Advertisement

“ಎಂಆರ್‌ಪಿ”ಯಲ್ಲಿ ಕಾಮಿಡಿ ಉಚಿತ 

10:43 PM Aug 01, 2019 | mahesh |

“ಎಂಆರ್‌ಪಿ…
ಬಹುಶಃ ಈ ಪದದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಪ್ರತಿಯೊಂದು ವಸ್ತುವಿನ ಮೇಲೆ ಬರೆದಿರುವಂತಹ ಪದವಿದು. ಆಯಾ ವಸ್ತುವಿನ ದರವನ್ನು ಇದು ಸೂಚಿಸುತ್ತದೆ. ಇಲ್ಲೀಗ ಹೇಳಹೊರಟಿರುವ ವಿಷಯ, “ಎಂಆರ್‌ಪಿ’ ಎಂಬ ಸಿನಿಮಾ ಕುರಿತು. ಈಗಾಗಲೇ ಸದ್ದಿಲ್ಲದೆಯೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಒಂದು ಹಾಡನ್ನು ಬಾಕಿ ಉಳಿಸಿಕೊಂಡಿದೆ. ಚಿತ್ರದ ಬಗ್ಗೆ ಹೇಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದ ಚಿತ್ರತಂಡ ಮಾತಿಗೆ ಕುಳಿತಿತ್ತು. ಚಿತ್ರಕ್ಕೆ ಬಾಹುಬಲಿ ನಿರ್ದೇಶಕರು. ಈ ಹಿಂದೆ “ನನ್‌ ಮಗಳೇ ಹಿರೋಯಿನ್‌’ ಸಿನಿಮಾ ನಿರ್ದೇಶಿಸಿದ್ದ ಬಾಹುಬಲಿಗೆ ಇದು ಎರಡನೇ ಸಿನಿಮಾ. ಆ ಚಿತ್ರ ನಿರ್ಮಿಸಿದ್ದ ಮೋಹನ್‌, ಕಥೆ ಕೇಳಿದ ಕೂಡಲೇ ನಿರ್ದೇಶಕ ಎಂ.ಡಿ.ಶ್ರೀಧರ್‌, ಛಾಯಾಗ್ರಾಹಕ ಕೃಷ್ಣಕುಮಾರ್‌ (ಕೆಕೆ) ಅವರೊಂದಿಗೆ ಚರ್ಚಿಸಿದ್ದಾರೆ. ಕಥೆ ಕೇಳಿದ ಶ್ರೀಧರ್‌, ಕೆಕೆ ಕೂಡ ನಿರ್ಮಾಣದಲ್ಲಿ ಸಾಥ್‌ ಕೊಟ್ಟಿದ್ದಾರೆ. ಇವರೊಂದಿಗೆ ರಂಗಸ್ವಾಮಿ ಕೂಡ ಕೈ ಜೋಡಿಸಿದ್ದಾರೆ.

Advertisement

ಎಂ.ಡಿ.ಶ್ರೀಧರ್‌ ಅವರು ನಿರ್ದೇಶಕ ಬಾಹುಬಲಿ ಅವರ ಗುರು. ಒಳ್ಳೆಯ ಕಥೆ ಮಾಡಿಕೊಂಡಿದ್ದರಿಂದ ಶ್ರೀಧರ್‌ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರದ ಬಗ್ಗೆ ಬಾಹುಬಲಿ ಅವರಿಗೆ ತುಂಬಾ ವಿಶ್ವಾಸವಿದೆ. ಆ ಬಗ್ಗೆ ಹೇಳುವ ಬಾಹುಬಲಿ, “ಎಂಆರ್‌ಪಿ ಅಂದರೆ, ಎಲ್ಲರಿಗೂ ಬಾರ್‌ ನೆನಪಾಗುತ್ತೆ. ಇಲ್ಲಿ ಎಂಆರ್‌ಪಿ ಅಂದರೆ ಮೋಸ್ಟ್‌ ರೆಸ್ಪಾನ್ಸಿಬಲ್‌ ಪರ್ಸನ್‌ ಎಂದರ್ಥ. ಇದೊಂದು ಪಕ್ಕಾ ಕಾಮಿಡಿ ಸಿನಿಮಾ. ಅವರ ದೇಹಕ್ಕೆ ಅವರವರೇ ಜವಾಬ್ದಾರಿ ಆಗುತ್ತಾರೆ ವಿನಃ ಬೇರೆ ಯಾರೂ ಆಗಲ್ಲ. ತಮ್ಮ ದೇಹದ ಜವಾಬ್ದಾರಿ ಏನೆಂಬುದು ಅವರಿಗಷ್ಟೇ ಗೊತ್ತಿರುತ್ತೆ. ಇಲ್ಲಿರುವ ಹೀರೋ ಕೂಡ ತುಂಬಾ ಜವಾಬ್ದಾರಿ ಇರುವ ವ್ಯಕ್ತಿ. ಅದು ಹೇಗೆ ಎಂಬುದನ್ನು ಕಾಮಿಡಿ ರೂಪದಲ್ಲಿ ತೋರಿಸಲಾಗಿದೆ. ಚಿತ್ರಕ್ಕೆ ಹರಿ ಹೀರೋ ಆಗಿದ್ದಾರೆ. ಚಿತ್ರದ ಪಾತ್ರಕ್ಕೆ ದಪ್ಪನೆಯ ಕಲಾವಿದ ಬೇಕಿತ್ತು. ಎಲ್ಲರೂ ಹರಿ ಅವರ ಆಯ್ಕೆ ಒಪ್ಪಿದ್ದರಿಂದ ಅವರನ್ನು ಹೀರೋ ಮಾಡಲಾಗಿದೆ. ಚಿತ್ರದಲ್ಲಿ ಅವರೇ ಹೈಲೈಟ್‌. ಚಿತ್ರದಲ್ಲಿ ಹಾಸ್ಯವೊಂದೇ ಅಲ್ಲ, ಹರಿ ಡ್ಯಾನ್ಸ್‌ ಮಾಡಿದ್ದಾರೆ. ಫೈಟ್‌ ಕೂಡ ಮಾಡಿದ್ದಾರೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು’ ಅಂದರು ಬಾಹುಬಲಿ.

ನಿರ್ಮಾಪಕ ಎಂ.ಡಿ.ಶ್ರೀಧರ್‌ ಮಾತನಾಡಿ, “ಬಾಹುಬಲಿ ನನ್ನ ಸಿನಿಮಾಗಳ ಕೋ ಡೈರೆಕ್ಟರ್‌ ಆಗಿದ್ದವರು. ಅವರ “ನನ್‌ ಮಗಳೇ ಹೀರೋಯಿನ್‌’ ಸಿನಿಮಾ ನೋಡಿದ್ದೆ. ಚೆನ್ನಾಗಿತ್ತು. ಇಲ್ಲಿ ನಾನು ನಿರ್ಮಾಪಕ ಅಂತೇನೂ ಇಲ್ಲ, ಇದೊಂದು ಟೀಮ್‌ ವರ್ಕ್‌ನಿಂದ ಮಾಡಿರುವ ಚಿತ್ರ. ಎಲ್ಲಾ ತಂತ್ರಜ್ಞರು ಸೇರಿ ಮಾಡಿದ ಚಿತ್ರ. ಹೊಸ ರೀತಿಯ ಕಥೆ ಇಲ್ಲಿದೆ. ದಪ್ಪಗಿರುವ ವ್ಯಕ್ತಿಯ ಬದುಕಲ್ಲಿ ಏನೆಲ್ಲಾ ನಡೆಯುತ್ತೆ ಎಂಬುದನ್ನೇ ಹಾಸ್ಯ ರೂಪವಾಗಿ ತೋರಿಸಲಾಗಿದೆ. ಇನ್ನು, ಹರಿ ನನ್ನ “ಫ್ರೆಂಡ್ಸ್‌’ ಸಿನಿಮಾದಿಂದಲೂ ಜೊತೆಗಿದ್ದವರು. ಸಣ್ಣಪುಟ್ಟ ಪಾತ್ರ ಮಾಡಿಕೊಂಡೇ ಇದ್ದವರಿಗೆ ಈ ಕಥೆ, ಪಾತ್ರ ಸರಿಹೊಂದುತ್ತೆ ಎಂಬ ಕಾರಣಕ್ಕೆ ಅವರನ್ನು ಒಪ್ಪಿಸಿ ಚಿತ್ರ ಮಾಡಿದ್ದೇವೆ’ ಎಂದರು ಶ್ರೀಧರ್‌.

ಕೃಷ್ಣಕುಮಾರ್‌ ಅವರಿಗಿಲ್ಲಿ, ತಂತ್ರಜ್ಞರು ಸೇರಿ ಮಾಡಿದ ಸಿನಿಮಾ ಅಂತ ಹೇಳಿ ಕೊಳ್ಳಲು ಹೆಮ್ಮೆ ಎನಿಸುತ್ತದೆಯಂತೆ. ಈ ಚಿತ್ರ ಮಾಡೋಕೆ ಕಾರಣ, ಕಥೆ ಎಂದರು ಅವರು.

ಮೋಹನ್‌ಕುಮಾರ್‌ ಅವರು, “ನನ್‌ ಮಗಳೇ ಹೀರೋಯಿನ್‌’ ಸಿನಿಮಾ ಬಳಿಕ ಇನ್ನೊಂದು ಚಿತ್ರ ಮಾಡೋಣ ಅಂತ ಹೇಳಿದ್ದರಂತೆ. ಅದರಂತೆ, ಬಾಹುಬಲಿ ಹೇಳಿದ ಕಥೆ ಕೇಳಿದ ಕೂಡಲೇ, ಎಂ.ಡಿ.ಶ್ರೀಧರ್‌, ಕೆ.ಕೆ ಅವರ ಬಳಿ ಚರ್ಚಿಸಿ, ಚಿತ್ರ ಮಾಡಿದ್ದಾಗಿ ಹೇಳಿಕೊಂಡರು.

Advertisement

ನಾಯಕ ಹರಿ ಅವರಿಗೆ ಇಂಥದ್ದೊಂದು ಅವಕಾಶ ಸಿಗುತ್ತೆ ಅಂತ ಗೊತ್ತೇ ಇರಲಿಲ್ಲವಂತೆ. “ಶ್ರೀಧರ್‌ ಸರ್‌, ನನ್ನ ಗುರು. ಅವರ ಎಲ್ಲಾ ಚಿತ್ರಗಳಲ್ಲೂ ನನಗೆ ಅವಕಾಶ ಕೊಟ್ಟಿದ್ದಾರೆ. ಇದೊಂದು ಹಾಸ್ಯದ ಚಿತ್ರ. ಬಾಹುಬಲಿ ಅವರು ಕಥೆ ಹೇಳಿದಾಗ, ನಾನೇ ಮೇನ್‌ ಲೀಡ್‌ ಅಂತ ಗೊತ್ತಿರಲಿಲ್ಲ. ನನ್ನಿಂದ ಇದು ಸಾಧ್ಯನಾ ಎಂಬ ಪ್ರಶ್ನೆಯೂ ಇತ್ತು. ಆದರೆ, ಎಲ್ಲರೂ ಸಹಕರಿಸಿ, ಪ್ರೋತ್ಸಾಹ ನೀಡಿದ್ದರಿಂದ ನಟಿಸಲು ಸಾಧ್ಯವಾಗಿದೆ. ಕಳೆದ ಒಂದು ವರ್ಷದಿಂದಲೂ ಚಿತ್ರಕ್ಕಾಗಿ ಶ್ರಮ ಪಟ್ಟಿದ್ದೇವೆ. ಇದಕ್ಕಾಗಿ ನಾವು ತರಬೇತಿಯನ್ನೂ ಪಡೆದಿದ್ದೇವೆ’ ಎಂದರು ಹರಿ.

ವಿಜಯ್‌ ಚೆಂಡೂರ್‌ ಅವರಿಗಿಲ್ಲಿ ಹತ್ತು ಬಗೆಯ ಗೆಟಪ್‌ಗ್ಳಿವೆಯಂತೆ. “ಒಳ್ಳೆಯ ಅನುಭವ ಕೊಟ್ಟ ಚಿತ್ರವಿದು. ಹಾಸ್ಯಕ್ಕೆ ಕೊರತೆ ಇಲ್ಲ. ಇಡೀ ಚಿತ್ರದಲ್ಲಿ ಸಾಕಷ್ಟು ಮೌಲ್ಯವೂ ಇದೆ’ ಎಂದರು ವಿಜಯ್‌ ಚೆಂಡೂರ್‌.

ಹರ್ಷವರ್ಧನ್‌ ರಾಜ್‌ ಸಂಗೀತವಿದೆ. ಈ ಚಿತ್ರದ ಮೂಲಕ ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್‌ ಅವರು ಎಲ್‌.ಎಂ.ಸೂರಿ ಎಂದು ನಾಮಕರಣ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next