Advertisement

ಐಐಎಸ್ಸಿ ಆವರಣಕ್ಕೆ ನಾಳೆ ಮುಕ್ತ ಪ್ರವೇಶ

06:36 AM Mar 22, 2019 | Team Udayavani |

ಬೆಂಗಳೂರು: ಮಲ್ಲೇಶ್ವರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಆವರಣದೊಳಗೆ ಸಾಮಾನ್ಯ ದಿನಗಳಲ್ಲಿ ಸಾರ್ವಜನಿಕರ ಪ್ರವೇಶ ನಿಷಿದ್ಧ. ಆದರೆ, ಮಾ.23ರಂದು ಯಾರು ಬೇಕಾದರೂ ಮುಕ್ತವಾಗಿ ಕ್ಯಾಂಪಸ್‌ ಸುತ್ತಬಹುದು. ವಿಜ್ಞಾನದ ಹಲವು ಪ್ರಯೋಗ, ವಿಸ್ಮಯಗಳ ಜತೆಗೆ ವಸ್ತು ಪ್ರದರ್ಶಗಳನ್ನು ಕಣ್ತುಂಬಿಕೊಳ್ಳಬಹುದು.

Advertisement

ಹೌದು. ಐಐಎಸ್ಸಿ  ಪ್ರತಿ ವರ್ಷ ನಡೆಸುವ ಮುಕ್ತ ದಿನ (ಓಪನ್‌ ಡೇ)ವನ್ನು ಮಾ.23ರಂದು ಹಮ್ಮಿಕೊಂಡಿದೆ. ಐಐಎಸ್ಸಿ ವೆಬ್‌ಸೈಟ್‌ www.iisc.ac.in ನಲ್ಲಿ  ಪ್ರವೇಶದ ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. “ಪರಿಸರ ಸ್ನೇಹಿ’ ಪರಿಕಲ್ಪನೆಯಡಿ ಮುಕ್ತ ದಿನಾಚರಣೆ ನಡೆಯಲಿದೆ.

ಮುಕ್ತದಿನ ಆಚರಣೆ ಸಮಿತಿ ಅಧ್ಯಕ್ಷ ಪ್ರೊ.ವೈ.ನರಹರಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಶನಿವಾರ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೂ ಸಾರ್ವಜನಿಕರಿಗೆ ಕ್ಯಾಂಪಸ್‌ ಸುತ್ತಲು 15 ಇ-ರಿಕ್ಷಾಗಳ ಉಚಿತ ವ್ಯವಸ್ಥೆ ಮಾಡಲಾಗಿದೆ. ಐಐಎಸ್ಸಿಯ 40ಕ್ಕೂ ಹೆಚ್ಚಿನ ವಿಭಾಗಗಳ ವಿದ್ಯಾರ್ಥಿಗಳು, ವಸ್ತು ಪ್ರದರ್ಶನ, ಇತ್ತೀಚಿನ ಸಂಶೋಧನೆಗಳು ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.

ಐಐಎಸ್ಸಿಯಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಆರಂಭಿಸಿರುವ 15 ಸ್ಟಾರ್ಟ್‌ಅಪ್‌ ಸಂಸ್ಥೆಗಳು ತಮ್ಮ ಪ್ರಕಲ್ಪನೆಗಳ ಪ್ರದರ್ಶನ ಮಾಡಲಿವೆ. ಹಾಗೇ ವಿದ್ಯಾರ್ಥಿಗಳು ಅಥವಾ ವಿವಿಧ ಸಂಸ್ಥೆಗಳ ಸಂಶೋಧಕರು, ತಮ್ಮ ವಿನೂತನ ಯೋಜನೆಗಳ ಬಗ್ಗೆ ಐಐಎಸ್ಸಿ ಅಧಿಕಾರಿಗಳು ಅಥವಾ ವಿವಿಧ ವಿಭಾಗಗಳ ಮುಖ್ಯಸ್ಥರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಮುಕ್ತದಿನದಲ್ಲಿ ವಿಚಾರ ಸಂಕಿರಣಗಳು, ಮಕ್ಕಳಿಗಾಗಿ ರಸಪ್ರಶ್ನೆ, ಸಂಶೋಧನೆಗಳ ವಿವರ, ವಸ್ತುಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಿವೆ. ಎಲ್ಲಾ ವಿಭಾಗದಿಂದಲೂ ಹೊಸ ಪ್ರಯೋಗದ ಪ್ರದರ್ಶನ ಇರುತ್ತದೆ. ವಿದ್ಯಾರ್ಥಿಗಳೇ ಅದರ ವಿವರಣೆಯನ್ನು ಸಾರ್ವಜನಿಕರಿಗೆ ನೀಡಲಿದ್ದಾರೆ. ಕಳೆದ ವರ್ಷದ ಮುಕ್ತ ದಿನದಂದು ಅಂದಾಜು 35 ಸಾವಿರ ಜನ, ಸಂಸ್ಥೆಗೆ ಭೇಟಿ ನೀಡಿದ್ದರು.

Advertisement

ಈ ಬಾರಿ ಸಂಸ್ಥೆಗೆ ನಿಖರವಾಗಿ ಮಾಹಿತಿ ಸಿಗಲಿ ಎಂಬ ಉದ್ದೇಶದಿಂದ ಆನ್‌ಲೈನ್‌ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈವರೆಗೆ 300 ಸಂಸ್ಥೆಗಳು ಹಾಗೂ ಆರು ಸಾವಿರಕ್ಕೂ ಅಧಿಕ ಸಾರ್ವಜನಿಕರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಯುವಕರು ಮತ್ತು ಶಾಲೆ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿಜ್ಞಾನದೆಡೆಗೆ ಆಕರ್ಷಿತರಾಗಬೇಕು ಎಂಬುದು ಮುಕ್ತ ದಿನದ ಮೂಲ ಉದ್ದೇಶವಾಗಿದೆ ಎಂದ‌ು ಪ್ರೊ.ವೈ.ನರಹರಿ ತಿಳಿಸಿದರು. ಎಪಿಸಿ ಸೆಲ್‌ ಅಧ್ಯಕ್ಷ ಕೌಶಲ್‌ ವರ್ಮಾ ಸುದ್ದಿಗೋಷ್ಠಿಯಲ್ಲಿದ್ದರು.

ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ: ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಮಲ್ಲೇಶ್ವರದ 18ನೇ ಅಡ್ಡರಸ್ತೆ ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಒಂದು ಅಗ್ನಿಶಾಮಕ ದಳ ಮತ್ತು ನಾಲ್ಕು ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಆವರಣದೊಳಗೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿದೆ. ಆವರಣದೊಳಗೆ ಸಂಚರಿಸಲು 15 ಇ-ರಿಕ್ಷಾಗಳ ವ್ಯವಸ್ಥೆ ಮಾಡಲಾಗಿದೆ.

15 ಸಹಾಯ ಕೇಂದ್ರಗಳು: ಮುಕ್ತದಿನಕ್ಕೆ ಬರುವ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದಕ್ಕಾಗಿ 15 ಸಹಾಯ ಕೇಂದ್ರಗಳನ್ನು ತೆರೆಯಲಾಗುತ್ತದೆ. ಮ್ಯಾಪ್‌ ಹಾಗೂ ವಸ್ತು ಪ್ರದರ್ಶನ ಕೇಂದ್ರಗಳ ಮಾಹಿತಿಯನ್ನು ಈ ಕೇಂದ್ರದ ಮೂಲಕ ನೀಡಲಾಗುತ್ತದೆ. ಭದ್ರತೆ ದೃಷ್ಟಿಯಿಂದ ಸದಾಶಿವನಗರ, ಮಲ್ಲೇಶ್ವರ ಮತ್ತು ಯಶವಂತಪುರ ಠಾಣೆಗಳಿಂದ 40 ಸಿಬ್ಬಂದಿಯನ್ನು ಕಳುಹಿಸಲು ಕೋರಲಾಗಿದ್ದು, ಐಐಎಸ್ಸಿಯಿಂದ ಹೆಚ್ಚುವರಿಯಾಗಿ 75 ಸಿಬ್ಬಂದಿ ನೇಮಕ ಮಾಡಲಾಗಿದೆ.

ಏಳು ಫ‌ುಡ್‌ ಕೋರ್ಟ್‌: ಮಾ.23ರಂದು ಐಐಎಸ್ಸಿ ಆವರಣದಲ್ಲಿ ಏಳು ಫ‌ುಡ್‌ ಕೋರ್ಟ್‌ಗಳ ಸೇವೆ ಸಾರ್ವಜನಿಕರಿಗೆ ಸಿಗಲಿದೆ. ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡದಿಂದ (ಎಫ್ಎಸ್‌ಎಸ್‌ಐ) ಪ್ರಮಾಣೀಕರಿಸಿರುವ ಸಂಸ್ಥೆಗಳಿಗೆ ಮಾತ್ರ ಕೇಟರಿಂಗ್‌ ವಹಿಸಲಾಗಿದೆ. ನಿಗದಿತ ದರದಲ್ಲಿ ಗುಣಮಟ್ಟದ ಊಟ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next