Advertisement

ಮೇ 25ರಿಂದ ಮೇ 30ರವರೆಗೆ ಉಡುಪಿಯಲ್ಲಿ ಉಚಿತ ಸಿಟಿ ಬಸ್ಸು ಸಂಚಾರ

07:08 PM May 24, 2020 | sudhir |

ಉಡುಪಿ: ಕೋವಿಡ್ ವೈರಸ್‌ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹಾಗೂ ಜನರಿಗೆ ಸೇವೆ ನೀಡುವ ಆಕಾಂಕ್ಷೆಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ, ಆಸರೆ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಉಡುಪಿ ಸಿಟಿ ಬಸ್‌ ಮಾಲಕರ ಸಹಯೋಗದಲ್ಲಿ ಮೇ 25ರಿಂದ ಮೇ 30ರ ವರೆಗೆ ಆಯ್ದ ರೂಟ್‌ಗಳಲ್ಲಿ ಉಚಿತ ಸಿಟಿ ಬಸ್‌ ಸೇವೆ ಆರಂಭವಾಗಲಿದೆ ಎಂದು ಶಾಸಕ ಕೆ.ರಘುಪತಿ ಭಟ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ರಾಜ್ಯ ಸರಕಾರ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಿದರೂ ಖಾಸಗಿ ಬಸ್‌ ಮಾಲಕರು ಕೆಲವು ಷರತ್ತುಗಳನ್ನು ವಿಧಿಸಿದ್ದರು. ಅದರಂತೆ ರಾಜ್ಯ ಸರಕಾರವು 2 ತಿಂಗಳ ತೆರಿಗೆ ವಿನಾಯಿತಿಯನ್ನು ಕಲ್ಪಿಸಿದೆ. ಸರಕಾರಿ ಸಹಿತ ಕೆಲವು ಖಾಸಗಿ ಬಸ್ಸುಗಳು ಈಗಾಗಲೇ ಸಂಚಾರ ನಡೆಸುತ್ತಿದೆಯಾದರೂ ಬಸ್ಸುಗಳಲ್ಲಿ ಜನವಿರಳವಿದೆ. ಇದನ್ನು ಮನಗಂಡು ಪ್ರಯಾಣಿಕರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂಬ ಉದ್ದೇಶದಿಂದ ಉಚಿತ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಮಾರ್ಗಸೂಚಿಯಂತೆ ಓಡಾಟ

ಬಸ್ಸು ಸಂಚಾರವು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಇರಲಿದೆ. ಆಯ್ದ ರೂಟ್‌ಗಳಲ್ಲಿ ಬಸ್ಸುಗಳ ಸಂಚಾರ ನಡೆಸಲಿವೆ. ಸರಕಾರದ ನಿಯಮಾವಳಿಯಂತೆ ಬಸ್ಸುಗಳನ್ನು ಸ್ಯಾನಿಟೈಸ್‌ ಮಾಡುವುದು, ಮಾಸ್ಕ್ ಧರಿಸುವುದು. ಶೇ. 50 ರಷ್ಟು ಪ್ರಯಾಣಿಕರನ್ನು ಮಾತ್ರ ಹತ್ತಿಸುವುದು, ಸಾಮಾಜಿಕ ಅಂತರ ಸಹಿತ ಎಲ್ಲ ರೀತಿಯ ನಿಯಮಾವಳಿಗಳನ್ನು ಪಾಲಿಸಲಾಗುತ್ತದೆ. ಬಸ್ಸಿನಲ್ಲಿ ಚಾಲಕರು ಮಾತ್ರ ಇರಲಿದ್ದಾರೆ. ಸ್ಥಳೀಯ ವಾರ್ಡ್‌ ಸದಸ್ಯರು ಕೆಲವು ಬಸ್ಸುಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಪ್ರಯಾಣಿಕರು ಮುಂದಿನ ಬಾಗಿಲಿನಿಂದ ಹತ್ತಿ ಹಿಂದಿನ ಬಾಗಿಲಿನಿಂದ ಇಳಿಯಬೇಕು. ಒಂದು ಬಸ್ಸಿನಲ್ಲಿ 30 ಮಂದಿ ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ಇರಲಿದೆ. ದಿನನಿತ್ಯದ ಸಂಚಾರಕ್ಕಾಗಿ ಒಂದು ಬಸ್ಸಿಗೆ ಸುಮಾರು 5 ಸಾವಿರ ರೂ.ಗಳಷ್ಟು ವ್ಯಯವಾಗಲಿದೆ. ಮೇ 25ರಂದು ಸಿಟಿ ಬಸ್ಸು ತಂಗುದಾಣದಲ್ಲಿ ಉಚಿತ ಬಸ್ಸು ಸೌಲಭ್ಯದ ಉದ್ಘಾಟನೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಸಿಟಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳಾದ ಸಂದೀಪ್‌, ಗಣನಾಥ ಹೆಗ್ಡೆ, ಚಂದನ್‌, ವಾದಿರಾಜ್‌, ನಗರಸಭಾ ಸದಸ್ಯ ಗಿರೀಶ್‌ ಅಂಚನ್‌ ಉಪಸ್ಥಿತರಿದ್ದರು.

Advertisement

ಕ್ಯಾಷ್‌ಲೆಸ್‌ ಪ್ರಯಾಣಕ್ಕೆ ಚಲೋ ಟ್ರಾವೆಲ್‌ ಕಾರ್ಡ್‌
ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಚಲೋ ಟ್ರಾವೆಲ್‌ ಕಾರ್ಡ್‌ ಪರಿಚಯಿಸಲಾಗುತ್ತಿದೆ. ಸಿಟಿ ಬಸ್ಸು ಮಾಲಕರ ಸಂಘದಿಂದ ಚಲೋ ಟ್ರಾವೆಲ್‌ ಕಾರ್ಡ್‌ ವಿತರಿಸಲಾಗುತ್ತಿದೆ. ಮೇ 31ರ ವರೆಗೆ ಅದು ಉಚಿತವಾಗಿರಲಿದೆ. ಅನಂತರ ಪ್ರಯಾಣಿಕರು ಒಂದು ಬಾರಿ ರೀಚಾರ್ಜ್‌ ಮಾಡಿಸಿಕೊಂಡರೆ ಹಣ ಮುಗಿಯುವವರೆಗೆ ಉಪಯೋಗಿಸಬಹುದಾಗಿದೆ. ಇದರಿಂದ ಹಣದ ಚಲಾವಣೆ ಮೂಲಕ ಸೋಂಕು ಹರಡುವ ಭೀತಿಯೂ ಜನರಲ್ಲಿ ಕಡಿಮೆಯಾಗಲಿದೆ. ಈ ಕಾರ್ಡ್‌ಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ. ಅದನ್ನು ಪ್ರಯಾಣಿಕರೇ ಟಿಕೆಟ್‌ ಮೆಷಿನ್‌ಗೆ ತೋರಿಸಿದರೆ ಸಾಕಾಗುತ್ತದೆ. ಇದರ ಅಕೌಂಟ್‌ಗೆ ನಿರ್ವಾಹಕನ ಮೂಲಕವೂ ರೀಚಾರ್ಜ್‌ ಮಾಡಿಸಿಕೊಳ್ಳಬಹುದು. ಅಲ್ಲದೆ ಕೆಲವೊಂದು ಹೊಟೇಲ್‌ಗ‌ಳು, ಅಂಗಡಿಗಳು ಸಹಿತ ರೀಚಾರ್ಜ್‌ ಮಾಡಬಹುದಾದ ಕೇಂದ್ರಗಳ ಮಾಹಿತಿಯನ್ನು ಸದ್ಯದಲ್ಲಿಯೇ ನೀಡಲಾಗುವುದು ಎಂದು ಸಿಟಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದರು.

ಬಸ್‌ ರೂಟ್‌ಗಳು
ರೂಟ್‌ ನಂ 1
ಮಲ್ಪೆ-ಗರಡಿಮಜಲು-ಸಂತೆಕಟ್ಟೆ-ಉಡುಪಿ ಸಿಟಿ
ಉಡುಪಿ ಸಿಟಿ-ಸಂತೆಕಟ್ಟೆ-ಗರಡಿಮಜಲು-ಮಲ್ಪೆ

ರೂಟ್‌ ನಂ 2
ಅಲೆವೂರು-ಕೊರಂಗ್ರಪಾಡಿ-ಉಡುಪಿ ಸಿಟಿ-ಮಣಿಪಾಲ-ಜಿಲ್ಲಾಧಿಕಾರಿ ಕಚೇರಿ
ಉಡುಪಿ ಸಿಟಿ-ಡಯಾನ-ಅಲೆವೂರು

ರೂಟ್‌ ನಂ 3
ಹೂಡೆ-ತೊಟ್ಟಂ-ಮಲ್ಪೆ-ಆದಿ ಉಡುಪಿ-ಅಜ್ಜರಕಾಡು-ಉಡುಪಿ ಸಿಟಿ-ಮಣಿಪಾಲ-ಪರ್ಕಳ
ಪರ್ಕಳ-ಉಡುಪಿ ಸಿಟಿ-ಆದಿ ಉಡುಪಿ-ಮಲ್ಪೆ-ತೊಟ್ಟಂ-ಹೂಡೆ

ರೂಟ್‌ ನಂ 4
ಸಂಪಿಗೆ ನಗರ-ಕಡೆಕಾರು-ಅಂಬಲಪಾಡಿ-ಅಜ್ಜರಕಾಡು-ಉಡುಪಿ ಸಿಟಿ-ಮಣಿಪಾಲ-ಪರ್ಕಳ
ಪರ್ಕಳ-ಮಣಿಪಾಲ-ಉಡುಪಿ ಸಿಟಿ-ಅಜ್ಜರಕಾಡು-ಅಂಬಲಪಾಡಿ-ಸಂಪಿಗೆ ನಗರ

ರೂಟ್‌ ನಂ 5
ಪ್ರಗತಿನಗರ-ಮಣಿಪಾಲ-ಉಡುಪಿ-ದೊಡ್ಡಣಗುಡ್ಡೆ-ಪೆರಂಪಳ್ಳಿ ಚರ್ಚ್‌
ಪೆರಂಪಳ್ಳಿ ಚರ್ಚ್‌-ದೊಡ್ಡಣಗುಡ್ಡೆ-ಉಡುಪಿ-ಮಣಿಪಾಲ-ಪ್ರಗತಿನಗರ

ರೂಟ್‌ ನಂ 6
ಕಳತ್ತೂರು-ಸಂತೆಕಟ್ಟೆ-ಚೇರ್ಕಾಡಿ-ಪೇತ್ರಿ-ಬ್ರಹ್ಮಾವರ
ಬ್ರಹ್ಮಾವರ-ಪೇತ್ರಿ-ಚೇರ್ಕಾಡಿ-ಸಂತೆಕಟ್ಟೆ ಕಳತ್ತೂರು

ರೂಟ್‌ ನಂ 7
ಹೂಡೆ-ಕೆಮ್ಮಣ್ಣು-ಸಂತೆಕಟ್ಟೆ-ಅಂಬಾಗಿಲು-ಗುಂಡಿಬೈಲು-ಕಲ್ಸಂಕ-ಉಡುಪಿ ಸಿಟಿ
ಉಡುಪಿ ಸಿಟಿ-ಕರಾವಳಿ ಬೈಪಾಸ್‌-ನಿಟ್ಟೂರು-ಸಂತೆಕಟ್ಟೆ-ಕೆಮ್ಮಣ್ಣು-ಹೂಡೆ

Advertisement

Udayavani is now on Telegram. Click here to join our channel and stay updated with the latest news.

Next