ರಾಯಚೂರು: ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವ ಅಗ್ರಿಗೋಲ್ಡ್ ಸಂಸ್ಥೆಗೆ ಸಂಬಂಧಿಸಿದ ಆಸ್ತಿಗಳನ್ನು ಹರಾಜು ಹಾಕಿ ಬಂದ ಹಣದಲ್ಲಿ ಕಂಪನಿಯ 8.5 ಲಕ್ಷ ಗ್ರಾಹಕರಿಗೆ ನ್ಯಾಯ ಕಲ್ಪಿಸುವಂತೆ ಅಗ್ರಿಗೋಲ್ಡ್ ಗ್ರಾಹಕರ ಹಾಗೂ ಏಜೆಂಟ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ, ಈ ಸಂಸ್ಥೆ ನಂಬಿ ಸಾಕಷ್ಟು ಜನ ಹಣ ಹೂಡಿಕೆ ಮಾಡಿದ್ದರು. ಈ ಕಂಪನಿ ಎಂಟು ರಾಜ್ಯಗಳಲ್ಲಿ 32 ಲಕ್ಷ ಖಾತೆಯುಳ್ಳ ಗ್ರಾಹಕರಿಗೆ 6,385 ಕೋಟಿ ಹಣ ಪಾವತಿಸಬೇಕಿದೆ. ನಮ್ಮ ರಾಜ್ಯದಲ್ಲೂ ಸುಮಾರು 8.5 ಲಕ್ಷ ಗ್ರಾಹಕರಿಂದ ಅಂದಾಜು 1,700 ಕೋಟಿ ಹಣ ಠೇವಣಿ ಸಂಗ್ರಹಿಸಿದ್ದು, ಠೇವಣಿದಾರರಿಗೆ ಹಣ ಮರುಪಾವತಿಲ್ಲ ಎಂದು ಆರೋಪಿಸಿದರು.
ಈ ಪ್ರಕರಣ ಸಿಐಡಿ ತನಿಖೆ ನಡೆಸಿದ್ದು, ಸಂಸ್ಥೆಯು ರಾಜ್ಯದಲ್ಲಿ 400 ಕೋಟಿ ಬೆಲೆ ಬಾಳುವ ಸ್ಥಿರ ಚರಾಸ್ತಿಗಳನ್ನು ಜಪ್ತಿ ಮಾಡಿದೆ. ಕಳೆದ ಆರು ವರ್ಷದಿಂದ ಗ್ರಾಹಕರಿಗೆ ಯಾವ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.
ಈಗಾಗಲೇ 20 ಲಕ್ಷ ಗ್ರಾಹಕರನ್ನು ಹೊಂದಿರುವ ಆಂಧ್ರ ಸರ್ಕಾರ 905 ಕೋಟಿ ಬಿಡುಗಡೆ ಮಾಡಿ 20 ಸಾವಿರ ರೂ. ನಂತೆ ಠೇವಣಿದಾರರಿಗೆ ಹಂಚಿಕೆ ಮಾಡಿ, 10.40 ಲಕ್ಷ ಜನರಿಗೆ ನ್ಯಾಯ ದೊರಕಿಸಿಕೊಟ್ಟಿದೆ. ರಾಜ್ಯ ಸರ್ಕಾರ ಕೂಡ ಆಂಧ್ರದ ಮಾದರಿಯಲ್ಲಿಯೇ ಆಸ್ತಿ ಹರಾಜು ಹಾಕಿ ನ್ಯಾಯ ಒದಗಿಸಲಿ. ಜಿಲ್ಲೆಯಲ್ಲಿ 35 ಸಾವಿರಕ್ಕೂ ಅಧಿಕ ಖಾತೆಗಳಿದ್ದು, 150 ಕೋಟಿ ಹಣ ಪಾವತಿಸಬೇಕಿದೆ. ಏಜೆಂಟರನ್ನು ನಂಬಿ ಜನ ಹಣ ಹೂಡಿದ್ದು, ಗ್ರಾಹಕರು ಏಜೆಂಟರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ತಕ್ಷಣ ಸರ್ಕಾರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ನಾಗರಾಜ, ಜಿಲ್ಲಾ ಕಾರ್ಯದರ್ಶಿ ಇರ್ಫಾನ್, ಸದಸ್ಯರಾದ ರಂಗನಾಥ, ಚಾಂದ್ ಪಾಷಾ, ರವಿಕುಮಾರ್, ಮಾಲಾ, ವಾಣಿಶ್ರೀ, ಗೋವಿಂದಮ್ಮ, ಜಿ.ಕೆ. ಶ್ರೀನಿವಾಸ, ಮಹೆಬೂಬ್ ಇತರರಿದ್ದರು