Advertisement

Fraud: ಟೊಮ್ಯಾಟೋ ವ್ಯಾಪಾರಿಗೆ ಬಿಳಿ ಹಾಳೆ ಕಟ್ಟು ಕೊಟ್ಟು  20 ಲಕ್ಟ ರೂ. ವಂಚನೆ

10:48 AM Jul 30, 2024 | Team Udayavani |

ಬೆಂಗಳೂರು: ತರಕಾರಿ ವ್ಯಾಪಾರಿಯೊಬ್ಬರಿಂದ 20 ಲಕ್ಷ ರೂ. ಮೌಲ್ಯದ 3 ಲೋಡ್‌ ಟೊಮ್ಯಾಟೋ ಪಡೆದುಕೊಂಡ ವಂಚಕರು, ಹಣವೆಂದು ಬಿಳಿ ಹಾಳೆಗಳ ಕಟ್ಟುಗಳನ್ನು ನೀಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರ ವಿರುದ್ಧ ವೈಟ್‌ ಫೀಲ್ಡ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕೋಲಾರದ ತರಕಾರಿ ವ್ಯಾಪಾರಿ ಆದಿತ್ಯ ಷಾ ಎಂಬುವರು ನೀಡಿದ ದೂರಿನ ಮೇರೆಗೆ ಸಂಜಯ್‌ ಜಿ. ಮತ್ತು ಮುಖೇಶ್‌ ಜಿ. ಎಂಬುವರ ವಿರುದ್ಧ ದೂರು ನೀಡಿದ್ದಾರೆ. ದೂರುದಾರ ಆದಿತ್ಯ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ತಮ್ಮ ದೊಡ್ಡಪ್ಪನ ಹೆಸರಿನಲ್ಲಿ ಟ್ರೇಡಿಂಗ್‌ ಲೈಸೆನ್ಸ್‌ ಪಡೆದು ತರಕಾರಿ ವ್ಯವಹಾರ ಮಾಡುತ್ತಿದ್ದಾರೆ. ಕೋಲಾರ ಎಪಿಎಂಸಿಯಲ್ಲಿ ರೈತರಿಂದ ತರಕಾರಿಗಳನ್ನು ಖರೀದಿಸಿ ಪಶ್ಚಿಮ ಬಂಗಾಳದ ಸಿಲಿಗುರಿ ಎಪಿಎಂಸಿ ಮಾರುಕಟ್ಟೆಗೆ ರವಾನಿಸುತ್ತಾರೆ. ಅಲ್ಲಿನ ಟ್ರೇಡರ್‌ಗಳು ತರಕಾರಿ ಸ್ವೀಕರಿಸಿ ಬಳಿಕ ಬ್ಯಾಂಕ್‌ ಅಥವಾ ವ್ಯಾಪಾರಿಗಳ ಮೂಲಕ ನಗದು ರೂಪದಲ್ಲಿ ಹಣ ಪಾವತಿಸುತ್ತಾರೆ.

ಜುಲೈ 10ರಂದು ಮುಖೇಶ್‌ ಎಂಬಾತ ಪಶ್ಚಿಮ ಬಂಗಾಳದ ಸಿಲಿಗಿರಿಗೆ 3 ಲೋಡ್‌ ಟೊಮ್ಯಾಟೋ ಕಳುಹಿಸುವಂತೆ ಆದಿತ್ಯಗೆ ಕರೆ ಮಾಡಿ ಕೇಳಿದ್ದಾನೆ. ಅದರಂತೆ ಆದಿತ್ಯ ಕೋಲಾರದಿಂದ 3 ಲೋಡ್‌ ಟೊಮ್ಯಾಟೋವನ್ನು ಸಿಲಿಗುರಿಗೆ ಕಳುಹಿಸಿದ್ದಾರೆ.

ಟೊಮ್ಯಾಟೋ ಸ್ವೀಕರಿಸಿದ ಬಳಿಕ ಮುಖೇಶ್‌, ಆದಿತ್ಯನ ದೊಡ್ಡಪ್ಪನಿಗೆ ಕರೆ ಮಾಡಿ ಬೆಂಗಳೂರಿನ ಸಂಜಯ್‌ ಎಂಬುವರ ಮೂಲಕ ನಿಮಗೆ ಹಣ ಕಳುಹಿಸಿದ್ದೇನೆ. ಅವರು ವೈಟ್‌ ಫೀಲ್ಡ್‌ನ ಹಗದೂರಿನ ಬೇಕರಿ ಬಳಿ ಹಣ ನೀಡುತ್ತಾರೆ ಎಂದು ತಿಳಿಸಿದ್ದ. ಅದರಂತೆ ಆದಿತ್ಯ ಜುಲೈ 15ರಂದು ಮಧ್ಯಾಹ್ನ ಹಗದೂರಿನ ಬೇಕರಿ ಬಳಿ ಸಂಜಯ್‌ನನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಂಜಯ್‌ 20 ಲಕ್ಷ ರೂ. ಹಣವಿದೆ ಎಂದು 500 ರೂ. ಮುಖಬೆಲೆಯ ಬ್ಯಾಂಕ್‌ವೊಂದರ ಚೀಟಿಯಿದ್ದ ಹಣದ 4 ಪೊಟ್ಟಣಗಳನ್ನು ಆದಿತ್ಯಗೆ ನೀಡಿದ್ದಾನೆ. ಬೇಕರಿ ಬಳಿ ಸಾಕಷ್ಟು ಜನರು ಇದ್ದ ಹಿನ್ನೆಲೆಯಲ್ಲಿ ಹಣದ ಪೊಟ್ಟಣಗಳನ್ನು ಬಿಚ್ಚಿ ಪರಿಶೀಲಿಸದೆ ಆ ಹಣದೊಂದಿಗೆ ಆದಿತ್ಯ ಕೋಲಾರಕ್ಕೆ ತೆರಳಿದ್ದಾರೆ. ಮನೆಗೆ ತೆರಳಿ ನೋಡಿದಾಗ ಬಿಳಿ ಹಾಳೆ ಇಟ್ಟು ವಂಚನೆ ಮಾಡಿರುವುದು ಗೊತ್ತಾಗಿದೆ.

ಒಂದು ಕಟ್ಟಿನಲ್ಲಿ ಒಂದೇ ಅಸಲಿ ನೋಟು !:  ಕೋಲಾರದ ತರಕಾರಿ ವ್ಯಾಪಾರಿ ಆದಿತ್ಯ ಮತ್ತು ಅವರ ದೊಡ್ಡಪ್ಪ ಹಣದ ಪೊಟ್ಟಣಗಳನ್ನು ಬಿಚ್ಚಿ ನೋಡಿದಾಗ 500 ರೂ. ಮುಖಬೆಲೆಯ ನೋಟಿನ 10 ಕಟ್ಟುಗಳು ಕಂಡು ಬಂದಿವೆ. ಈ ಪೈಕಿ ಒಂದು ಕಟ್ಟುನ್ನು ಬಿಚ್ಚಿ ನೋಡಿದಾಗ ಕಟ್ಟಿನ ಮೇಲೆ 500 ರೂ. ಮುಖಬೆಲೆಯ ಅಸಲಿ ನೋಟು ಇರಿಸಿ, ಒಳಗೆ ಬಿಳಿ ಹಾಳೆಗಳು ಇರುವುದು ಕಂಡು ಬಂದಿದೆ. ತಕ್ಷಣ ಮುಖೇಶ್‌ ಮತ್ತು ಸಂಜಯ್‌ಗೆ ಕರೆ ಮಾಡಿದಾಗ ಇಬ್ಬರ ಮೊಬೈಲ್‌ ಗಳು ಸ್ವಿಚ್ಡ್ ಆಫ್ ಬಂದಿದೆ. ಈ ಸಂಬಂಧ ಆದಿತ್ಯ ವೈಟ್‌ ಫೀಲ್ಡ್‌ ಠಾಣೆಗೆ ದೂರು ನೀಡಿದ್ದು, 3 ಲೋಡ್‌ ಟೊಮ್ಯಾಟೋಗೆ 20 ಲಕ್ಷ ರೂ. ಹಾಗೂ ಬಾಕಿ 12 ಲಕ್ಷ ರೂ. ಸೇರಿ ಒಟ್ಟು 32 ಲಕ್ಷ ರೂ. ವಂಚಿಸಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next