Advertisement
ಕ್ಯಾನ್ಸರ್ ರೋಗವನ್ನು ಶೀಘ್ರ ಪತ್ತೆ ಮಾಡಿ ನಗರವಾಸಿಗಳನ್ನು ರಕ್ಷಿಸುವಲ್ಲಿ ವಾರಕ್ಕೊಂದು ವಾರ್ಡ್ ನಂತೆ ಎಲ್ಲಾ ವಾರ್ಡ್‌ಗಳಲ್ಲಿಯೂ ಉಚಿತವಾಗಿ ಕ್ಯಾನ್ಸರ್ ಪತ್ತೆಗೆ ತಪಾಸಣಾ ಶಿಬಿರಗಳನ್ನು ನಡೆಸುವ ಕುರಿತು ಕಿದ್ವಾಯಿ ಸ್ಮಾರಕ ಗ್ರಂಥಿ ಹಾಗೂ ಬಿಬಿಎಂಪಿ ಚರ್ಚಿಸಿದ್ದು, ಈ ತಿಂಗಳಲ್ಲಿಯೇ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
Related Articles
Advertisement
ಜೀವನ ಶೈಲಿ ಬದಲಾವಣೆಯಿಂದ ಕ್ಯಾನ್ಸರ್: ಮಹಾನಗರಗಳ ಜೀವನ ಶೈಲಿ ಹಳ್ಳಿಗಿಂತಲೂ ಸಾಕಷ್ಟು ಭಿನ್ನವಾಗಿದೆ. ಇಲ್ಲಿನ ಆಹಾರ, ಗಾಳಿ, ನೀರು, ಪ್ಲಾಸ್ಟಿಕ್ ಬಳಕೆ, ಒತ್ತಡದ ಜೀವನವು ಪ್ರಮುಖ ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತವೆ. ಜತೆಗೆ ಮದ್ಯ ಹಾಗೂ ಧೂಮಪಾನ, ಚಟುವಟಿಕೆ ಇಲ್ಲದ ಜೀವನದಿಂದ ಬೊಜ್ಜು, ವಿಳಂಬವಾಗಿ ಮದುವೆ, ತಡವಾಗಿ ಮಕ್ಕಳನ್ನು ಮಾಡಿಕೊಳ್ಳುವುದೂ ನಗರವಾಸಿಗಳಲ್ಲಿ ಸಾಮಾನ್ಯವಾಗಿದ್ದು, ಇವುಗಳಿಂದ ನಗರದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚುತ್ತಿದೆ. ಹೊರಗಿನ ಆಹಾರ ಸೇವನೆ, ಫಾಸ್ಟ್‌ಫುಡ್, ಜಂಗ್‌ಫುಡ್‌ನಿಂದ ಹೊಟ್ಟೆ (ಗ್ಯಾಸ್ಟ್ರಿಕ್) ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಾರೆ.
ಕೊನೆ ಹಂತದ ಪತ್ತೆ: ಹೆಚ್ಚಾಗುತ್ತಿರುವ ಮೃತರ ಪ್ರಮಾಣ; ನಗರದಲ್ಲಿ ಸುಶಿಕ್ಷಿತರಲ್ಲೇ ಹೆಚ್ಚಾಗಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದ್ದು ಆರಂಭಿಕ ಹಂತದಲ್ಲೇ ಪತ್ತೆಯಾಗದಿರುವ ಕಾರಣ ಮೃತರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಯಾದರೆ ಶೇ. 80ಕ್ಕಿಂತ ಹೆಚ್ಚು ರೋಗಿಗಳು ಗುಣಮುಖರಾಗಬಹುದು. ಮೊದಲನೇ ಮತ್ತು ಎರಡನೇ ಹಂತದಲ್ಲಿದ್ದಾಗ ಶೇ.20 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗ ಮೂರನೇ ಹಂತ ತಲುಪಿದಾಗ ಶೇ.65ರಷ್ಟು ಮಂದಿ ಚಿಕಿತ್ಸೆಗೆ ಧಾವಿಸುತ್ತಾರೆ. ಇನ್ನು ಕೊನೆಯ ಹಂತ ಅಂದರೆ ರೋಗವು ದೇಹ ಪೂರ್ತಿ ವ್ಯಾಪಿಸಿದ ಬಳಿಕ ಹಂತದಲ್ಲಿ ಶೇ.15 ರಷ್ಟು ಮಂದಿ ಚಿಕಿತ್ಸೆಗೆ ಬರುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ.
ಸ್ತನ ಕ್ಯಾನ್ಸರ್; ಕಿದ್ವಾಯಿಯಲ್ಲಿ ಉಚಿತ ಪರೀಕ್ಷೆ : ಅಧ್ಯಯನದ ಪ್ರಕಾರ ರಾಜ್ಯದಲ್ಲಿ ವಾರ್ಷಿಕವಾಗಿ ಒಂದು ಲಕ್ಷ ಮಂದಿಯಲ್ಲಿ 24 ರಿಂದ 26 ಮಂದಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿರುವುದು ಕಂಡುಬಂದಿದೆ. ಬೆಂಗಳೂರಿನಲ್ಲಿ ಒಂದು ಲಕ್ಷ ಮಂದಿಯಲ್ಲಿ 34 ಮಂದಿಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ವಾರ್ಷಿಕವಾಗಿ ದಾಖಲಾಗುತ್ತಿರುವ 19 ಸಾವಿರ ಹೊಸ ಕ್ಯಾನ್ಸರ್ ರೋಗಿಗಳ ಪೈಕಿ ಶೇ.15 ಮಂದಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸದ್ಯ ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಸ ನಡೆಯುತ್ತಿದ್ದು, ಕಿದ್ವಾಯಿ ಗ್ರಂಥಿ ಸಂಸ್ಥೆಯಲ್ಲಿ ಒಂದು ತಿಂಗಳು ಉಚಿತವಾಗಿ ಸ್ತನ ಕ್ಯಾನ್ಸರ್ ಪತ್ತೆಗೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.
ವ್ಯಕ್ತಿಯಲ್ಲಿ ಕ್ಯಾನ್ಸರ್ ಶೀಘ್ರ ಪತ್ತೆಯಾದರೆ ಸಂಪೂರ್ಣ ಗುಣಮುಖರಾಗಬಹುದು. ಕ್ಯಾನ್ಸರ್ ಪತ್ತೆ ವಿಧಾನಗಳು ಸುಲಭವಾಗಿವೆ. ಆ ನಿಟ್ಟಿನಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಹಕಾರದೊಂದಿಗೆ ವಾರ್ಡ್‌ಗಳಲ್ಲಿ ಕ್ಯಾನ್ಸರ್ ಪತ್ತೆ ಶಿಬಿರವನ್ನು ಹಮ್ಮಿಕೊಳ್ಳಲು ಬಿಬಿಎಂಪಿ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ●ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
-ಜಯಪ್ರಕಾಶ್ ಬಿರಾದಾರ್