ನವದೆಹಲಿ: ಮುಂದಿನ 75 ದಿನಗಳ ವಿಶೇಷ ಅಭಿಯಾನದಡಿ ಸರ್ಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ 18 ವರ್ಷದಿಂದ ಮೇಲ್ಪಟ್ಟ ಹಾಗೂ 59 ವರ್ಷದೊಳಗಿನ ವಯಸ್ಕರಿಗೆ ಕೋವಿಡ್ ನ ಉಚಿತ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಅಧಿಕಾರಿಗಳು ಬುಧವಾರ (ಜುಲೈ 13) ತಿಳಿಸಿದ್ದಾರೆ.
ಇದನ್ನೂ ಓದಿ:ಮೋದಿಯವರನ್ನು ಟೀಕಿಸುತ್ತಿಲೇ ಕಾಂಗ್ರೆಸ್ ಸರ್ವನಾಶ ಆಗುತ್ತಿದೆ: ವಿ. ಶ್ರೀನಿವಾಸ ಪ್ರಸಾದ್
ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮದ ಅಂಗವಾಗಿ ಉಚಿತ ಬೂಸ್ಟರ್ ಡೋಸ್ ಅಭಿಯಾನ ನಡೆಯಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
18-59 ವಯೋಮಾನದ 77 ಕೋಟಿ ಜನಸಂಖ್ಯೆಯಲ್ಲಿ ಕೇವಲ ಶೇ.1ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮುನ್ನೆಚ್ಚರಿಕಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಏತನ್ಮಧ್ಯೆ 60 ವರ್ಷದ ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದವರು, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅರ್ಹ 16 ಕೋಟಿ ಜನಸಂಖ್ಯೆ ಬೂಸ್ಟರ್ ಡೋಸ್ ಅನ್ನು ಪಡೆದುಕೊಂಡಿರುವುದಾಗಿ ಪಿಟಿಐ ನ್ಯೂಸ್ ವರದಿ ಮಾಡಿದೆ.
ದೇಶದಲ್ಲಿನ ಗರಿಷ್ಠ ಪ್ರಮಾಣದ ಜನಸಂಖ್ಯೆ ಸುಮಾರು 9 ತಿಂಗಳ ಹಿಂದೆಯೇ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿತ್ತು. ಎರಡು ಲಸಿಕೆಗಳ ರೋಗ ನಿರೋಧಕ ಶಕ್ತಿಯ ಪ್ರಮಾಣ ಅಂದಾಜು ಆರು ತಿಂಗಳವರೆಗೆ ಮಾತ್ರ ಇರಲಿದ್ದು, ಈ ನಿಟ್ಟಿನಲ್ಲಿ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸಲು ಬೂಸ್ಟರ್ ಡೋಸ್ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.