ವಾಡಿ: ಕಳೆದ ಎರಡು ತಿಂಗಳಿಂದ ಕೋವಿಡ್ ಸೊಂಕಿತರ ಸೇವೆಯಲ್ಲಿ ತೊಡಗಿರುವ ಪಟ್ಟಣದ ಭಾಯ್ ಭಾಯ್ ಗ್ರೂಪ್ ಹಾಗೂ ಟೀಂ ಪ್ರಿಯಾಂಕ್ ಖರ್ಗೆ ಸಂಘದ ಪದಾ ಧಿಕಾರಿ ಯುವಕರು ಈಗ ತಮ್ಮ ಕಾರುಗಳನ್ನೇ ಆಂಬ್ಯುಲೆನ್ಸ್ ಗಳನ್ನಾಗಿ ಪರಿವರ್ತಿಸುವ ಮೂಲಕ ರೋಗಿಗಳಿಗೆ ಉಚಿತ ಸೇವೆ ಒದಗಿಸಲು ಮುಂದಾಗಿದ್ದಾರೆ.
ಪಟ್ಟಣದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಪಿಎಸ್‌ಐ ವಿಜಯಕುಮಾರ ಭಾವಗಿ, ಕೊರೊನಾ ಸೋಂಕು ದೃಢಪಟ್ಟು ಸಕಾಲಕ್ಕೆ ವಾಹನ ವ್ಯವಸ್ಥೆ, ಚಿಕಿತ್ಸೆ, ಆಕ್ಸಿಜನ್ ಸಿಗದೆ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದಿನದ 24 ತಾಸು ರೋಗಿಗಳ ಸೇವೆ ಮಾಡಲು ಪಣ ತೊಟ್ಟಿರುವ ಯುವಕರು, ತಮ್ಮ ಕಾರುಗಳನ್ನೇ ಆಂಬ್ಯುಲೆನ್ಸ್ ಗಳಾಗಿ ಬದಲಾಯಿಸಿರುವುದು ಅವರ ಜೀಪರ ಕಾಳಜಿ ಎತ್ತಿ ತೋರಿಸುತ್ತದೆ. ಸಂಕಷ್ಟದಲ್ಲಿರುವ ಬಡ ರೋಗಿಗಳು ಈ ಸಹಾಯ ಪಡೆದುಕೊಂಡು ಜೀವ ರಕ್ಷಿಸಿಕೊಳ್ಳಬೇಕು ಎಂದರು.
ಟೀಂ ಪ್ರಿಯಾಂಕ್ ಖರ್ಗೆ ಮತ್ತು ಭಾಯ್ ಭಾಯ್ ಗ್ರೂಪ್ ಅಧ್ಯಕ್ಷ ಶಮಶೀರ್ ಅಹ್ಮದ್ ಮಾತನಾಡಿ, ಕೊರೊನಾ ಸೋಂಕಿಗೆ ಹೆದರಿದರೆ ನಮ್ಮ ಕಣ್ಣೆದುರೇ ನಮ್ಮವರನ್ನು ಕಳೆದುಕೊಳ್ಳಬೇಕಾಗುತ್ತದೆ. ಮಾನವೀಯತೆ ದೃಷ್ಟಿಯಿಂದ ಜೀವದ ಹಂಗು ತೊರೆದು ರೋಗಿಗಳ ಸೇವೆಗೆ ನಿಂತಿದ್ದೇವೆ. ಈಗಾಗಲೇ ಹೋರಾಟದ ಮೂಲಕವೇ ಅನೇಕ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ವೆಂಟಿಲೇಟರ್ ಸೌಲಭ್ಯ ಸಿಗುವಂತೆ ಕ್ರಮ ಕೈಗೊಂಡಿದ್ದೇವೆ. ಹಲವರಿಗೆ 108 ಸುರûಾ ಕವಚದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ್ದೇವೆ.
ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಖಾಸಗಿ ಆ್ಯಂಬುಲೆನ್ಸ್ ಮಾಲೀಕರು ಬಡ ರೋಗಿಗಳಿಂದ ಹಣ ಸುಲಿಗೆಗೆ ನಿಂತಿರುವುದನ್ನು ಅರಿತು ಉಚಿತ ಸೇವೆಗೆ ಮುಂದಾಗಿದ್ದೇವೆ. ಪ್ರಚಾರದ ದೃಷ್ಟಿಯಿಂದ ನಾವು ಇದನ್ನು ಮಾಡುತ್ತಿಲ್ಲ. ನಮ್ಮ ಕರ್ತವ್ಯ ಎಂದು ಭಾವಿಸಿ ಅಳಿಲು ಸೇವೆ ಒದಗಿಸುತ್ತಿದ್ದೇವೆ.
ದಿನದ 24 ತಾಸು ನಾವು ಸೇವೆಗೆ ಹಾಜರಿರುತ್ತೇವೆ. ಕೋವಿಡ್ ಸೇರಿದಂತೆ ಇತರೆ ಯಾವುದೇ ಸಮಸ್ಯೆಯಿಂದ ಬಳಲುವ ರೋಗಿಗಳಿಗೆ ಸ್ಪಂದಿಸುತ್ತೇವೆ. ಉಚಿತ ಆಂಬ್ಯುಲೆನ್ಸ್ ಸೇವೆಗಾಗಿ 9742533763, 7022623883 ಕರೆ ಮಾಡಬಹುದು ಎಂದು ವಿವರಿಸಿದರು. ಮಹ್ಮದ್ ಇರ್ಫಾನ್, ಝಹೂರ್ ಖಾನ್, ಬಾಬಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.