ಬೀದರ: ಕಾಂಗ್ನಿಜೆಂಟ್ ತಂತ್ರಜ್ಞಾನ ವತಿಯಿಂದ ಉಚಿತವಾಗಿ ನೀಡಲಾದ 10 ಕಂಪ್ಯೂಟರ್‌ಗಳನ್ನು ರೋಟರಿ ಕ್ಲಬ್ ಆಫ್ ಬೀದರ ನ್ಯೂ ಸೆಂಚುರಿಯು ತಾಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿತರಿಸಿದೆ.
ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕ್ಲಬ್ ಅಧ್ಯಕ್ಷ ಡಾ| ನಿತೇಶಕುಮಾರ ಬಿರಾದಾರ ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಿ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ವಿತರಿಸಲು ಕಾಂಗ್ನಿಜೆಂಟ್ ತಂತ್ರಜ್ಞಾನವು ರಾಜ್ಯ ಸರ್ಕಾರಕ್ಕೆ ಕಂಪ್ಯೂಟರ್ ಗಳನ್ನು ಉಚಿತವಾಗಿ ನೀಡಿದೆ. ಸರ್ಕಾರ, ಕಂಪ್ಯೂಟರ್ ಸಾಗಣೆ ಸೇರಿದಂತೆ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ರೋಟರಿ ಸಂಸ್ಥೆಗೆ ವಹಿಸಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಣಕಯಂತ್ರದ ಜ್ಞಾನ ಅತ್ಯಗತ್ಯವಾಗಿದೆ. ವಿದ್ಯಾರ್ಥಿಗಳು ಉಚಿತ ಕಂಪ್ಯೂಟರ್‌ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈಗಾಗಲೇ ಚಿಟಗುಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 30 ಕಂಪ್ಯೂಟರ್ ಗಳನ್ನು ಕೊಡಲಾಗಿದೆ. ಜಿಲ್ಲೆಯ ಇನ್ನೂ ಅನೇಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಉಚಿತ ಕಂಪ್ಯೂಟರ್ ಒದಗಿಸುವ ಯೋಜನೆ ಇದೆ ಎಂದು ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ| ಶಿವಕುಮಾರ ಯಲಾಲ್ ತಿಳಿಸಿದರು.
ಪ್ರಾಚಾರ್ಯ ಪ್ರೊ| ವಿನಾಯಕ ಕೋತಮಿರ ಮಾತನಾಡಿ, ರೋಟರಿ ಸಂಸ್ಥೆ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದೆ. ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ವಿಶೇಷ ಕಾಳಜಿ ವಹಿಸುತ್ತಿದೆ. ಕಾಲೇಜಿಗೆ ಉಚಿತವಾಗಿ ಕಂಪ್ಯೂಟರ್‌ಗಳನ್ನು ಒದಗಿಸಿದ್ದರಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲಿದೆ ಎಂದು ಹೇಳಿದರು.
ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ನಿತಿನ್ ಕರ್ಪೂರ, ಸದಸ್ಯರಾದ ಸತೀಶ ಸ್ವಾಮಿ, ಸಚ್ಚಿದಾನಂದ ಚಿದ್ರೆ, ರಾಜಕುಮಾರ ಅಳ್ಳೆ, ಡಾ| ಲೋಕೇಶ ಹಿರೇಮಠ, ಕಾಲೇಜಿನ ಡಾ| ಹೇಮಾವತಿ ಪಾಟೀಲ, ಊರ್ವಶಿ ಕೂಡ್ಲಿ ಮೊದಲಾದವರು ಇದ್ದರು. ಪ್ರಾಧ್ಯಾಪಕ ಡಾ| ಸಂಜೀವಕುಮಾರ ತಾಂದಳೆ ನಿರೂಪಿಸಿದರು. ಮಹೇಶಕುಮಾರ ವಂದಿಸಿದರು.