೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಶುಲ್ಕ ಪಡೆಯದಿರಲು ಹಾಗೂ ಸರಕಾರಿ ಶುಲ್ಕವನ್ನೂ ಸಂಸ್ಥೆಯಿಂದಲೇ ಭರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಸಂಸ್ಥೆಯ ಸಾಧನೆ ಸಾಧಾರಣವಲ್ಲ: ಬೆಟಗೇರಿಯ ಶ್ರೀ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಅನುದಾನಿತ ಸಂಯುಕ್ತ ಪಪೂ ಕಾಲೇಜು ನಗರದ ಪ್ರಮುಖ ಸಂಸ್ಥೆಗಳಲ್ಲೊಂದು. 1985-86ರಲ್ಲಿ ಪ್ರೌಢ ಹಾಗೂ 1991-92ರಲ್ಲಿ ಪಿಯು ಕಲಾ ವಿಭಾಗ ಆರಂಭಗೊಂಡಿದೆ. ಸಂಸ್ಥೆಯ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಪಡೆಯದಿದ್ದರೂ, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕ್ರೀಡಾ ಮೀಸಲಾತಿಯಡಿ ಕೆಲವರು ಕಂದಾಯ, ಪೊಲೀಸ್, ಶಿಕ್ಷಣ ಇಲಾಖೆ ನಾನಾ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇನ್ನೂ ಕೆಲವರು ಭಾರತೀಯ ಸೇನೆಗೆ ಸೇರಿದ್ದು, ರಾಷ್ಟ್ರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂಬುದು ಸಂಸ್ಥೆಯ ಹೆಮ್ಮೆ. ಒಟ್ಟಾರೆ ಇಂತಹ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡುವ ಮೂಲಕ ಇತರೆ ಸಂಸ್ಥೆಗಳಿಗೆ ಮಾದರಿ ಎನಿಸಿದೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ 8ರಿಂದ 10ನೇ ತರಗತಿವರೆಗೆ 150 ಹಾಗೂ ಪಪೂದಲ್ಲಿ 100 ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿದ್ದರು.ಈ ಸಂದರ್ಭದಲ್ಲಿ ಜನರು ದಿನ ದೂಡುವುದೇ ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಶಾಲಾ ಶುಲ್ಕ ಹೊರೆಯಾಗಿ, ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ ಎಂಬ ಉದ್ದೇಶದಿಂದ ಸಂಪೂರ್ಣ ಶುಲ್ಕ ವಿನಾಯ್ತಿ ನೀಡಿದ್ದೇವೆ. ಹಳ್ಳಿಯಿಂದ ಬರುವ ವಿದ್ಯಾರ್ಥಿಗಳ ಬಸ್‌ಪಾಸ್ ಶುಲ್ಕವನ್ನೂ ಸಂಸ್ಥೆ ಭರಿಸಲಿದೆ. ಜೊತೆಗೆ ನಗರದ ಯಾವುದೇ ಮೂಲೆಯಲ್ಲಿದ್ದರೂ, ಸಂಸ್ಥೆಯಿಂದ ಉಚಿತ ಬಸ್ ಸೇವೆ ಒದಗಿಸುತ್ತೇವೆ.
-ಗಣೇಶ್ ಸಿಂಗ್ ಬ್ಯಾಳಿ, ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ
–ವೀರೇಂದ್ರ ನಾಗಲದಿನ್ನಿ