ಬೆಂಗಳೂರು: ಖಾಸಗಿ ಕಾಲೇಜಿನಲ್ಲಿ ಸೀಟು ಕೊಡಿಸವುದಾಗಿ ಯುವತಿಯಿಂದ 1.27 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ವರ್ ಬಂಧಿತ. ಆರೋಪಿಯಿಂದ 1,72,500 ರೂ. ನಗದು, 3 ಮೊಬೈಲ್, 4 ಲ್ಯಾಪ್ ಟಾಪ್, 7 ಸಿಮ್ ಕಾರ್ಡ್, 21 ಗ್ರಾಂ ಚಿನ್ನದ ಸರ, 3 ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ರೇವಾ ಕಾಲೇಜಿನಲ್ಲಿ ಯುವತಿ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿದ್ದರು. ಆದರೆ, ಆಕೆಗೆ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ಸೀಟ್ ಬೇಕಾಗಿತ್ತು. ಹೀಗಾಗಿ ಕಂಪ್ಯೂಟರ್ ಸೈನ್ಸ್ ಸೀಟ್‌ಗಾಗಿ ಪ್ರಯತ್ನಿಸುತ್ತಿದ್ದರು. ಬೇರೆಯವರ ಸೀಟ್ ಕ್ಯಾನ್ಸಲ್ ಆಗಿ ಕಂಪ್ಯೂಟರ್ ಸೈನ್ಸ್ ಸೀಟ್‌ಸಿಗಬಹುದಾ? ಎಂದು ಕಾಯುತ್ತಿದ್ದರು. ಅದೇ ವೇಳೆ ಕಂಪ್ಯೂಟರ್ ಸೈನ್ಸ್ ಸೀಟ್ ಕ್ಯಾನ್ಸಲ್ ಆಗಿದೆ ಎಂದು ಯುವತಿ ಮೊಬೈಲ್‌ಗೆ ಸಂದೇಶ ಬಂದಿದೆ.ಆ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ಆರೋಪಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆರೋಪಿಮಾತು ನಂಬಿದ ವಿದ್ಯಾರ್ಥಿನಿ ಜ.13ರಂದು ಆರೋಪಿ ಬ್ಯಾಂಕ್ ಖಾತೆಗೆ 1.27 ಲಕ್ಷರೂ. ವರ್ಗಾವಣೆ ಮಾಡಿದ್ದರು. ಆದರೆ, ಹಣ ಜಮೆಯಾಗು ತ್ತಿದ್ದಂತೆ ಆರೋಪಿ ಫೋನ್ ಸ್ವಿಚ್ಡ್ ಆಫ್ ಮಾಡಿ ಕೊಂಡಿದ್ದಾನೆ. ಬಳಿಕ ಆತಂಕಗೊಂಡು ಈ ಬಗ್ಗೆ ಕಾಲೇಜಿನಲ್ಲಿ ವಿಚಾರಿಸಿದಾಗ, ಕಾಲೇಜು ಸಿಬ್ಬಂದಿ ಯಾವುದೇ ಸಂದೇಶ ಕಳುಹಿಸಿಲ್ಲ ಎಂದು ತಿಳಿಸಿದ್ದಾರೆ.
ಅದನ್ನು ಅರಿತ ಯುವತಿ ಘಟನೆ ಸಂಬಂಧ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈಶಾನ್ಯವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.