ಬೆಂಗಳೂರು: ಐಷಾರಾಮಿ ಪೀಠೊಪಕರಣ ಮಾರಾಟ ಮಾಡುವುದಾಗಿ ವಾಟ್ಸ್ ಆ್ಯಪ್‌ನಲ್ಲಿ ಬಂದ ಸಂದೇಶಕ್ಕೆ ಮರುಳಾದ ವ್ಯಕ್ತಿಯೊಬ್ಬರು ಸೈಬರ್ ಕಳ್ಳರ ಗಾಳಕ್ಕೆ ಸಿಲುಕಿ 66 ಸಾವಿರ ರೂ. ಕಳೆದುಕೊಂಡಿದ್ದಾರೆ.
ಬನಶಂಕರಿ ನಿವಾಸಿ ರಾಘವೇಂದ್ರ (38) ಹಣ ಕಳೆದುಕೊಂಡವರು.
ಇತ್ತೀಚೆಗೆ ರಾಘವೇಂದ್ರ ಅವರ ವಾಟ್ಸ್‌ಆ್ಯಪ್‌ಗೆ ಸಂದೇಶವೊಂದು ಬಂದಿದ್ದು, ಅದರಲ್ಲಿ ಐಷಾರಾಮಿ ಪೀಠೊಪಕರಣ ಮಾರಾಟ ಮಾಡುವುದಾಗಿ ಜಾಹೀರಾತು ಬಂದಿತ್ತು. ಆ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ಅಪರಿಚಿತರೊಬ್ಬರು ತಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಬೇರೆಡೆ ವರ್ಗಾವಣೆಯಾಗಿದೆ. ಹೀಗಾಗಿ ಮನೆಯಲ್ಲಿದ್ದ ಸೋಫಾ ಸೆಟ್ ಮಾರಾಟ ಮಾಡುವುದಾಗಿ ನಂಬಿಸಿದ್ದರು. ಮುಂಗಡವಾಗಿ ಹಣ ಹಾಕಿದರೆ ನೀವು ಹೇಳುವ ವಿಳಾಸಕ್ಕೆ ಸೋಫಾ ಕಳುಹಿಸುವುದಾಗಿ ಹೇಳಿದ್ದರು. ಅಪರಿಚಿತರ ಮಾತಿಗೆ ಮರುಳಾದ ರಾಘವೇಂದ್ರ ಅವರು ಸೂಚಿಸಿದ ಬ್ಯಾಂಕ್ ಖಾತೆಗೆ 66 ಸಾವಿರ ರೂ. ಜಮೆ ಮಾಡಿದ್ದರು. ಇದಾದ ಬಳಿಕ ಅಪರಿಚಿತ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.