ಕಲಬುರಗಿ: ಹಣ ಠೇವಣಿ ಹೆಸರಲ್ಲಿ ಲಕ್ಷಾಂತರ ಗ್ರಾಹಕರು ಹಾಗೂ ಏಜೆಂಟ್‌ಗಳಿಗೆ ವಂಚಿಸಿರುವ ಅಗ್ರಿಗೋಲ್ಡ್ ಕಂಪನಿ ವಿರುದ್ಧ ಸೂಕ್ತ ಕ್ರಮಕೈಗೊಂಡು ಗ್ರಾಹಕರಿಗೆ ಹಣ ಮರು ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದರು.
ಆಂಧ್ರ ಮೂಲದ ಅಗ್ರಿಗೋಲ್ಡ್ ಕಂಪನಿ ದೇಶದ ಎಂಟು ರಾಜ್ಯಗಳಲ್ಲಿ ಜನಸಾಮಾನ್ಯರಿಗೆ ನಂಬಿಕೆ ಹುಟ್ಟಿಸಿ ಸುಮಾರು 32 ಲಕ್ಷ ಖಾತೆಗಳನ್ನು ತೆರೆದಿದೆ. ಕರ್ನಾಟಕದಲ್ಲಿ 8.5 ಲಕ್ಷ ಗ್ರಾಹಕರನ್ನು ಹೊಂದಿರುವ ಅಗ್ರಿಗೋಲ್ಡ್ ಕಂಪನಿ ಅಂದಾಜು 2,500 ಕೋಟಿ ರೂ. ಸಂಗ್ರಹಿಸಿದೆ. ಗ್ರಾಹಕರಿಗೆ ನೀಡಿದ ಸುಮಾರು 700 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚೆಕ್‌ಗಳು ಬೌನ್ಸ್ ಆಗಿದ್ದು, 2015ರಲ್ಲಿ ಅಗ್ರಿಗೋಲ್ಡ್ ಕಂಪನಿ ತನ್ನ ವಹಿವಾಟು ಸ್ಥಗಿತಗೊಳಿಸಿ ಗ್ರಾಹಕರಿಗೆ ಮತ್ತು ಏಜೆಂಟರಿಗೆ ವಂಚಿಸಿದೆ ಎಂದು ಆರೋಪಿಸಿದರು.
ಲಕ್ಷಾಂತರ ಗ್ರಾಹಕರಿಂದ ಠೇವಣಿ ಸಂಗ್ರಹಿಸಿ ಆ ಹಣವನ್ನು ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಅಗ್ರಿಗೋಲ್ಡ್ ಕಂಪನಿ ಹೂಡಿಕೆ ಮಾಡಿದೆ. ಕರ್ನಾಟಕದಲ್ಲಿ ಸಂಗ್ರಹಿಸಲಾದ ಹಣವನ್ನು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೂಡಿಕೆ ಮಾಡಿ ಅಲ್ಲಿ ಆಸ್ತಿಗಳನ್ನು ಖರೀದಿಸಿದೆ. ಆದ್ದರಿಂದ ಅಗ್ರಿಗೋಲ್ಡ್ ಜಪ್ತಿ ಮಾಡಿ, ಎಲ್ಲ ಗ್ರಾಹಕರಿಗೂ ಠೇವಣಿ ಮೌಲ್ಯದ ಆಧಾರದಲ್ಲಿ ಸಮನಾಗಿ ಹಂಚಿಕೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಭೀಮಾಶಂಕರ ಮಾಡಿಯಾಳ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೊಬ್ಬಿ, ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಗೋಗಿ, ನಾಗರಾಜ ಪಾಟೀಲ, ಶಂಕರ ಗುಗ್ಗರಿ, ಸವಿತಾಬಾಯಿ ಚವ್ಹಾಣ, ಗುರುಲಿಂಗಪ್ಪ ಬನ್ನಟ್ಟಿ, ಈರಣ್ಣ ಮದ್ದರಕಿ, ಶರಣಗೌಡ ಯರಗೋಳ, ಸೂಗಮ್ಮ ಸ್ಥಾವರಮಠ, ಸುವರ್ಣ ದೇಶಪಾಂಡೆ, ಪುಷ್ಮಾ ಪುರಾಣಿಕ, ಮಧುಮತಿ ತಿಂಥಣಿ, ವನಿತಾ ತಳಕಿನ, ಖಾದೀರ್ ಬಳವಾಡಗಿ, ರಾಜೇಂದ್ರ ನಾಯ್ಕೋಡಿ, ಮೌನೇಶ ಹೊನಬಾ, ಸಿದ್ದಣ್ಣ ಶಹಾಬಾಬ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.