ಐಗಳಿ: ಪ್ರತಿಯೊಬ್ಬರೂ ತಮ್ಮ ಜೀವನದ ಆದಾಯದಲ್ಲಿನ ಸ್ವಲ್ಪ ಭಾಗವನ್ನು ಸಮಾಜಸೇವೆಗೆ ತೆಗೆದಿಟ್ಟು ಸಮಾಜದ ಋಣ ತೀರಿಸಬೇಕು ಎಂದು ನದಿಇಂಗಳಗಾಂವದ ಪ.ಪೂ. ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ಐಗಳಿ ಕ್ರಾಸ್ ಮಾಣಿಕಪ್ರಭು ಶಿಕ್ಷಣ ಸಂಸ್ಥೆಯಲ್ಲಿ ಊಟಿಯ ನೇತ್ರಾ ಗ್ರೂಪ್ಸ್ ನೇತ್ರಾ ಕ್ರಾಪ್ ಸೈನ್ಸ್ ಬೆಂಗಳೂರು ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಮಕ್ಕಳಿಗೆ ಉಚಿತ ಬಟ್ಟೆ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ತೆರೆಮರೆಯಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಕೃಷಿಕ, ಸೈನಿಕ, ಶಿಕ್ಷಕ ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ದಾನಿಗಳು ಕೊಟ್ಟ ಕಲಿಕಾ ಸಾಮಗ್ರಿಗಳನ್ನು ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತೆಲಸಂಗ ವೀರೇಶ್ವರ ದೇವರು ಆಶೀರ್ವಚನ ನೀಡಿ, ಇಂದಿನ ಯುವಕರು ಹಿರಿಯರು ಗಳಿಸಿಟ್ಟ ಆಸ್ತಿ ಇದ್ದರೂ ಕೃಷಿಯಲ್ಲಿ ತೊಡಗದೇ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ಮುಖ್ಯವಾಗಿ ದೇಶದಲ್ಲಿ ನಿರುದ್ಯೋಗ ಹೋಗಲಾಡಿಸಲು ಯುವಕರು ಕೃಷಿಯಲ್ಲಿ ತೊಡಗಬೇಕು ಎಂದರು.
ಇದೇ ಸಂದರ್ಭದಲ್ಲಿ ತಮ್ಮ ಇಡೀ ಜೀವನವನ್ನೇ ಕೃಷಿಗೆ ಮುಡಿಪಾಗಿಟ್ಟ ಆದರ್ಶ ಕೃಷಿಕ ಶಿವಪ್ಪ ರೊಟ್ಟಿ ದಂಪತಿಯನ್ನು ಸತ್ಕರಿಸಲಾಯಿತು.
ಹೊನವಾಡದ ಬಾಬುರಾವ ಮಹಾರಾಜರು, ಪ್ರೊ| ಸುರೇಶ ಅಂಬಲಿ ಮಾತನಾಡಿದರು. ಈ ಸಂದರ್ಭದಲ್ಲಿ ನೇತ್ರಾ ಕ್ರಾಪ್ ಸೈನ್ಸ್ ನಿರ್ದೇಶಕ ಸಾತವೀರ ರೊಟ್ಟಿ, ನೇತ್ರಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಸೆಲ್ವರಾಜ್ ಎಚ್, ಸಂಸ್ಥೆಯ ಅಧ್ಯಕ್ಷ ಸಿ.ಎಚ್. ಪಾಟೀಲ, ಗ್ರಾಮದ ಹಿರಿಯರಾದ ಸಿ.ಎಸ್. ನೇಮಗೌಡ, ಈರಣ್ಣ ಕುಮಠಳ್ಳಿ ಇತರರು ಇದ್ದರು.