Advertisement

ಮಣಿಪಾಲ್‌ ಆಸ್ಪತ್ರೆಯಿಂದ ಉಚಿತ ಆ್ಯಂಬುಲೆನ್ಸ್‌ ಸೇವೆ

06:10 AM Jan 09, 2018 | |

ಬೆಂಗಳೂರು: ಅಪಘಾತ ಇಲ್ಲವೇ ಆರೋಗ್ಯದಲ್ಲಿ ದಿಢೀರ್‌ ಏರುಪೇರಾದಾಗ “ಸುವರ್ಣ ಘಳಿಗೆ’ ಅವಧಿಯೊಳಗೆ ತುರ್ತು ಚಿಕಿತ್ಸೆ ಕಲ್ಪಿಸಲು ಆ್ಯಂಬುಲೆನ್ಸ್‌ಗೆ “ದಾರಿ ಬಿಡಿ, ಜೀವ ಉಳಿಸಿ’ ಅಭಿಯಾನಕ್ಕೆ ಮಣಿಪಾಲ್‌ ಆಸ್ಪತ್ರೆ ಸೋಮವಾರ ಚಾಲನೆ ನೀಡಿದೆ.

Advertisement

ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಯಲ್ಲಿ ವಿಶ್ವ ಆ್ಯಂಬುಲೆನ್ಸ್‌ ದಿನದ ಅಂಗವಾಗಿ ದಿವಂಗತ ನ್ಯಾಯಮೂರ್ತಿ ವಿ. ಎಸ್‌. ಮಳೀಮs… ಹೆಸರಿನಲ್ಲಿ ಆರಂಭಿಸಿರುವ ತುರ್ತು ಚಿಕಿತ್ಸೆಗಾಗಿ ಉಚಿತ ಆ್ಯಂಬುಲೆನ್ಸ್‌ ಸೇವೆಗೆ ಹೈಕೋರ್ಟ್‌ ನ್ಯಾಯಮೂರ್ತಿ ರವಿ ಮಳೀಮs… ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, “ಅಪಘಾತ ಇಲ್ಲವೇ ಆರೋಗ್ಯದಲ್ಲಿ ದಿಢೀರ್‌ ಏರುಪೇರು ಉಂಟಾದಾಗ ತುರ್ತು ಚಿಕಿತ್ಸೆ ಅತ್ಯಾವಶ್ಯಕ ವಾಗಿರುತ್ತದೆ. ಜೀವರಕ್ಷಕ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ ಗಾಯಾಳು, ರೋಗಿ ಬದುಕುಳಿಯುವ ಸಾಧ್ಯತೆ ಪ್ರಮಾಣ ಹೆಚ್ಚು ಇರುತ್ತದೆ. ಪ್ರತಿಯೊಂದು ಅಮೂಲ್ಯ ಜೀವಗಳನ್ನು ಉಳಿಸುವ ನಿಟ್ಟಿ ನಲ್ಲಿ ಇಂತಹ ಅಭಿಯಾನ ಸಹಕಾರಿಯಾಗಲಿದೆ’ ಎಂದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರೋಗಿಯೊಬ್ಬರ ಹೆಸರಿನಲ್ಲಿ ಉಚಿತ ಆ್ಯಂಬುಲೆನ್ಸ್‌ ಸೇವೆಗೆ ಚಾಲನೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಜತೆಗೆ ಎಲ್ಲ ಹಂತದ ಸೇವೆಯೂ ಪರಿಣಾಮಕಾರಿಯಾಗಿ ಸಿಗುತ್ತಿದೆ. ಇದರಿಂದಾಗಿಯೇ ಮಣಿಪಾಲ್‌ ಆಸ್ಪತ್ರೆಯು ಉತ್ತಮ ಆಸ್ಪತ್ರೆಗಿಂತ “ಶ್ರೇಷ್ಠ ಆಸ್ಪತ್ರೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತುರ್ತು ಚಿಕಿತ್ಸೆಗಾಗಿ ಉಚಿತ ಆ್ಯಂಬುಲೆನ್ಸ್‌ ಸೇವೆ ಕಲ್ಪಿಸಿರುವುದು ಆಸ್ಪತ್ರೆಯ ಸೇವಾ ಮನೋಭಾವವನ್ನು ತೋರಿಸುತ್ತದೆ ಎಂದು ತಿಳಿಸಿದರು.

ಮಣಿಪಾಲ್‌ ಆಸ್ಪತ್ರೆಯ ಮುಖ್ಯಸ್ಥ ಡಾ| ಸುದರ್ಶನ ಬಲ್ಲಾಳ್‌ ಮಾತನಾಡಿ, ಅಪಘಾತ ಸಂಭವಿಸಿದಾಗ ಇಲ್ಲವೇ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾದಾಗ ತುರ್ತು ಚಿಕಿತ್ಸೆ ಅಗತ್ಯವಿರುತ್ತದೆ. ಹಾಗಾಗಿ ಆ್ಯಂಬುಲೆನ್ಸ್‌ನಲ್ಲಿ ಸಕಾಲದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದರೆ ಅಮೂಲ್ಯ ಜೀವಗಳು ಬದುಕುಳಿಯುವ ಸಾಧ್ಯತೆ ಶೇ.70ರಿಂದ ಶೇ.80ರಷ್ಟಿರುತ್ತದೆ. ಹಾಗಾಗಿ ರೋಗಿಗಳನ್ನು ಹೊತ್ತ ಆ್ಯಂಬುಲೆನ್ಸ್‌ಗಳನ್ನು ಹಿಂಬಾಲಿಸದೆ ಆ್ಯಂಬುಲೆನ್ಸ್‌ಗೆ “ದಾರಿ ಬಿಡಿ ಜೀವ ಉಳಿಸಿ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

Advertisement

ಐಸಿಯು ವ್ಯವಸ್ಥೆ: ಗಾಯಾಳು ಇಲ್ಲವೇ ರೋಗಿಗೆ ಆ್ಯಂಬುಲೆನ್ಸ್‌ ನಲ್ಲೇ ಐಸಿಯು ವ್ಯವಸ್ಥೆಯಡಿ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯ ಘಟಕದಲ್ಲಿನ ತಜ್ಞರು ನಿರಂತರವಾಗಿ ಆ್ಯಂಬುಲೆನ್ಸ್‌ ನಲ್ಲಿರುವ ಅರೆವೈದ್ಯ ಸಿಬಂದಿಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ಜತೆಗೆ ಅನಂತರದ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ರೋಗಿ ಆಸ್ಪತ್ರೆ ತಲುಪುತ್ತಿದ್ದಂತೆ ತುರ್ತು ಚಿಕಿತ್ಸೆ ಕೊಡಲು ನೆರವಾಗಲಿದೆ. ಆಸ್ಪತ್ರೆಗೆ ಕರೆ ಮಾಡಿ ಉಚಿತ ಆ್ಯಂಬುಲೆನ್ಸ್‌ ಬಳಸಿಕೊಳ್ಳಬಹುದು. ತುರ್ತು ಚಿಕಿತ್ಸೆಗಷ್ಟೇ ಉಚಿತ ಸೇವೆ ಪಡೆಯಬೇಕೆ ಹೊರತು ದುರ್ಬಳಕೆ ಮಾಡಿಕೊಳ್ಳಬಾರದು. ಬೆಂಗಳೂರು ಮಾತ್ರವಲ್ಲದೇ ಮಂಗಳೂರು, ವಿಜಯವಾಡದಲ್ಲೂ ಈ ಸೇವೆ ಆರಂಭಿಸಲು ಚಿಂತಿಸಲಾಗಿದೆ ಎಂದು ಡಾ| ಸುದರ್ಶನ ಬಲ್ಲಾಳ್‌ ತಿಳಿಸಿದರು.

ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸಿಇಒ ದಿಲೀಪ್‌ ಭೋಸ್‌ ಮಾತನಾಡಿ, ಸಂಸ್ಥೆಯು ಮೂರು ವರ್ಷದ ಹಿಂದೆಯೇ “ಎಂಎಆರ್‌ಎಸ್‌’ ಸೇವೆಗೆ ಚಾಲನೆ ನೀಡಿದ್ದು, ಈವರೆಗೆ 12,000ಕ್ಕೂ ಹೆಚ್ಚು ಮಂದಿಗೆ ತುರ್ತು ಚಿಕಿತ್ಸೆಗೆ ಸ್ಪಂದಿಸಲಾಗಿದೆ. ಮುಂದೆಯೂ ಅಮೂಲ್ಯ ಜೀವ ಉಳಿಸುವುದಕ್ಕಾಗಿ ಉಚಿತ ಆ್ಯಂಬುಲೆನ್ಸ್‌ ಸೇವೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಮಣಿಪಾಲ್‌ ಆಸ್ಪತ್ರೆಗಳ ಸಮೂಹ ವೈದ್ಯಕೀಯ ನಿರ್ದೇಶಕ ಡಾ| ನಾಗೇಂದ್ರಸ್ವಾಮಿ ಉಪಸ್ಥಿತರಿದ್ದರು.

ಯಾವುದೇ ಆಸ್ಪತ್ರೆಗೆ ತೆರಳಿ
ಈ ಹಿಂದೆ ಅಂದರೆ 2015ರಲ್ಲಿ ಮಣಿಪಾಲ್‌ ಆ್ಯಂಬುಲೆನ್ಸ್‌  ರೆಸ್ಪಾನ್ಸ್‌ ಸರ್ವಿಸ್‌ (ಎಂಎಆರ್‌ಎಸ್‌) ಸೇವೆ ಆರಂಭಿಸಲಾಗಿತ್ತು. ಸದ್ಯ ಬೆಂಗಳೂರಿನಲ್ಲಿ ಆಸ್ಪತ್ರೆಯ 26 ಆ್ಯಂಬುಲೆನ್ಸ್‌ಗಳಿದ್ದು, ಇದರಲ್ಲಿ 18 ಮಿನಿ ಐಸಿಯು ಸೌಲಭ್ಯ ಹೊಂದಿದ್ದರೆ ಉಳಿದ 8 ಸಾಧಾರಣ ಆ್ಯಂಬುಲೆನ್ಸ್‌ಗಳಾಗಿವೆ. ಅಪಘಾತ ಇಲ್ಲವೇ ಹೃದಯಾಘಾತ ಇತರೆ ಸಮಸ್ಯೆ ಕಾಣಿಸಿಕೊಂಡಾಗ ಉಚಿತವಾಗಿ ಆ್ಯಂಬುಲೆನ್ಸ್‌ ಸೇವೆ ಪಡೆಯಬಹುದು. ಮಣಿಪಾಲ್‌ ಆಸ್ಪತ್ರೆಯಲ್ಲದೆ ಸಮೀಪದ ಯಾವುದೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ  ಪಡೆಯಲು ಆ್ಯಂಬುಲೆನ್ಸ್‌  ಸೇವೆ ಪಡೆಯಬಹುದು ಎಂದು  ಡಾ| ಸುದರ್ಶನ ಬಲ್ಲಾಳ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next