ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದ ಡಿಪ್ಲೊಮಾ ಪದವೀಧರ ಅನಿಲ್ ಕುಮಾರ್ ಎಂಬಾತನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಮೂಲದ ಅನಿಲ್ ಕುಮಾರ್, ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದು, ಬಹುಮಹಡಿ ಕಟ್ಟಡ, ಕೆಪಿಎಸ್‌ಸಿ ಕಚೇರಿ ಸುತ್ತ ಓಡಾಡಿಕೊಂಡಿದ್ದ. ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರ ರನ್ನು ಸಂಪರ್ಕಿಸಿ ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿ, ತಾನು ಮಾಜಿ ಸಚಿವರು ಹಾಗೂ ಪ್ರಮುಖ ರಾಜಕಾರಣಿಗಳ ಸಂಬಂಧಿ ಎಂದು ಹೇಳಿಕೊಂಡು ಕೆಪಿಎಸ್‌ಸಿಯಲ್ಲಿ ಟೈಪಿಸ್ಟ್ ಸೇರಿ ವಿವಿಧ ಹುದ್ದೆ ಕೊಡಿಸುವುದಾಗಿ ನಂಬಿಸಿ ಆಕಾಂಕ್ಷಿಗಳಿಂದ ಹಣ ಪಡೆದು ಮೋಸ ಮಾಡುತ್ತಿದ್ದ.
ಈ ರೀತಿ ನಾಲ್ವರಿಂದ ಆರೋಪಿ ಹಣ ಪಡೆದಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನ.29ರಂದು ಬಿಸಿಎ ಪದವೀಧರ ಗಿರೀಶ್ ಎಂಬವರ ತಾಯಿಗೆ ದೂರವಾಣಿ ಕರೆ ಮಾಡಿದ್ದ ಅನಿಲ್, ತಾನು ಕೆಪಿಎಸ್‌ಸಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದ.
ಬಳಿಕ ಆಯೋಗದಲ್ಲಿ ಟೈಪಿಸ್ಟ್ ಹುದ್ದೆಗಳು ಖಾಲಿಯಿದ್ದು, ಹಣ ನೀಡಿದರೆ ನಿಮ್ಮ ಮಗನಿಗೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ, 18 ಸಾವಿರ ರೂ. ಕೇಳಿದ್ದ. ಆತನ ಮಾತು ನಂಬಿದ ಮಹಿಳೆ, ಫೋನ್‌ಪೇ ಆ್ಯಪ್ ಮೂಲಕ ಎಂಟು ಸಾವಿರ ರೂ.ಗಳನ್ನು ಅನಿಲ್‌ಗೆ ಕಳುಹಿಸಿದ್ದಾರೆ.
ಇದಾದ ಬಳಿಕ ಡಿ.2ರಂದು ಬಹುಮಹಡಿ ಕಟ್ಟಡ (ಎಂ.ಎಸ್.ಬಿಲ್ಡಿಂಗ್) ಬಳಿ ಗಿರೀಶ್ ಅವರನ್ನು ಭೇಟಿ ಮಾಡಿದ್ದ ಆರೋಪಿ, ಅವರಿಂದ 10 ಸಾವಿರ ರೂ. ಪಡೆದು ಕೆಲ ಹೊತ್ತಿನಲ್ಲಿ ಬರುತ್ತೇನೆ ಎಂದು ಹೇಳಿ ಹೋದವನು ವಾಪಸ್ ಬರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ.
ಇದರಿಂದ ಅನುಮಾನಗೊಂಡ ಗಿರೀಶ್, ಲೋಕಸೇವಾ ಆಯೋಗಕ್ಕೆ ತೆರಳಿ ಅನಿಲ್ ಎಂಬಾತನ ಬಗ್ಗೆ ವಿಚಾರಿಸಿದಾಗ, ಅಂತಹ ಹೆಸರಿನ ವ್ಯಕ್ತಿ ಇಲ್ಲಿ ಕೆಲಸ ಮಾಡುತ್ತಿಲ್ಲ. ಹಣ ಪಡೆದು ಕೆಲಸ ನೀಡುವುದೂ ಇಲ್ಲ ಎಂದು ಹೇಳಿದ್ದಾರೆ. ಕಡೆಗೆ ಮೋಸ ಹೋಗಿರುವುದು ಗೊತ್ತಾಗಿ ಗಿರೀಶ್ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.