Advertisement

ವಿದ್ಯಾರ್ಥಿಗಳ ಉಚಿತ ಬಸ್‌ ಪಾಸ್‌: ಇಕ್ಕಟ್ಟಿನಲ್ಲಿ ಸರ್ಕಾರ

07:00 AM Jul 29, 2018 | |

ಬೆಂಗಳೂರು: ವಿದ್ಯಾರ್ಥಿಗಳ “ಉಚಿತ ಬಸ್‌ ಪಾಸ್‌’ ಕಾರ್ಯಕ್ರಮ ಸರ್ಕಾರವನ್ನು ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಸಿದೆ.
ಹಿಂದಿನ ಕಾಂಗ್ರೆಸ್‌ ಸರ್ಕಾರ ಆರಂಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ನೀಡುವ ಮೂಲಕ “ಬೇಧ-ಭಾವದ ಕಳಂಕ’ಕ್ಕೆ ಗುರಿಯಾಗಿತ್ತು. ಅದರಿಂದ ಹೊರಬರಲು ಎಲ್ಲರಿಗೂ ಈ ಸೌಲಭ್ಯ ನೀಡುವುದಾಗಿ ತನ್ನ ಕೊನೆಯ ಬಜೆಟ್‌ನಲ್ಲಿ ಘೋಷಿಸಿತು. ಈ ನಡುವೆ, ಲಭ್ಯವಿರುವ ಅನುದಾನದಲ್ಲಿ ಕೇವಲ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಿಸಲು ನಿರ್ಧರಿಸಲಾಗಿದೆ. ಆದರೆ, ಸರ್ಕಾರದ್ದೇ ಭಾಗವಾಗಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಈ ಪಾಸ್‌ “ಭಾಗ್ಯ’ ಇಲ್ಲ.

Advertisement

ಸಂಪೂರ್ಣ ಉಚಿತ ಬಸ್‌ ಪಾಸ್‌ ವಿತರಿಸಿದರೆ, ವಾರ್ಷಿಕ 629 ಕೋಟಿ ರೂ.ಹೊರೆ ಬೀಳಲಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಪಾಸ್‌ಗಳಿಗೆ ತಗಲುವ ವೆಚ್ಚ 150 ಕೋಟಿ ರೂ.ಗಳನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಲಿದೆ. ಉಳಿದ 480 ಕೋಟಿ ರೂ.ಗಳಲ್ಲಿ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 250ರಿಂದ 300 ಕೋಟಿ ರೂ.ಬೇಕಾಗುತ್ತದೆ. ಕೊರತೆಯಾಗುವ 180ರಿಂದ 200 ಕೋಟಿ ರೂ.ಗಳಿಗಾಗಿ ಹಣಕಾಸು ಇಲಾಖೆ ಜತೆ ಚೌಕಾಸಿ ನಡೆದಿದೆ ಎಂದು ಸಾರಿಗೆ ಇಲಾಖೆ ಮೂಲಗಳು “ಉದಯವಾಣಿ’ಗೆ ಸ್ಪಷ್ಟಪಡಿಸಿವೆ.

ಸರ್ಕಾರಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಪಾಸು ನೀಡುವುದರಿಂದ ಆಗಲಿರುವ ಸುಮಾರು 250-300 ಕೋಟಿ ರೂ.ಹೊರೆಯನ್ನು ಭರಿಸಲು ಅನುಮತಿಗಾಗಿ ಆರ್ಥಿಕ ಇಲಾಖೆಗೆ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.

ಅನುದಾನಿತ ವಿದ್ಯಾರ್ಥಿಗಳ ಕೂಗು:
ಸರ್ಕಾರದ ಈ ಲೆಕ್ಕಾಚಾರದಲ್ಲಿ ಸಣ್ಣ ಬದಲಾವಣೆ ಮಾಡಿದರೂ, ಫ‌ಲಾನುಭವಿಗಳಲ್ಲೂ ವ್ಯತ್ಯಾಸ ಆಗಲಿದೆ. ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಘೋಷಿಸಿದ ಬೆನ್ನಲ್ಲೇ ಅನುದಾನಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದಲೂ ಒತ್ತಾಯ ಕೇಳಿ ಬರುತ್ತಿದೆ. ಈ ವರ್ಗದಲ್ಲಿ 1ರಿಂದ 10ನೇ ತರಗತಿವರೆಗಿನ ಸುಮಾರು 15 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಶೇ.40ರಷ್ಟು ಜನ ಪಾಸು ಪಡೆದರೂ ಕೋಟ್ಯಂತರ ರೂ. ಹೊರೆ ಆಗಲಿದೆ. ಹಾಗೊಂದು ವೇಳೆ ಇದಕ್ಕೂ ಒಪ್ಪಿಗೆ ಸೂಚಿಸಿದರೆ, ಇದರಿಂದಾಗಲಿರುವ ಹೊರೆ ಸರಿದೂಗಿಸಲು ಈಗಾಗಲೇ ಹಣ ಪಾವತಿಸಿ ಪಾಸು ಪಡೆದ ಸುಮಾರು 11 ಲಕ್ಷ (ಬಿಎಂಟಿಸಿ ಹೊರತುಪಡಿಸಿ) ವಿದ್ಯಾರ್ಥಿಗಳು ಸೌಲಭ್ಯದಿಂದ ಹೊರಗುಳಿಯಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

40-45 ಕೋಟಿ ರೂ.ಹೊರೆ
ಬಿಎಂಟಿಸಿಯಿಂದ ಕಳೆದ ಮೂರು ತಿಂಗಳಿಂದ ರಿಯಾಯ್ತಿ ಪಾಸುಗಳನ್ನು ವಿತರಿಸಿಲ್ಲ. ಬದಲಿಗೆ ಈ ಹಿಂದೆ ಇದ್ದ ಹತ್ತು ತಿಂಗಳ ಅವಧಿಯ ಪಾಸುಗಳನ್ನು ಎರಡು ಬಾರಿ ವಿಸ್ತರಿಸಲಾಗಿದೆ. ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ವಿಸ್ತರಣೆ ಆಗಿದ್ದರೂ, ನಿಗಮದ ಮೇಲೆ ತಿಂಗಳಿಗೆ ಸರಿ ಸುಮಾರು 40ರಿಂದ 45 ಕೋಟಿ ರೂ.ಹೊರೆ ಆಗುತ್ತಿದೆ.

Advertisement

ಅನುದಾನಕ್ಕೆ ಸಂಬಂಧಿಸಿ ಆರ್ಥಿಕ ಇಲಾಖೆಯಿಂದ ಗ್ರೀನ್‌ ಸಿಗ್ನಲ್‌ ಸಿಕ್ಕ ತಕ್ಷಣ ಉಚಿತ ಪಾಸ್‌ನ ಆದೇಶ ಹೊರ ಬೀಳಲಿದೆ. ಒಂದು ವೇಳೆ, 425 ಕೋಟಿ ರೂ.ಗೆ ಅನುಮೋದನೆ ಕೊಟ್ಟರೆ, ಎಲ್ಲರಿಗೂ ಉಚಿತ ಪಾಸು ವಿತರಿಸಲು ಸೂಚಿಸಲಾಗುವುದು.
– ಬಿ. ಬಸವರಾಜು, ಪ್ರಧಾನ ಕಾರ್ಯದರ್ಶಿ, ಸಾರಿಗೆ ಇಲಾಖೆ.

– ವಿಜಯಕುಮಾರ ಚಂದರಗಿ
 

Advertisement

Udayavani is now on Telegram. Click here to join our channel and stay updated with the latest news.

Next