ವಾಷಿಂಗ್ಟನ್: ಭಾರತದ ಬಳಿಕ ಈಗ ಅಮೆರಿಕದ ಚುನಾವಣಾ ರಾಜಕೀಯದಲ್ಲೂ “ಕೋವಿಡ್ ಲಸಿಕೆ’ ಸದ್ದು ಮಾಡಿದೆ. ನ.3ರ ಚುನಾವಣೆಯಲ್ಲಿ ಒಂದು ವೇಳೆ ಗೆದ್ದರೆ, ಸಮಸ್ತ ಅಮೆರಿಕನ್ನರಿಗೆ ಉಚಿತ ಕೋವಿಡ್-19 ಲಸಿಕೆ ನೀಡುವುದಾಗಿ ಡೆಮಾಕ್ರಾಟ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಘೋಷಿಸಿದ್ದಾರೆ.
ಲಸಿಕೆ ಪೂರೈಕೆ ಬಗ್ಗೆ ಇನ್ನೂ ಸ್ಪಷ್ಟ ಯೋಜನೆ ಇಟ್ಟುಕೊಳ್ಳದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಈ ಮೂಲಕ ಬೈಡೆನ್ ನೇರ ಸವಾಲು ಹಾಕಿದ್ದಾರೆ.
ತವರು ನೆಲ ಡೆಲಾವೇರ್‌ನಲ್ಲಿ ಪ್ರಚಾರ ಭಾಷಣ ಮಾಡಿದ ಬೈಡೆನ್, “ಕೋವಿಡ್ ಲಸಿಕೆಯ ಡೋಸ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸಬಹುದಾದ್ದರಿಂದ ನಾವು ಇದನ್ನು ಉಚಿತವಾಗಿ ಪೂರೈಸಬಹುದು. ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಒಮ್ಮೆ ಕೈಸೇರಿದ್ದೇ ಆದಲ್ಲಿ ಎಲ್ಲರಿಗೂ ಉಚಿತವಾಗಿ ಒದಗಿಸುತ್ತೇವೆ. ಇನ್ಶೂರೆನ್ಸ್ ಇದ್ದವರಷ್ಟೇ ಅಲ್ಲ, ವಿಮೆ ಇಲ್ಲದವರು ಅಥವಾ ಮಡಿಕೇಡ್ ಸೌಲಭ್ಯಕ್ಕೆ ಅರ್ಹರಾದವರಿಗೂ ಇದನ್ನು ಪೂರೈಸಬಹುದು’ ಎಂದು ಸ್ಪಷ್ಟಪಡಿಸಿದ್ದಾರೆ.
“ಟ್ರಂಪ್ ನೀತಿಗಳಿಂದ ಕೋವಿಡ್-19 ಯುದ್ಧದಲ್ಲಿ 2,20,000 ಮಂದಿ ಕಳೆದುಕೊಂಡಿದ್ದೇವೆ. ಸರಕಾರದ ಆಡಳಿತ ವೈಫಲ್ಯದ ಕಾರಣಕ್ಕೆ ನಾವು ಕೈದಿಗಳಾಗಿ ಕೂರಬೇಕಾಗಿಲ್ಲ. ಬದಲೀ ಮಾರ್ಗ ಆರಿಸಿಕೊಳ್ಳಬೇಕಿದೆ’ ಎಂದು ಕರೆಕೊಟ್ಟಿದ್ದಾರೆ.
ಈ ನಡುವೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಶನಿವಾರ ಬೆಳಗ್ಗೆ ಹಕ್ಕು ಚಲಾಯಿಸಿದ್ದಾರೆ. ಬಳಿಕ ಮಾತನಾಡಿದ ಅವರು, “ನಾನು ಟ್ರಂಪ್ ಎಂಬ ಹೆಸರಿನ ವ್ಯಕ್ತಿಗೆ ಮತ ನೀಡಿದ್ದೇನೆ’ ಎಂದು ಹೇಳಿದ್ದಾರೆ.