ಬೆಂಗಳೂರು: ನಿವೇಶನ ಕೊಡಿಸುವುದಾಗಿ ಆಂಧ್ರಪ್ರದೇಶ ಮೂಲದ ಉದ್ಯಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು 1.90 ಕೋಟಿ ರೂ. ವಂಚಿಸಿದ್ದ ಐವರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಿವಾಸಿಗಳಾದ ಸಂಜಯ್ ಶ್ರೀನಿವಾಸ್, ಲೋಕನಾಥಾಚಾರಿ, ಪ್ರಭಾಕರ್ ರೆಡ್ಡಿ, ರಾಜೇಶ್ ಮತ್ತು ಪೊಲ್ವಿನ್ ರವಿಕುಮಾರ್ ಬಂಧಿತರು. ಆರೋಪಿಗಳಿಂದ 65 ಲಕ್ಷ ರೂ. ನಗದು, 8.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ದೂರುದಾರ, ಆಂಧ್ರಪ್ರದೇಶ ಮೂಲದ ಉದ್ಯಮಿ ರಾಧಾಕೃಷ್ಣ ಎಂಬವರನ್ನು ಸಂಪರ್ಕಿಸಿದ್ದ ಆರೋಪಿಗಳು, ತಿರುಪತಿಯಲ್ಲಿ ನಿವೇಶನ ಕೊಡಿಸುತ್ತೇನೆ. ವ್ಯವಹಾರ ಮಾತನಾಡಲು ಬೆಂಗಳೂರಿಗೆ ಬರುವಂತೆ ಕರೆಯಿಸಿಕೊಂಡಿದ್ದಾರೆ. ಬಳಿಕ ನಿವೇಶನ ವಿಚಾರ ಮಾತನಾಡಬೇಕೆಂದು ರಾಧಾಕೃಷ್ಣ ಅವರ ಸ್ನೇಹಿತ ಶಿವಕುಮಾರ್ ಒಬ್ಬರನ್ನು ಮಾತ್ರ 1.90 ಕೋಟಿ ರೂ. ಜತೆ ಕರೆದೊಯ್ದಿದ್ದರು. ಮಾರ್ಗ ಮಧ್ಯೆ ಬಾಯಾರಿಕೆಯಾಗುತ್ತಿದೆ ನೀರು ತರುವಂತೆ ನಿಲ್ಲಿಸಿದ್ದಾರೆ.
ಶಿವಕುಮಾರ್ ನೀರಿನ ಬಾಟಲಿ ತರಲು ಹೋದಾಗ ಆರೋಪಿಗಳು ಕಾರಿನ ಸಮೇತ ಹಣ ಕದ್ದು ಪರಾರಿಯಾಗಿದ್ದಾರೆ. ಬಳಿಕ ಶಿವಕುಮಾರ್ ಈ ವಿಚಾರವನ್ನು ಸ್ನೇಹಿತ ರಾಧಾಕೃಷ್ಣಗೆ ಮಾಹಿತಿ ನೀಡಿದ್ದಾರೆ. ಬಳಿಕ ಠಾಣೆಗೆ ಬಂದು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕಳವು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಠಾಣಾಧಿಕಾರಿ ಬಿ.ಭರತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.