ಬೆಂಗಳೂರು: ಬಿಬಿಎಂಪಿ ವಾರ್ಡ್‌ನ ಕಚೇರಿ ಅಧಿಕಾರಿ ಸೋಗಿನಲ್ಲಿ ಶಿಕ್ಷಕರನ್ನೇ ಗುರಿಯಾಗಿಸಿಕೊಂಡು ಕರೆ ಮಾಡಿ ಒಟಿಪಿ ಪಡೆದು ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಮೂಲದ ಶಿವಪ್ರಸಾದ್ (33), ದೆಹಲಿ ಮೂಲದ ಪಂಕಜ್ ಚೌಧರಿ (24) ಬಂಧಿತರು.ಆರೋಪಿಗಳಿಂದ 22 ಸಾವಿರ ನಗದು, 9 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ಶಿವಪ್ರಸಾದ್ ತಂದೆ ಶಿಕ್ಷಕರಾಗಿದ್ದು, ಸರ್ಕಾರದ ಕೆಲ ಇಲಾಖೆಗಳು ಸೂಚಿಸಿದ ಸರ್ವೆ ಕೆಲಸ ಹಾಗೂ ಇತರೆ ಕರ್ತವ್ಯಗಳ ನಿಯೋಜಿಸಲಾಗುತ್ತಿತ್ತು. ಕೆಲಸ ಮುಗಿದ ನಾಲ್ಕೈದು ತಿಂಗಳ ಬಳಿಕ ಅವರ ಖಾತೆಗೆ ಹಣ ಜಮೆಯಾಗುತ್ತಿತ್ತು. ಈ ವೇಳೆ ಕೆಲವು ಬಾರಿ ಒಟಿಪಿ ಪಡೆದು ಹಣ ವರ್ಗಾವಣೆ ಮಾಡುತ್ತಿರುವುದನ್ನು ಗಮನಿಸಿದ್ದ. ಹೀಗಾಗಿ ಆರೋಪಿ ಶಿಕ್ಷಕರನ್ನೇ ಗುರಿಯಾಗಿಸಿಕೊಂಡು ವಂಚನೆ ಆರಂಭಿಸಿದ್ದಾನೆ. ಅದಕ್ಕಾಗಿ ನಿರ್ದಿಷ್ಟ ವೆಬ್‌ಸೈಟ್, ಗೂಗಲ್ ಮೂಲಕ ಶಿಕ್ಷಕರ ಮೊಬೈಲ್ ನಂಬರ್, ಖಾತೆಗಳ ಸಂಖ್ಯೆ ಪಡೆದುಕೊಂಡಿದ್ದಾನೆ.
ಈ ಮಧ್ಯೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ(ಬಿಎಲ್‌ಒ) ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿ, ಶಿಕ್ಷಕರ ಮೊಬೈಲ್‌ಗೆ ಕರೆ ಮಾಡಿ ಸರ್ವೆ ಕೆಲಸ ಮಾಡಿರುವುದಕ್ಕೆ ನಿಮ್ಮ ಖಾತೆಗೆ ಹಣ ಜಮೆ ಮಾಡಲುಯತ್ನಿಸಲಾಗುತ್ತಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಜಮೆಯಾಗುತ್ತಿಲ್ಲ. ಹೀಗಾಗಿ, ನಿಮ್ಮ ಮೊಬೈಲ್‌ಗೆ ಒಟಿಪಿ ಸಂಖ್ಯೆ ಬರಲಿದೆ ಅದನ್ನು ಹೇಳಿದರೆ ಕೂಡಲೇ ಹಣ ಜಮೆಯಾಗುವುದು ಎಂದು ನಂಬಿಸುತ್ತಿದ್ದ. ಒಟಿಪಿ ಪಡೆದುಕೊಂಡ ಕೆಲ ಹೊತ್ತಿನಲ್ಲಿಯೇ ಶಿಕ್ಷಕರ ಖಾತೆಯಿಂದ ತಮ್ಮ ನಕಲಿ ಖಾತೆಗೆ ಹಣ ಜಮೆ ಮಾಡಿಕೊಂಡು
ಮೊಬೈಲ್ ಸ್ವಿಚ್ಡ್ ಆಪ್ ಮಾಡಿಕೊಳ್ಳುತ್ತಿದ್ದ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು. ಆರೋಪಿ ಇತ್ತೀಚೆಗೆ ನಗರದ ಶಿಕ್ಷಕಿಯೊಬ್ಬರಿಗೆ ಬಿಬಿಎಂಪಿ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ್ದ ಆರೋಪಿ, ಬೂತ್ ಹಂತದ ಕಚೇರಿಯ ಅಲೆಯನ್ಸ್ ಶುಲ್ಕ ಪಾವತಿಸಲಾಗುತ್ತಿದೆ. ಹೀಗಾಗಿ, ನಿಮ್ಮಡೆಬಿಟ್ ಕಾರ್ಡ್ ಸಂಖ್ಯೆ, ಸಿವಿವಿ, ಎಕ್ಸ್‌ಪೆರಿಡೇಟ್ ಹಾಗೂ ಒಟಿಪಿ ಹೇಳಿ ಎಂದು ಒಟಿಪಿ ಪಡೆದು ಆ ಶಿಕ್ಷಕರಖಾತೆಯಿಂದ 17,111 ರೂ. ಅನ್ನು ತಮ್ಮ ನಕಲಿ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಈ ಸಂಬಂಧ ವಂಚನೆಗೊಳಗಾದ ಶಿಕ್ಷಕರು ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.
ನಕಲಿ ಖಾತೆಗಳು, ಸಿಮ್‌ಕಾರ್ಡ್‌ಗಳು ಕೊಡುತ್ತಿದ್ದ ಪಂಕಜ್: ಸಾಮಾಜಿಕ ಜಾಲತಾಣದ ಮೂಲಕ ದೆಹಲಿಯ ಪಂಕಜ್‌ಚೌಧರಿಯನ್ನು ನಗರಕ್ಕೆ ಕರೆಸಿಕೊಂಡು ಭೇಟಿಯಾಗಿದ್ದ ಶಿವಪ್ರಸಾದ್, ತನ್ನ ಕೃತ್ಯದ ಇಂಚಿಂಚೂ ಮಾಹಿತಿ ಹೇಳಿಕೊಂಡಿದ್ದ. ನಂತರ ನಕಲಿ ಬ್ಯಾಂಕ್ ಖಾತೆಗಳ ವಿವರ ಹಾಗೂ ಸಿಮ್‌ಕಾರ್ಡ್‌ಗಳು, ಮೊಬೈಲ್‌ಗಳನ್ನು ದೆಹಲಿಗೆ ತಂದಿದ್ದಾನೆ. ಅವುಗಳನ್ನು ಇಟ್ಟುಕೊಂಡು ಶಿಕ್ಷಕರಿಂದ ಒಟಿಪಿ ಪಡೆದುಕೊಂಡು ಪಂಕಜ್ ಚೌಧರಿಯಿಂದ ಪಡೆದ ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆ ಹೇಗೆ? :
ಪ್ರಕರಣ ದಾಖಲಿಸಿಕೊಂಡು ಈಶಾನ್ಯ ವಿಭಾಗ ಸೆನ್ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ರಾಮ್ ನೇತೃತ್ವದ ತಂಡ ವಂಚನೆಗೊಳಗಾದ ಶಿಕ್ಷಕರ ಖಾತೆಯಿಂದ ದೆಹಲಿಯಲ್ಲಿರುವ ಖಾತೆಗೆಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆ ಹಚ್ಚಿತ್ತು. ಅದನ್ನು ಬೆನ್ನತ್ತಿದ್ದಾಗ ಆರೋಪಿ ಶಿವಪ್ರಸಾದ್ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಪಿಯನ್ನು ನಗರದ ಆನಂದರಾವ್ ವೃತ್ತ ಹೋಟೆಲ್‌ವೊಂದರಲ್ಲಿ ಬಂಧಿಸಲಾಗಿದೆ. ಈತನ ಮಾಹಿತಿ ಮೇರೆಗೆ ದೆಹಲಿಗೆ ತೆರಳಿ ಪಂಕಜ್ ಚೌಧರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳ ವಿರುದ್ಧ ಈಶಾನ್ಯ ವಿಭಾಗ, ಕೇಂದ್ರ, ದಕ್ಷಿಣ, ಪಶ್ಚಿಮ ವಿಭಾಗದ ಸೆನ್ ಠಾಣೆ, ರಾಯಚೂರು, ಶಿವಮೊಗ್ಗ, ದಾವಣಗೆರೆಯ ಸೆನ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳ ಪೈಕಿ ಶಿವಪ್ರಸಾದ್ 2017ರಿಂದಲೂ ಸೈಬರ್ ವಂಚನೆ ಪ್ರಕರಣಗಳಲ್ಲಿ ತೊಡಗಿದ್ದಾನೆ. ಶಿಕ್ಷಕರು ಮಾತ್ರವಲ್ಲದೆ, ಬೇರೆ ಬೇರೆ ವಲಯದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಂಚಿಸಿದ್ದಾನೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.