ಹರಪನಹಳ್ಳಿ: ಹೆಚ್‌ಬಿಎನ್ ಡೈರಿಸ್ ಮತ್ತು ಅಲೈಡ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿ ಅನೇಕ ಕೂಲಿ ಕಾರ್ಮಿಕರಿಂದ ಆರ್‌ಡಿ ರೂಪದಲ್ಲಿ ಹಣ ಕಟ್ಟಿಸಿಕೊಂಡು ಲಕ್ಷಾಂತರ ರೂ.ಗಳನ್ನು ವಂಚಿಸಿದ ಪ್ರಕರಣ ಪಟ್ಟಣದಲ್ಲಿ ನಡೆದಿದೆ.
ಈ ಕುರಿತು ಮಂಗಳವಾರ ಪಟ್ಟಣದ ಸೊಂಡೂರುಗೇರಿ ಬೀರೇಶ್ವರ ದೇವಾಲಯದ ಆವರಣದಲ್ಲಿ ಹಣವನ್ನು ಕಳೆದುಕೊಂಡ ಪ್ರತಿನಿಧಿ ನೇತ್ರಾವತಿ ಮತ್ತು ಇತರರು ಸುದ್ದಿಗಾರರೊಂದಿಗೆ ಲಿಖಿತ ಆರೋಪ ಮಾಡಿದರು.
ಪಟ್ಟಣದ ಸೊಂಡರಗೇರಿಯ ಅಂದಾಜು 50 ಕ್ಕೂ ಹೆಚ್ಚು ಬಡ ಕೂಲಿಕಾರ್ಮಿಕರು 2021ರಿಂದ ಆರ್‌ಡಿ ರೂಪದಲ್ಲಿ ಉತ್ತಮ ಬಡ್ಡಿ ನೀಡುತ್ತೇವೆ ಎಂದು ಹೇಳಿ ಪ್ರತಿ ತಿಂಗಳು 500, 300, 200 ರಂತೆ ಲಕ್ಷಾಂತರ ರೂ.ಗಳನ್ನು ಪಾವತಿಸಿಕೊಂಡು 5 ವರ್ಷದ ನಂತರ ಬಡ್ಡಿ ಸಮೇತ ಹಣ ಕೊಡದೆ ಕಚೇರಿಯನ್ನು ಸ್ಥಗಿತಗೊಳಿಸಿ ಹೇಳದೆ, ಕೇಳದೆ ಸಿಬ್ಬಂದಿಗಳು ಪರಾರಿಯಾಗಿದ್ದಾರೆ.
ವಂಚಿಸಿದ ಕಂಪನಿ ನಮಗೆ ಹೊಸದಾಗಿದ್ದು, ಸ್ಥಳೀಯ ಕೆಲವರು ಒಳ್ಳೆಯ ಆದಾಯ ಬರುತ್ತದೆ ಎಂದು ನಮ್ಮನ್ನು ನಂಬಿಸಿ, ಮನೆಗಳಿಗೆ ಬಂದು ನಮ್ಮಿಂದ ಹಣವನ್ನು ಕಟ್ಟಿಸಿ ಆ ನಂತರ ಕೇಳಲು ಹೋದರೆ ಹಾರಿಕೆ ಉತ್ತರ ನೀಡುತ್ತಾರೆ. ಸ್ಕೀಂನ ನಿಗದಿತ 6 ವರ್ಷ ಮುಗಿದ ನಂತರ ಹಣ ಹಾಕಿಸಿದ ಸ್ಥಳೀಯರು ಕಳೆದ 4-5 ವರ್ಷಗಳಿಂದ ಹಣ ಕೊಡಿಸುವುದಾಗಿ ಭರವಸೆ ನೀಡುತ್ತಾ ಇಲ್ಲಿಯವರೆಗೂ ಕಾಲಹರಣ ಮಾಡಿದ್ದಾರೆ.
ನಮ್ಮ ತಂಡಕ್ಕೆ ಅಂದಾಜು 7-8 ಲಕ್ಷ ರೂ.ಗಳು ವಂಚನೆಯಾಗಿದ್ದು, ಇದೇ ತಾಲೂಕಿನಾದ್ಯಂತ ಸಾಕಷ್ಟು ಜನರ ಕೋಟ್ಯಾಂತರ ರೂ.ವಂಚನೆಯಾಗಿದೆ. ಅಲ್ಲದೇ ಈಗಾಗಲೇ ನಾನು ಕಟ್ಟಿಸಿದ ಕೆಲವರಿಗೆ ಹಣವನ್ನು ನನ್ನ ಕಡೆಯಿಂದ ಸ್ವಲ್ಪಮಟ್ಟಿಗೆ ಹಣವನ್ನು ನೀಡಿದ್ದು, ಉಳಿದವರು ಸಹ ನನಗೆ ಹಣ ನೀಡುವಂತೆ ಒತ್ತಡ ತರುತ್ತಿದ್ದಾರೆ ನಾನು ಕೂಲಿಕೆಲಸ ಮಾಡುತ್ತಿದ್ದು ಎಲ್ಲಿಂದ ಹಣ ತಂದು ಕಟ್ಟಬೇಕು ಎಂದು ತಮ್ಮ ಅಳಲು ತೋಡಿಕೊಂಡ ಅವರು ಈ ಕುರಿತು ಪೋಲಿಸ್‌ಠಾಣೆಯಲ್ಲಿ ದೂರು ಕೊಡಲು ತೀರ್ಮಾನಿಸದ್ದೇವೆ ಎಂದು ವಂಚನೆಗೊಳಗಾದ ಪಾರ್ವತಮ್ಮ, ವನಜಾಕ್ಷಿ, ಗೀತಾ, ರತ್ನಮ್ಮ, ರಾಧಮ್ಮ, ಎಂ.ರವಿಕುಮಾರ, ರೇವತಿ, ಪವಿತ್ರ, ರೇಣುಕಾ ಸೇರಿದಂತೆ ಅನೇಕರು ಲಿಖಿತ ಆರೋಪಕ್ಕೆ ಸಹಿ ಹಾಕಿದ್ದ ಪತ್ರ ಹಿಡಿದು ಆಗ್ರಹಿಸಿದರು.