Advertisement

ಹೆಬ್ಬಗೋಡಿ ಬಳಿಕ ಫ್ರೇಜರ್‌ಟೌನ್‌ ಸೀಲ್‌?

07:30 AM May 23, 2020 | Lakshmi GovindaRaj |

ಬೆಂಗಳೂರು: ಕಳ್ಳರು ಸೃಷ್ಟಿಸಿದ ಕೋವಿಡ್‌ 19  ಅವಾಂತರ ಈಗ ಅಕ್ಷರಶಃ ಪೊಲೀಸ್‌ ಠಾಣೆಯನ್ನುಬೀದಿಯಲ್ಲಿ ನಿಲ್ಲಿಸಿದೆ! ಕಬ್ಬಿಣ ಕಳ್ಳತನ ಮಾಡಲು ಬಂದಿದ್ದ  ಆರೋಪಿಗಳಿಬ್ಬರು ಸೃಷ್ಟಿಸಿದ ಕೋವಿಡ್‌ 19 ಅವಾಂತರಕ್ಕೆ ಹೆಬ್ಬಗೋಡಿ  ಠಾಣೆ ಸೀಲ್‌ಡೌನ್‌ ಆಗಿರುವುದರಿಂದ ಜನರ ದೂರು ಸ್ವೀಕರಿಸಲು ಠಾಣೆ ಮುಂಭಾಗದಲ್ಲೇ ಪ್ರತ್ಯೇಕವಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ.

Advertisement

ಠಾಣೆಯ ಒಳಭಾಗ ಪ್ರವೇಶವನ್ನು  ಸಂಪೂರ್ಣವಾಗಿ ಸೀಲ್‌ಡೌನ್‌  ಮಾಡಲಾಗಿದ್ದು, ಹೊರಭಾಗದಲ್ಲಿ ಬಿಸಿಲು ಮಳೆ, ಗಾಳಿಯಿಂದ ಸುರಕ್ಷತೆಗಾಗಿ ಶೀಟ್‌ಗಳನ್ನು ಹಾಕಲಾಗಿದೆ. ಪಿಎಸ್‌ಐ ನೇತೃತ್ವದಲ್ಲಿ ಠಾಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಭಯವಿಲ್ಲದೆ ದೂರು  ನೀಡಬಹುದಾಗಿದ್ದು, ಕಡ್ಡಾಯ ಮಾಸ್ಕ್ ಧರಿಸಲು ಸೂಚಿಸಲಾಗಿದೆ.

ಮೂರು ದಿನ ಔಷಧಿ ಸಿಂಪಡಣೆ: ಕಳೆದ ಮೂರು ದಿನಗಳಿಂದ ಇಡೀ ಠಾಣೆಗೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಕಡತಗಳನ್ನು ಕೂಡ ಯಾರು ಮುಟ್ಟುವಂತಿಲ್ಲ ಎಂದು ಸೂಚಿಸಲಾಗಿದೆ. ಯಾರಿಗೂ ಒಳಗಡೆ ಪ್ರವೇಶ ನೀಡಿಲ್ಲ.  ಶುಕ್ರವಾರ ಕೂಡ ಔಷಧಿ ಸಿಂಪಡಣೆ ಮಾಡಲಾಗಿದೆ. ಆದರೂ ಮುಂದಿನ ಒಂದೆರಡು ದಿನಗಳ ಕಾಲ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪೊಲೀಸ್‌ ಸಿಬ್ಬಂದಿಗೆ ಪಾಸಿಟಿವ್‌: ಫ್ರೆಜರ್‌ ಟೌನ್‌ ಸಂಚಾರ ಠಾಣೆಯ ಸಿಬ್ಬಂದಿಯೊಬ್ಬರಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿದ್ದು, ಆಸ್ಪತ್ರೆಯೊಂದರಲ್ಲಿ ಕ್ವಾರಂ ಟೈನ್‌ ಮಾಡಲಾಗಿದೆ. ಅವರ ಜತೆ ಕರ್ತವ್ಯ ನಿರ್ವಹಿ ಸುತ್ತಿದ್ದ ಮಹಿಳಾ  ಸಿಬ್ಬಂದಿಗೆ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ನಾರಾಯಣ್‌ ಹೇಳಿದರು. ಠಾಣೆಯನ್ನು ಸೀಲ್‌ಡೌನ್‌ ಮಾಡುವ ಬಗ್ಗೆ ಚಿಂತನೆಯಿದ್ದು, ಮೂರು ದಿನಗಳ ಕಾಲ ಔಷಧ ಸಿಂಪಡಿಸಲು ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಜಿ.ಹಳ್ಳಿ ಸಂಚಾರ ಠಾಣೆಗೆ ಉಸ್ತುವಾರಿ ನೀಡಲಾಗಿದೆ ಎಂದು ನಾರಾಯಣ್‌ ತಿಳಿಸಿದರು.

ಅಂತರ್‌ ರಾಜ್ಯ ಪ್ರಯಾಣ ಸದ್ಯಕ್ಕಿಲ್ಲ: ರಾಜ್ಯದ ಕೆಲವು ಜಿಲ್ಲೆಗಳಿಂದ ಹೊರ ರಾಜ್ಯಗಳಿಂದ ಬಂದವರಿಂದಲೇ ಕೋವಿಡ್‌ 19 ಪ್ರಕರಣ ಹೆಚ್ಚಾಗಿರುವುದರಿಂದ ಈ ಪರಿಸ್ಥಿತಿ ಸುಧಾರಿಸುವವರೆಗೂ ಹೊರ ರಾಜ್ಯದ ಪ್ರವೇಶ ನಿಷೇಧ ಹೀಗೆ  ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಹೇಳಿದರು. ಶುಕ್ರವಾರ ಗೃಹಕಚೇರಿ ಕೃಷ್ಣಾದಲ್ಲಿ ಮಂಡ್ಯ ಮತ್ತು ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ, ಕೋವಿಡ್‌ 19 ಮಾಹಿತಿ  ಪಡೆದರು. ಮಂಡ್ಯದ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್‌ ಮಾತನಾಡಿ, ಏ.7ರ ವರೆಗೆ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.

Advertisement

ನಂತರ ಮಹಾರಾಷ್ಟ್ರದಿಂದ ಬಂದಿರುವ 1366 ಜನರಲ್ಲಿ ಅನೇಕರಿಗೆ ಸೋಂಕು ಇರುವುದು ದೃಢಪಟ್ಟಿದೆ.  ಅಲ್ಲಿ ಅವರು ಹೋಟೆಲ್‌ ಉದ್ಯಮ ಇತ್ಯಾದಿಯಲ್ಲಿದ್ದರು. ಈಗ ಜಿಲ್ಲೆಯಲ್ಲಿ ಕೋವಿಡ್‌ 19 ಆಸ್ಪತ್ರೆಯಲ್ಲಿ ಹಾಸಿಗೆ ಹೆಚ್ಚಿಸುವ ಪ್ರಯತ್ನವೂ ನಡೆಯುತ್ತಿದೆ. ಸದ್ಯ ಹೊರ ರಾಜ್ಯದವರಿಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ರಾಜ್ಯದ ಕೆಲವು ಜಿಲ್ಲೆಗಳ ಪರಿಸ್ಥಿತಿ ಸುಧಾರಿಸುವವರೆಗೂ ಅಂತರ್‌ ರಾಜ್ಯ ಪ್ರಯಾಣ ನಿರ್ಬಂಧ ತೆರವು ಮಾಡುವುದಿಲ್ಲ ಎಂದರು.

ಕ್ವಾರಂಟೈನ್‌ ನಿಯಮ ಬದಲು: ವಿದೇಶದಿಂದ ರಾಜ್ಯಕ್ಕೆ ಆಗಮಿಸಿದ 10 ವರ್ಷದೊಳಗಿನ, 80 ವರ್ಷ ಮೇಲ್ಪಟ್ಟವರು, ಗರ್ಭಿಣಿಯರ ಆರೈಕೆಗೆಂದು ಸಹ ಪ್ರಯಾಣಿಕರೊಬ್ಬರಿಗೆ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯ್ತಿ ನೀಡಿ ಆರೋಗ್ಯ  ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ವಿದೇಶದಿಂದ ರಾಜ್ಯಕ್ಕೆ ಬಂದ 10 ವರ್ಷದೊಳಗಿನ, 80 ವರ್ಷ ಮೇಲ್ಪಟ್ಟವರು, ಗರ್ಭಿಣಿಯರ ಆರೋಗ್ಯ ದೃಷ್ಟಿಯಿಂದ ಸಾಂಸ್ಥಿಕ ಕ್ವಾರಂಟೈನ್‌ ವಿನಾಯ್ತಿ ನೀಡಿ ಹೋಂ ಕ್ವಾರಂಟೈನ್‌ಗೆ ಮಾತ್ರ  ಸೂಚಿಸಲಾಗಿತ್ತು. ಆರೈಕೆಗೆ ಕುಟುಂಬಸ್ಥರೊಬ್ಬರ ಉಪಸ್ಥಿತಿ ಅವಶ್ಯಕ. ಹೀಗಾಗಿ ಸಹ ಪ್ರಯಾಣಿರೊಬ್ಬರಿಗೆ ಸಾಂಸ್ಥಿಕ ಕ್ವಾರಂಟೈನ್‌ ವಿನಾಯ್ತಿ ನೀಡಲಾಗಿದೆ.

ಈ ಹಿಂದೆ ವಿದೇಶದಿಂದ ಬಂದ ಪ್ರಯಾಣಿಕರಲ್ಲಿ ಸೋಂಕಿನ ಲಕ್ಷಣ ಇಲ್ಲದ  ಪ್ರಯಾಣಿಕರಿಗೆ 14 ದಿನ ಸಾಂಸ್ಥಿತ ಕ್ವಾರಂಟೈನ್‌, 14 ದಿನ ಹೋಂ ಕ್ವಾರಂಟೈನ್‌, 14 ದಿನ ಇಲಾಖೆ ರಿಪೋರ್ಟಿಂಗ್‌ ಅವಧಿ ಸೇರಿ 42 ದಿನ ನಿಗಾ ಅವಧಿ ಇತ್ತು. ಸದ್ಯ ಹೋಂ ಕ್ವಾರಂಟೈನ್‌ನಿಂದ ವಿನಾಯ್ತಿ ನೀಡಿದೆ. ವಿದೇಶದಿಂದ  ಬೆಂಗಳೂರಿಗೆ 8 ವಿಮಾನಗಳಿಂದ 1035 ಮಂದಿ ಬಂದಿದ್ದು ಒಬ್ಬರಿಗೆ ಪಾಸಿಟಿವ್‌ ಬಂದಿತ್ತು. ದುಬೈನಿಂದ ಮಂಗಳೂರಿಗೆ ಬಂದ 145ಮಂದಿಯಲ್ಲಿ ದಕ್ಷಿಣ ಕನ್ನಡದ 21, ಉಡುಪಿ 6 ಮಂದಿಗೆ ಸೋಂಕಿತ್ತು. ಶುಕ್ರವಾರ ತಡರಾತ್ರಿ  ಮಾಲ್ಡೀವ್ಸ್‌ನಿಂದ 150 ಮಂದಿ ಬಂದಿದ್ದು ಸಾಂಸ್ಥಿಕ ಕ್ವಾರಂಟೈನ್‌ ಮಾಡಿ, ಪರೀಕ್ಷೆಗೆ ಕ್ರಮಕೈಗೊಳ್ಳಲಾಗಿದೆ.

ಜಿಲ್ಲಾ ಗಡಿಗಳಲ್ಲಿ ತಪಾಸಣೆ ಇಲ್ಲ: ಅಂತರ್‌ ಜಿಲ್ಲಾ ಪ್ರಯಾಣಿಕರಿಗೆ ಜಿಲ್ಲಾ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಸ್ಥಗಿತಗೊಳಿಸಿದೆ. ಪ್ರಯಾಣ ಆರಂಭದಲ್ಲಿಯೇ ತಪಾಸಣೆಗೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಜಕ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ಕೈಗಾರಿಕೆಗಳಲ್ಲಿ ಮುಂಜಾಗ್ರತೆಗೆ ಸೂಚನೆ: ಕೋವಿಡ್‌ 19 ಮಧ್ಯೆ ಕೈಗಾರಿಕೆಗಳು ಪುನರಾರಂಭವಾಗಿದ್ದು, ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವುದು  ಕಡ್ಡಾಯ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ನಗರದ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಕೋವಿಡ್‌ 19 ವ್ಯಾಪಕವಾಗಿ ಹರಡದಂತೆ ತಡೆಯಲು ಕೈಗಾರಿಕೆಗಳಲ್ಲಿ ಸುರಕ್ಷತಾ ಹಾಗೂ  ನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಇದೇ ವೇಳೆ ಟಯೋಟಾ ಕಿರ್ಲೋಸ್ಕರ್‌ ಮೋಟಾರ್ನಲ್ಲಿ ಕೋವಿಡ್‌ 19 ಸೋಂಕು ಹರಡದಂತೆ ತಡೆಯಲು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಗದೀಶ ಶೆಟ್ಟರ್‌ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next