Advertisement

ಮುಂಬಯಿಯಿಂದ ಮಂಗಳೂರಿಗೆ ಉಚಿತ ಬಸ್‌ ಸೇವೆ

08:39 AM May 15, 2020 | mahesh |

ಮುಂಬಯಿ: ಮೂರು ದಿನಗಳ ಮೊದಲು ಮುಂಬಯಿಯಿಂದ ಮಂಗಳೂರಿಗೆ ಬಸ್ಸು ಸೇವೆಯನ್ನು ಪ್ರಾರಂಭಿಸಿ ಅತೀ ಅಗತ್ಯವಿರುವ ತುಳು ಕನ್ನಡಿಗರಿಗೆ ಸಹಕರಿಸಿದ ಉತ್ತರ ಮುಂಬಯಿಯ ಸಂಸದ ಗೋಪಾಲ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸಮಾಜ ಸೇವಕ ಎರ್ಮಾಳ್‌ ಹರೀಶ್‌ ಶೆಟ್ಟಿಯವರ ಪ್ರಯತ್ನದಿಂದ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಬಂಟರ ಸಂಘ ಮುಂಬಯಿಯ ನೂತನ ಯೋಜನೆ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ, ಬಂಟರ ಸಂಘ ಜೋಗೇಶ್ವರಿ – ದಹಿಸರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಮೊದಲಾದವರ ಪ್ರೋತ್ಸಾಹದೊಂದಿಗೆ ಇಂದು ಬೆಳಿಗ್ಗೆ 11 ಗಂಟೆಗೆ ಬೋರಿವಲಿ ಪಶ್ಚಿಮ ಲಿಂಕ್‌ ವ್ಯೂವ್‌ ಹೋಟೇಲಿನಿಂದ ಉಡುಪಿ ಹಾಗೂ ಮಂಗಳೂರಿಗೆ ಉಚಿತ ಬಸ್‌ ಸೇವೆಗೆ ಚಾಲನೆ ನೀಡಲಾಯಿತು.

Advertisement

ಈ ಉಚಿತ ಸೇವೆಗೆ ಚಾಲನೆಯಿತ್ತು ಮಾತನಾಡಿದ ಗೋಪಾಲ ಶೆಟ್ಟಿಯವರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎರ್ಮಾಳ್‌ ಹರೀಶ್‌ ಶೆಟ್ಟಿ, ಮುಂಡಪ್ಪ ಎಸ್‌. ಪಯ್ಯಡೆ ಹಾಗೂ ಇಲ್ಲಿರುವ ಎಲ್ಲ ಗಣ್ಯರು ಜಾತಿ ಭೇದ ಮರೆತು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಅತೀ ಅಗತ್ಯವಿರುವವರಿಗೆ ಮಾತ್ರ ಈ ಸೇವೆಯನ್ನು ಒದಗಿಸಬೇಕು. ಇಂತಹ  ಸೇವೆ ಮಾಡಲು ನಾವು ಹೆಚ್ಚು ಆತುರ ಪಡುವುದು ಬೇಡ. ಯಾಕೆಂದರೆ ಇನ್ನು 3 ದಿನಗಳ ಲಾಕ್‌ಡೌನ್‌ ಇದೆ. ಅಲ್ಲದೆ ಊರಿಗೆ ತಲಪಿ ಅಲ್ಲಿಯೂ 14 ದಿನ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ನಮ್ಮಿಂದ ಊರವರಿಗೂ ತೊಂದರೆಯಾಗದಿರಲಿ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ  ಐಕಳ ಹರೀಶ್‌ ಶೆಟ್ಟಿಯವರು ಮಾತನಾಡಿ ಕಳೆದ  ಎರಡು ತಿಂಗಳಿಂದ ಎರ್ಮಾಳ್‌ ಹರೀಶ್‌ ಶೆಟ್ಟಿ ಯವರು ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ ಹಾಗೂ ರೇಶನ್‌ನ ಸಹಾಯ ಮಾಡಿದ್ದು, ಅತಿಅಗತ್ಯ ವಿರುವವರಿಗೆ ಮೊನ್ನೆ ಬಸ್ಸಿನ ವ್ಯವಸ್ಥೆಯನ್ನು ಮಾಡಿ ಊರಿಗೆ ಕಳುಹಿಸಿದ್ದಾರೆ. ಇಂದು ಧರ್ಮಾರ್ಥ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ ಎಂದರು.

ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮುಂಡಪ್ಪ ಎಸ್‌. ಪಯ್ಯಡೆಯವರು ಊರಿಂದ ಮುಂಬಯಿಗೆ ಬಂದು ಹಿಂದಿರುಗಲು ಅಸಾಧ್ಯವಾದವರಿಗೆ ಮಾತ್ರವಲ್ಲದೆ ಗರ್ಭಿಣಿ ಮಹಿಳೆಯರಿಗೆ ಈ ಉಚಿತ ಸೇವೆಯನ್ನು ನಾವು ಮಾಡಿದ್ದೇವೆ. ಇದಕ್ಕೆ ಗೋಪಾಲ ಶೆಟ್ಟಿಯವರ ಸಹಕಾರವೂ ಇದೆ. ನಮ್ಮ ಈ ಸೇವೆಗೆ ದೇವರ ಆಶೀರ್ವಾದವಿರಲಿ ಎಂದರು.

ರವೀಂದ್ರ ಶೆಟ್ಟಿಯವರು ಮಾತನಾಡುತ್ತಾ ಲಾಕ್‌ ಡೌನ್‌ಗೆ ಮೊದಲು ಮುಂಬಯಿಗೆ ಮಂಗಳೂರು – ಉಡುಪಿಯಿಂದ ಆಗಮಿಸಿ ಇಲ್ಲಿ ಸಿಲುಕಿದ್ದವರಿಗೆ  ಸಹಕರಿಸುವುದು ನಮ್ಮ ಕರ್ತವ್ಯ. ಮಂಗಳೂರ ಲ್ಲಿಯೂ ಶಾಸಕ, ಸಂಸದರು ಹಾಗೂ ಮಂತ್ರಿ ಗಳೊಂದಿಗೆ ಮಾತನಾಡಿ ನಾವು ಈ ವ್ಯವಸ್ಥೆ ಮಾಡಿದ್ದೇವೆ ಎಂದರು. ಮೀರಾ -ಭಾಯಂದರ್‌ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಚ್ಚಿದಾನಂದ ಶೆಟ್ಟಿ ಯವರು ಮಾತನಾಡಿ ವಿದ್ಯಾರ್ಥಿಗಳು ಹಾಗೂ  ಹೋಟೇಲು ಕಾರ್ಮಿಕರು ಹೆಚ್ಚಿನ ತೊಂದರೆ ಗೀಡಾಗಿದ್ದು ಸರಕಾರ ಆದಷ್ಟು ಬೇಗನೆ ಮಂಗಳೂರಿಗೆ ರೈಲು ಸೇವೆ ಆರಂಭಿಸಿ ಹೋಟೇಲು ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವಂತಾಗಲಿ ಎಂದರು. ಉದ್ಯಮಿ ಮಂಜುನಾಥ ಬನ್ನೂರು, ಪ್ರಕಾಶ್‌ ಶೆಟ್ಟಿ ಎಲ್.ಐ. ಸಿ., ಕಾರ್ತಿಕ್‌ ಹರೀಶ್‌ ಶೆಟ್ಟಿ, ನೀಲೇಶ್‌ ಶೆಟ್ಟಿ, ಮಹೇಶ್‌ ಶೆಟ್ಟಿ, ಪ್ರೇಮನಾಥ ಕೋಟ್ಯಾನ…, ರಜಿತ್‌ ಸುವರ್ಣ, ಸಂಕೇಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಲಾಕ್‌ಡೌನ್‌ ಬಳಿಕ ಮಾ.27 ರಿಂದ ಇಂದಿನ ತನಕ ಸುಮಾರು 9 ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದು ಇದೀಗ ಕಳೆದ ಕೆಲವು ದಿನಗಳಿಂದ ನನಗೆ ನೂರಾರು ತುಳು ಕನ್ನಡಿಗರಿಂದ ಪೋನ್‌  ಕರೆಗಳು ಬರುತ್ತಿದ್ದು ಕೇವಲ ಅತೀ ಅಗತ್ಯ ವಿರುವವರಿಗೆ ಮಾತ್ರ ಈ ಉಚಿತ ಸೇವೆ ಯನ್ನು ಒದಗಿಸಿರುವೆನು. ಈ ಬಸ್ಸು 30 ಸೀಟು ಗಳನ್ನು ಹೊಂದಿದ್ದು ಸಾಮಾಜಿಕ ಅಂತರವನ್ನು ಕಾಪಾಡಲು ಕೇವಲ 15 ಮಂದಿ ಮಾತ್ರ ಪ್ರಯಾಣಿ ಸುತ್ತಿರುವರು. ಎಲ್ಲರಿಗೂ ಇ ಪಾಸ್‌ ಸಿಕ್ಕಿದೆ. ಇದಲ್ಲದೆ  ಸಾಮಾಜಿಕ ತಾಣಗಳಲ್ಲಿ ಕೆಲವರು ತಪ್ಪು ಮಾಹಿತಿಯನ್ನು ಜನರಿಗೆ ಕಳುಹಿಸುತ್ತಿದ್ದು ಇದು ಸಲ್ಲದು ಎಂದು ಎರ್ಮಾಳ್‌ ಹರೀಶ್‌ ಶೆಟ್ಟಿ ಹೇಳಿದರು.

ಚಿತ್ರ - ವರದಿ: ಈಶ್ವರ ಎಂ. ಐಲ್‌

Advertisement

Udayavani is now on Telegram. Click here to join our channel and stay updated with the latest news.

Next