ಬೀದರ: ಕೋವಿಡ್ ಸಂತ್ರಸ್ತ ವಿದ್ಯಾರ್ಥಿಗಳಿಗೆ ಪಿಯುಸಿ ಉಚಿತ ಶಿಕ್ಷಣ ನೀಡಲಾಗುವುದು ಎಂದು ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಡಾ| ಅಬ್ದುಲ್ ಖದೀರ್ ಘೋಷಿಸಿದ್ದಾರೆ.
ಕೋವಿಡ್ ಕಾರಣ ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶಾಹೀನ್ ಕಾಲೇಜಿನಲ್ಲಿ ವಸತಿ ಸಹಿತ ಉಚಿತ ಪ್ರವೇಶ ಕಲ್ಪಿಸಲಾಗುವುದು. ಈಗಾಗಲೇ ಒಬ್ಬ ವಿದ್ಯಾರ್ಥಿಗೆ ಉಚಿತ ಪ್ರವೇಶ ಒದಗಿಸಲಾಗಿದೆ. ಸಂತ್ರಸ್ತ ವಿದ್ಯಾರ್ಥಿಗಳು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪಾಲಕರು, ಶಿಕ್ಷಣ ಸಂಸ್ಥೆ ಜತೆಗೆ ಸಮಾಜವೂ ಕೈ ಜೋಡಿಸಿದ್ದಲ್ಲಿ ಮಾತ್ರ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತುಂಗದ ಸಾಧನೆ ಮಾಡಬಹುದಾಗಿದೆ. ಜಿಲ್ಲೆಯ ಯಾವುದೇ ಗ್ರಾಮಸ್ಥರು ಬಡ ವಿದ್ಯಾರ್ಥಿಗಳ ಪಿಯುಸಿ ಶಿಕ್ಷಣದ ಶೇ. 50ರಷ್ಟು ಶುಲ್ಕ ದೇಣಿಗೆ ರೂಪದಲ್ಲಿ ಕೊಡಲು ಮುಂದೆ ಬಂದರೆ, ಶಾಹೀನ್ ಸಂಸ್ಥೆ ಉಳಿದ ಶೇ. 50ರಷ್ಟನ್ನು ಭರಿಸಲು ನಿರ್ಧರಿಸಿದೆ ಎಂದಿದ್ದಾರೆ.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಗ್ರಾಮಸ್ಥರಿಗೆ ಉತ್ತೇಜನ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಗ್ರಾಮಗಳ ಶ್ರೀಮಂತರು, ಸಂಘ-ಸಂಸ್ಥೆಗಳು, ಶಿಕ್ಷಕರು ಸಹಾಯ ಹಸ್ತ ಚಾಚಿದರೆ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. ಒಬ್ಬ ವಿದ್ಯಾರ್ಥಿ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಪಡೆದರೆ ಇನ್ನೊಬ್ಬರಿಗೆ ಪ್ರೇರಣೆಯಾಗುತ್ತದೆ. ಗ್ರಾಮದಲ್ಲಿ ಐಕ್ಯತೆಯ ಭಾವನೆ ಮೂಡುತ್ತದೆ. ವೃತ್ತಿಪರ ಕೋರ್ಸ್‌ನಲ್ಲಿ ಪ್ರವೇಶ ಪಡೆದ ಬಡ ವಿದ್ಯಾರ್ಥಿ ಸಾಧನೆಗೈದು ಮುಂದೊಂದು ದಿನ ಅದೇ ಗ್ರಾಮದ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುವಂತಾಗುತ್ತದೆ ಎಂದು ತಿಳಿಸಿದ್ದಾರೆ.
ಔರಾದ ತಾಲೂಕಿನ ವಿದ್ಯಾರ್ಥಿ ಧನರಾಜ ಶಿಕ್ಷಣಕ್ಕೆ ಗ್ರಾಮಸ್ಥರು ದೇಣಿಗೆ ನೀಡಿ ನೆರವಾಗಿದ್ದರು. ಶಾಹೀನ್ ಕಾಲೇಜಿನಿಂದ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ಒದಗಿಸಲಾಗಿತ್ತು. ಈ ವಿದ್ಯಾರ್ಥಿ ಈಗ ಯಶಸ್ವಿ ಎಂಜಿನಿಯರ್ ಆಗಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಗರಾಜ, ಮಹಮ್ಮದ್ ಯಹ್ಯಾ ಅವರೂ ಇಂತಹುದೇ ಸಾಧನೆ ಮಾಡಿದ್ದಾರೆ.
ಜಿಲ್ಲಾಡಳಿತವು ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯುಸಿ ಉಚಿತ ಪ್ರವೇಶ ಕಲ್ಪಿಸುತ್ತಿದೆ. ಶಾಹೀನ್ ಸಂಸ್ಥೆಯ ಎಲ್ಲ ಶಾಖೆಗಳು ಸೇರಿ ಒಟ್ಟು 100 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಒದಗಿಸಲಾಗುವುದು ಎಂದು ಹೇಳಿದ್ದಾರೆ.