ಬೆಂಗಳೂರು: ವೈದ್ಯಕೀಯ ಶಿಕ್ಷಣದ ಸೀಟು ಕೊಡಿಸುವುದಾಗಿ 10.80 ಲಕ್ಷ ರೂ. ವಂಚಿಸಿದ್ದ ನಾಲ್ವರು ಅಂತಾರಾಜ್ಯ ವಂಚಕರು ಹೈಗ್ರೌಂಡ್ಸ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಿಹಾರ ಮೂಲದ ನಿಖಿಲ್ ಜ್ವಾಲಪುರ, ಉತ್ತರ ಪ್ರದೇಶದ ಅಶುತೋಷ್, ಬಸಂತ್ ಕುಮಾರ್, ಆಶಿಶ್ ಆನಂದ್ ಬಂಧಿತ. ಬಂಧಿತರಿಂದ 10.80 ಲಕ್ಷ ರೂ ವಶಕ್ಕೆ ಪಡೆಯಲಾಗಿದೆ.
ಮೈಸೂರು ಮೂಲದ ಮಂಜುನಾಥ್ ಎಂಬುವವರ ಎರಡನೇ ಪುತ್ರ ಜೀವನ್ ಮೆಡಿಕಲ್ ಸೀಟ್‌ಗಾಗಿ ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಸಿಗದ ಹಿನ್ನೆಲೆಯಲ್ಲಿ ಮತ್ತೂಮ್ಮೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ. ಹಾಸನದ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜೀವನ್ ಸಹೋದರನ ಮೊಬೈಲ್ ಗೆ ಮೆಡಿಕಲ್ ಸೀಟಿಗೆ 75 ಲಕ್ಷ ರೂ. ಪ್ಯಾಕೇಜ್ ಎಂಬ ಸಂದೇಶ ಬಂದಿತ್ತು. ಇದಾದ ಬಳಿಕ ಅಪರಿಚಿತ ಮಹಿಳೆಯೊಬ್ಬಳು ಮಂಜುನಾಥ್ ಮೊಬೈಲ್‌ಗೆ ಕರೆ ಮಾಡಿ ತನ್ನನ್ನು ರೋಷನಿ ಎಂದು ಪರಿಚಯಿಸಿಕೊಂಡಿದ್ದಳು.
ನಾವು ಹಲವು ವರ್ಷಗಳಿಂದ ಮೆಡಿಕಲ್ ಸೀಟು ಕೊಡಿಸುತ್ತಿದ್ದೇವೆ. ನಿಮ್ಮ ಮಗನಿಗೆ ದಾವಣಗೆರೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟ್ ಕೊಡಿಸುತ್ತೇವೆ ಎಂದು ನಂಬಿಸಿದ್ದಳು. ಇದಕ್ಕೆ 60 ಲಕ್ಷ ರೂ. ತಗುಲುತ್ತದೆ ಎಂದು ತಿಳಿಸಿದ್ದಳು. ಇದಾದ ಬಳಿಕ ಸೀಟ್ ಕೊಡಿಸುವ ಮಾತುಮಾತುಕತೆ ನಡೆಸಲು ಮಂಜುನಾಥ್ ಪತ್ನಿ ಕಲಾ ಅವರನ್ನು ಸೆ.24ರಂದು ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯ ಕಚೇರಿಯೊಂದಕ್ಕೆ ಕರೆಸಿಕೊಂಡಿದ್ದರು. ಅಲ್ಲಿದ್ದ ವ್ಯಕ್ತಿಯೊಬ್ಬ ಯೋಗೀಶ್ ಎಂದು ಪರಿಚಯಿಸಿಕೊಂಡು ಸರ್ಕಾರಿ ಶುಲ್ಕದಲ್ಲಿಯೇ ನಿಮ್ಮ ಮಗನಿಗೆ ಮೆಡಿಕಲ್ ಸೀಟ್ ಕೊಡಿಸುತ್ತೇನೆ. ಇದಕ್ಕೆ 3 ಲಕ್ಷ ರೂ. ಕಮಿಷನ್ ಕೊಡಿಸುವಂತೆ ಕೇಳಿಕೊಂಡಿದ್ದ.
ಬಳಿಕ ತಮ್ಮ ಸಂಸ್ಥೆಯ ಮುಖ್ಯಸ್ಥರು ಎಂದು ವ್ಯಕ್ತಿಯೊಬ್ಬರಿಗೆ ಕರೆ ಮಾಡಿಸಿ ಕೊಟ್ಟಿದ್ದರು. ಅವರು 10.80 ಲಕ್ಷ ರೂ. ಅನ್ನು ಪಾವತಿಸಬೇಕೆಂದು ತಿಳಿಸಿ ಕಚೇರಿಯಲ್ಲಿದ್ದ ಆರೋಪಿಗಳಾದ ಅಶುತೋಷ್, ನಿಖಿಲ್ ಭೇಟಿ ಮಾಡುವಂತೆ ಸೂಚಿಸಿದ್ದ. ಅದರಂತೆ ಆರೋಪಿಗಳನ್ನು ಕಲಾ ಭೇಟಿಯಾದಾಗ, ಆರೋಪಿಗಳು ಬ್ಯಾಂಕ್ ಖಾತೆಯೊಂದರ ನಂಬರ್ ಕೊಟ್ಟು ದುಡ್ಡು ಟೆಪಾಸಿಟ್ ಮಾಡುವಂತೆ ಹೇಳಿದ್ದಾರೆ. ಇದನ್ನು ನಂಬಿದ ಮಂಜುನಾಥ್ ಆರ್‌ಟಿಜಿಎಸ್ ಮೂಲಕ ಹಂತವಾಗಿ 10.80 ಲಕ್ಷ ರೂ. ಹಾಕಿಸಿಕೊಂಡಿದ್ದ.
ಸಂಪರ್ಕಕ್ಕೆ ಸಿಗದೇ ವಂಚನೆ: ಇದಾದ ಬಳಿಕ ಮೆಡಿಕಲ್ ಸೀಟಿನ ಬಗ್ಗೆ ವಿಚಾರಿಸಲು ಸೆ.27ರಂದು ಯೋಗೀಶ್‌ಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಿರಲಿಲ್ಲ. ಇತರ ಆರೋಪಿಗಳೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅನುಮಾನದ ಮೇರೆಗೆ ಕಲಾ ಕನ್ನಿಂಗ್ಯಾಮ್ ರಸ್ತೆಯಲ್ಲಿರುವ ಆರೋಪಿಗಳ ಕಚೇರಿಗೆ ಹೋಗಿ ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ಪಕ್ಕದ ಅಂಗಡಿಯವರ ಬಳಿ ವಿಚಾರಿಸಿದಾಗ ಆರೋಪಿಗಳ ಕಳ್ಳಾಟ ಬಯಲಾಗಿದೆ. ತಾವು ಮೋಸ ಹೋಗಿರುವುದು ಅರಿತು ಕಲಾ ಅವರು ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಲೆಗೆ ಬೀಳಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ನಾಲ್ವರು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.
ವೈದ್ಯಕೀಯ ಸೀಟು ಅಪೇಕ್ಷಿತರಿಗೆ ವಂಚನೆ: ಆರೋಪಿಗಳು ಕಚೇರಿಯಲ್ಲಿ ಹತ್ತಕ್ಕೂ ಅಧಿಕ ಸಿಬ್ಬಂದಿಯನ್ನು ಹೊಂದಿದ್ದು, ಅವರ ಮೂಲಕ ವೈದ್ಯಕೀಯ ಸೀಟು ಅಪೇಕ್ಷಿಸುತ್ತಿರುವವರನ್ನು ಸಂಪರ್ಕಿಸಿ ವಂಚಿಸುತ್ತಿದ್ದರು. ಆರೋಪಿಗಳ ಕಚೇರಿಯಲ್ಲಿ ನಕಲಿ ಹೆಸರಿನ ಬ್ಯಾಂಕ್ ಖಾತೆಗಳ ಚೆಕ್ಕುಗಳು, ಕಂಪ್ಯೂಟರ್, ಮೊಬೈಲ್, ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬ್ಯಾಂಕ್ ಖಾತೆ ಜಪ್ತಿಗೆ ಮನವಿ ಸಲಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್.ಎಚ್.ಟಿ ಹೇಳಿದ್ದಾರೆ.