Advertisement

ನಾಳೆಯಿಂದ ರಾಜ್ಯದ್ಯಂತ 10 ಸಾವಿರ ಕ್ರೀಡಾಪಟುಗಳಿಗೆ ಉಚಿತ ಕೋವಿಡ್ -19 ಲಸಿಕೆ : ನಾರಾಯಣಗೌಡ

09:39 PM Jun 09, 2021 | Team Udayavani |

ಬೆಂಗಳೂರು : ಕ್ರೀಡಾಪಟುಗಳಿಗೆ ಉಚಿತವಾಗಿ ಕೋವಿಡ್ – 19ನ ಮೊದಲ ಹಂತದ ಲಸಿಕೆಯನ್ನು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಸಹಯೋಗದೊಂದಿಗೆ ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾಳೆ ಈ ಲಸಿಕಾ ಅಭಿಯಾನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನಾ ಇಲಾಖೆ ಸಚಿವ ಡಾ. ನಾರಾಯಣಗೌಡ ಚಾಲನೆ ನೀಡಲಿದ್ದಾರೆ.

Advertisement

ರಾಜ್ಯ ಸರ್ಕಾರವು 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳನ್ನು ಆದ್ಯತಾ ಗುಂಪಿಗೆ ಸೇರಿಸಿದ್ದು, ನೋಂದಣಿ ಮಾಡಿಕೊಂಡ ಕ್ರೀಡಾಪಟುಗಳಿಗೆ ಲಸಿಕೆ ನೀಡಲಿದೆ. ಈಗಾಗಲೆ 2200 ಕ್ರೀಡಾಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, 10 ಮತ್ತು 11 ನೇ ತಾರೀಖಿನಂದು ಇವರಿಗೆ ಲಸಿಕೆ ನೀಡಲಾಗುವುದು. ಇದುವರೆಗು ಹೆಸರನ್ನು ನೋಂದಾಯಿಸಿಕೊಳ್ಳದ ಕ್ರೀಡಾಪಟುಗಳು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಥವಾ ಆಯಾ ರಾಜ್ಯ ಕ್ರೀಡಾ ಸಂಸ್ಥೆಗಳ ಮೂಲಕ ನೋಂದಾಯಿಸಿಕೊಳ್ಳಬೇಕು.

ಕೋವಿಡ್-19 ಹಿನ್ನೆಲೆಯಲ್ಲಿ ಕೋವಿಡ್ ತಡೆ ಮಾರ್ಗಸೂಚಿಗಳ ಪಾಲನೆಯೊಂದಿಗೆ ಅತ್ಯಂತ ಸರಳವಾಗಿ ಯಾವುದೇ ಸಭಾ ಕಾರ್ಯಕ್ರಮವಿಲ್ಲದೇ, ಈ ಲಸಿಕೆ ಅಭಿಯಾನಕ್ಕ 10-06-2021 ರಂದು ಬೆಳಿಗ್ಗೆ 10.30 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ. ನಾರಾಯಣಗೌಡ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಕ್ರೀಡಾಪಟುಗಳಿಗೆ ಲಸಿಕೆ ನೀಡಲು ದಿನಾಂಕ ನಿಗದಿ

10-06-2021 ಗುರುವಾರದಂದು ಬಾಸ್ಕೆಟ್‌ಬಾಲ್, ಫೆನ್ಸಿಂಗ್, ಈಜು, ಹಾಕಿ, ಟೆನ್ನಿಕಾಯ್ಸ್, ಬ್ಯಾಡ್ಮಿಂಟನ್, ರೋಯಿಂಗ್ ಮತ್ತು ನೆಟ್‌ಬಾಲ್ ಕ್ರೀಡೆಗಳ ಕ್ರೀಡಾಪಟುಗಳಿಗೆ ಹಾಗೂ 11-06-2021 ಶುಕ್ರವಾರದಂದು ವುಶು, ಶೂಟಿಂಗ್, ಹ್ಯಾಂಡ್‌ಬಾಲ್, ಫುಟ್ಬಾಲ್ ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್, ವಾಲಿಬಾಲ್ ಮತ್ತು ರೋಲರ್ ಸ್ಕೇಟಿಂಗ್ ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು. ರಾಜ್ಯಾಧ್ಯಂತ 10 ಸಾವಿರಕ್ಕು ಹೆಚ್ಚು ಕ್ರೀಡಾಪಟುಗಳಿಗೆ ಲಸಿಕೆ ನೀಡಲಾಗುವುದು. ಈಗಾಗಲೆ ನೋಂದಣಿ ಮಾಡಿಸಿಕೊಂಡವರನ್ನು ಹೊರತುಪಡಿಸಿ ಉಳಿದ ಕ್ರೀಡಾಪಟುಗಳಿಗೆ ಲಸಿಕಾ ಅಭಿಯಾನವನ್ನು ಮುಂದುವರೆಸಿ ಮುಂದಿನ ದಿನಗಳಲ್ಲಿ ನೀಡಲಾಗುವುದು.

Advertisement

ಕ್ರೀಡಾಪಟುಗಳು ರಾಜ್ಯದ, ರಾಷ್ಟ್ರದ ಹೆಮ್ಮೆ. ಅವರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿ. ಹೀಗಾಗಿ ಕ್ರೀಡಾಪಟುಗಳಿಗಾಗಿಯೇ ಪ್ರತ್ಯೇಕವಾಗಿ ಲಸಿಕಾ ಅಭಿಯಾನ ಆರಂಭಿಸಲಾಗುತ್ತಿದೆ. ಪ್ರತಿಯೊಬ್ಬ ಅರ್ಹ ಕ್ರೀಡಾಪಟುಗಳು ಹೆಸರು ನೋಂದಾಯಿಸಿಕೊಂಡು ನಿಗದಿತ ದಿನಾಂಕದಂದು ಲಸಿಕೆ ಪಡೆದುಕೊಳ್ಳಬೇಕು. ಕೇವಲ ಎರಡು ದಿನ ಮಾತ್ರವಲ್ಲ, ಎಲ್ಲ ಕ್ರೀಡಾಪಟುಗಳಿಗೆ ಲಸಿಕೆ ನೀಡುವವರೆಗೆ ಈ ಅಭಿಯಾನ ನಡೆಯಲಿದೆ ಎಂದು ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next