ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೆಕ್ಷನ್ ಆಫೀಸರ್ ಎಂದು ನಂಬಿಸಿ ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳಾ ಹೋಂಗಾರ್ಡ್ ಹಾಗೂ ಅವರ ಸ್ನೇಹಿತರಿಂದ 11.80 ಲಕ್ಷ ರೂ. ಪಡೆದು ವಂಚಿಸಿದ ಆರೋಪಿ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಹೋಂಗಾರ್ಡ್ ಆಗಿರುವ ಲಕ್ಷ್ಮಮ್ಮ ಕೊಟ್ಟ ದೂರಿನ ಆಧಾರದ ಮೇಲೆ ಆರೋಪಿ ಪ್ರಕಾಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಕ್ಷ್ಮಮ್ಮ ಅವರಿಗೆ ಕಳೆದ 4 ತಿಂಗಳ ಹಿಂದೆ ಪ್ರಕಾಶ್ ಪರಿಚಯವಾಗಿದ್ದ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ವಿಧಾನಸೌಧದಲ್ಲಿ ಸೆಕ್ಷನ್ ಆಸರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಪ್ರಕಾಶ್ ತನ್ನನ್ನು ಪರಿಚಯಿಸಿಕೊಂಡಿದ್ದ.
6 ಲಕ್ಷ ರೂ. ಕೊಟ್ಟರೆ ನಿಮ್ಮ ಪುತ್ರನಿಗೆ ಸರ್ಕಾರಿ ಡಿ ಗ್ರೂಪ್ ಕೆಲಸ ಕೊಡಿಸುವುದಾಗಿ ಪ್ರಕಾಶ್ ಭರವಸೆ ನೀಡಿದ್ದ. ಅದರಂತೆ ಲಕ್ಷ್ಮಮ್ಮ ಆತನಿಗೆ 6 ಲಕ್ಷ ರೂ. ಕೊಟ್ಟಿದ್ದಳು. ಈ ವಿಚಾರವನ್ನು ಲಕ್ಷ್ಮಮ್ಮ ತನ್ನ ಸ್ನೇಹಿತೆ ಚೆನ್ನಮ್ಮನಿಗೂ ತಿಳಿಸಿದ್ದಳು. ಪ್ರಕಾಶ್‌ನನ್ನು ಸಂಪರ್ಕಿಸಿದ ಚೆನ್ನಮ್ಮ ನನ್ನ ಮಗನಿಗೂ ಸರ್ಕಾರಿ ಕೆಲಸ ಕೊಡಿಸುವಂತೆ 3 ಲಕ್ಷ ರೂ. ಕೊಟ್ಟಿದ್ದರು. ಇದಾದ ಬಳಿಕ ಲಕ್ಷ್ಮಮ್ಮ ಅವರ ಪತಿಯ ಸಹೋದರಿ ಮಗನಿಗೂ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಪ್ರಕಾಶ್, ಅವರಿಂದ 2.80 ಲಕ್ಷ ರೂ. ಪಡೆದಿದ್ದ. ಇದಾದ ಬಳಿಕ ಕೆಲ ತಿಂಗಳುಗಳೇ ಕಳೆದರೂ ಪ್ರಕಾಶ್ ಕೆಲಸ ಕೊಡಿಸಿರಲಿಲ್ಲ. ಲಕ್ಷ್ಮಮ್ಮ ತಾವು ಕೊಟ್ಟ ಹಣ ಹಿಂತಿರುಗಿಸುವಂತೆ ಸೂಚಿಸಿದ್ದರು.
ಮತ್ತೆ ಪ್ರಕಾಶ್‌ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ದೂರಿನಲ್ಲಿ ಲಕ್ಷ್ಮಮ್ಮ ಉಲ್ಲೇಖೀಸಿದ್ದಾಳೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಪ್ರಕಾಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಆತ ಎಷ್ಟು ಜನರಿಗೆ ವಂಚಿಸಿದ್ದಾನೆ ಎಂಬುದು ಬೆಳಕಿಗೆ ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.