Advertisement

ಹೂಡಿಕೆ ಹೆಸರಲ್ಲಿ ವಂಚಕ ಕಂಪನಿಗಳು

11:32 PM Sep 25, 2019 | Lakshmi GovindaRaju |

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುವ ಐಎಂಎ ಮಾದರಿಯ ಮತ್ತೂಂದು ವಂಚಕ ಕಂಪನಿ ಬೆಳಕಿಗೆ ಬಂದಿದ್ದು, ಯಲ್ಲೋ ಫೈನಾನ್ಸ್‌ ಅಂಡ್‌ ಅರ್ನಿಂಗ್ಸ್‌, ಲಾಗೀನ್‌ ಇಂಡಿಯಾ ಫೈನಾನ್ಸ್‌ ಅಂಡ್‌ ಅರ್ನಿಂಗ್ಸ್‌, ಲಕ್ಷ್ಮಿ ಕಾರ್‌ಜೋನ್‌ ಸೇರಿ ಹಲವು ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

ಯಲ್ಲೋ ಫೈನಾನ್ಸ್‌ ಅಂಡ್‌ ಅರ್ನಿಂಗ್ಸ್‌, ಲಕ್ಷ್ಮಿ ಕಾರ್‌ಜೋನ್‌, ಯಲ್ಲೋ ಎಕ್ಸ್‌ಪ್ರೆಸ್‌ ಲಾಜಿಸ್ಟಿಕ್‌, ಯಲ್ಲೋ ಎಕ್ಸ್‌ಪ್ರೆಸ್‌ ಇಂಡಿಯಾ, ಲಾಗೀನ್‌ ಇಂಡಿಯಾ ಫೈನಾನ್ಸ್‌ ಅಂಡ್‌ ಅರ್ನಿಂಗ್ಸ್‌, ಲಕ್ಷ್ಮಿ ಕಾರ್‌ಜàನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗಳ ಹೆಸರಿನಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾವಿರಾರು ಗ್ರಾಹಕರಿಂದ ಹಣ ಸಂಗ್ರಹಿಸಿರುವುದು ಪತ್ತೆ ಹಚ್ಚಲಾಗಿದೆ.

ಖುದ್ದು ಕಂದಾಯ ಸಚಿವ ಆರ್‌.ಅಶೋಕ್‌ ಸುದ್ದಿಗೋಷ್ಠಿ ನಡೆಸಿ ವಂಚಕ ಕಂಪನಿಗಳ ಮಾಹಿತಿ ನೀಡಿದ್ದು, ಈ ಕಂಪನಿಗಳು ಸಾರ್ವಜನಿಕರಿಂದ ತಲಾ 2 ರಿಂದ 2.5 ಲಕ್ಷ ರೂ. ಸಂಗ್ರಹಿಸಿ ಹೂಡಿಕೆದಾರರ ಹೆಸರಿನಲ್ಲಿ ಕ್ಯಾಬ್‌ ಖರೀದಿಸಿ ಉಬರ್‌ ಸಂಸ್ಥೆಗಳಿಗೆ ಬಾಡಿಗೆಗೆ ಕೊಟ್ಟು ಮಾಸಿಕ 20 ರಿಂದ 25 ಸಾವಿರ ರೂ. ಆದಾಯ ಕೊಡುವುದಾಗಿ ನಂಬಿಸಿ ಹಣ ಸಂಗ್ರಹಿಸುತ್ತಿವೆ. ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸಿಐಡಿ ತನಿಖೆಗೂ ವಹಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಇಂತಹ ವಂಚಕ ಕಂಪನಿಗಳ ನಿಯಂತ್ರಿಸಲು ಹಾಗೂ ಸಾರ್ವಜನಿಕರಿಂದ ಹೂಡಿಕೆ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವ ಕಂಪನಿಗಳ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು. ಆರ್ಥಿಕ ಅಪರಾಧ, ನಿವೇಶನ ಹೆಸರಿನಲ್ಲಿ ವಂಚನೆ ಸೇರಿ ಎಲ್ಲ ರೀತಿಯ ವಂಚನೆ ಪ್ರಕರಣಗಳ ವಿರುದ್ಧ ಕಂದಾಯ ಇಲಾಖೆಯು ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ವಂಚನೆ ಹೇಗೆ?: ಐದು ಕಂಪನಿಗಳ ಹೆಸರಿನಲ್ಲಿ 2 ಸಾವಿರ ಜನರಿಂದ 2 ರಿಂದ 2.50 ಲಕ್ಷ ರೂ. ಹೂಡಿಕೆ ಹೆಸರಿನಲ್ಲಿ ಪಡೆದಿದ್ದು, ಅವರ ಹೆಸರಿನಲ್ಲಿಯೇ ಕಾರು ಖರೀದಿಸಿ ಅದನ್ನು ಉಬರ್‌ ಸಂಸ್ಥೆ ಜತೆ ಒಪ್ಪಂದ ಮಾಡಿಸಿ ಮಾಸಿಕ 27 ಸಾವಿರ ರೂ. ಆದಾಯ ನೀಡಲಾಗುವುದು ಎಂದು ನಂಬಿಸಲಾಗಿದೆ. ಆದರೆ, ಕಂಪನಿಯು ಹೂಡಿಕೆದಾರರ ಹೆಸರಿನಲ್ಲಿ ಕಾರು ನೋಂದಣಿ ಮಾಡಿಸದೆ ಕಂಪನಿಯ ಹೆಸರಿನಲ್ಲಿ ನೋಂದಣಿ ಮಾಡಿಸಿದೆ.

Advertisement

ಕೇವಲ 63 ಕಾರು ಹೂಡಿಕೆದಾರರ ಹೆಸರಿನಲ್ಲಿ, 100 ಕಾರು ಕಂಪನಿಯ ಹೆಸರಿನಲ್ಲಿ ನೋಂದಣಿ ಮಾಡಿಸಿದೆ. ಉಳಿದಂತೆ 2 ಸಾವಿರ ಗ್ರಾಹಕರಿಗೆ ಮಾಸಿಕ 10 ಸಾವಿರ ರೂ. ನೀಡಲಾಗುತ್ತಿದೆ. ಕಾರುಗಳ ನಿಲುಗಡೆ ಪ್ರದೇಶಕ್ಕೆ 6.50 ಲಕ್ಷ ರೂ. ಬಾಡಿಗೆ ಸಹ ಹೂಡಿಕೆದಾರರ ಹಣದಿಂದಲೇ ನೀಡಲಾಗುತ್ತಿರುವುದು ಉಪ ವಿಭಾಗಾಧಿಕಾರಿಗಳು ನಡೆಸಿದ ತನಿಖೆಯಿಂದ ಪತ್ತೆಯಾಗಿದೆ ಎಂದು ವಿವರಿಸಿದರು.

ಗ್ರಾಮಾಂತರ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್‌ ಜತೆಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ ಎಂದು ಹೇಳಿದರು. ಕೇರಳ ಮೂಲದ ರಮಿತ್‌ ಮಲ್ಹೋತ್ರ, ಜೋಜು ಥಾಮಸ್‌, ಡಿ. ನಾಯರ್‌, ಅನಂತ್‌ ಹಾಂಗಲ್‌ ಸೇರಿ ಹಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು ಆರೋಪಿಗಳ ಪತ್ತೆಗೂ ಸೂಚಿಸಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಶಾಸಕರಾದ ಪ್ರೀತಂಗೌಡ, ಬೆಳ್ಳಿ ಪ್ರಕಾಶ್‌ ಉಪಸ್ಥಿತರಿದ್ದರು.

ಜನತೆ ಜಾಗರೂಕರಾಗಿರಲಿ – ಆರ್‌.ಅಶೋಕ್‌: ಹೂಡಿಕೆ ಹೆಸರಿನಲ್ಲಿ ಹಣ ಪಡೆದು ವಂಚಿಸುವ ಆರ್ಥಿಕ ಅಪರಾಧಗಳ ಮಾಫಿಯಾ ರಾಜ್ಯಾದ್ಯಂತ ತಲೆ ಎತ್ತಿದ್ದು ಅಮಾಯಕರ ಬಳಿ ಹಣ ಪಡೆದು ವಂಚಿಸುತ್ತಿವೆ. ಸಾರ್ವಜನಿಕರು ಇಂತಹ ಕಂಪನಿಗಳ ಬಗ್ಗೆ ಜಾಗರೂಕರಾಗಿರಬೇಕು. ಹಣ ದುಪ್ಪಟ್ಟು, ಹೆಚ್ಚಿನ ಬಡ್ಡಿ ಆಸೆ, ಚಿನ್ನಾಭರಣ ಸೇರಿ ಮತ್ತಿತರ ಉಡುಗೊರೆ ಆಮಿಷವೊಡ್ಡಿ ಹಣ ಸಂಗ್ರಹಿಸುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಡಿ. ಅಂತಹ ಕಂಪನಿಗಳು ಕಂಡು ಬಂದರೆ ಪೊಲೀಸ್‌ ಅಥವಾ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸಚಿವ ಆರ್‌.ಅಶೋಕ್‌ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next