ಬೆಂಗಳೂರು: ಕೋಟ್ಯಂತರ ರೂ. ಸಾಲ ಕೊಡಿಸುವುದಾಗಿ ನಂಬಿಸಿ ವಂಚಿಸಿರುವುದನ್ನು ಪ್ರಶ್ನಿಸಿದ್ದಕ್ಕೆ ಉದ್ಯಮಿ ಮೇಲೆಯೇ ಹಲ್ಲೆ ನಡೆಸಿದ ನಾಲ್ವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಕುಮಾರ್, ರಂಜಿತ್ ಅಲಿಯಾಸ್ ಸಂಜಯ್ ಕುಮಾರ್, ಆದಿತ್ಯ, ಶ್ರೀಕಾಂತ್ ರೆಡ್ಡಿ ಬಂಧಿತರು. ತಲೆಮರೆಸಿಕೊಂಡಿರುವ ಮನೋಜ್ ಕುಮಾರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹೈದರಾಬಾದ್ ಮೂಲದ ಸಾಫ್ಟ್ವೇರ್ ಕಂಪನಿ ಮಾಲೀಕ ಹಾಗೂ ಉದ್ಯಮಿ ರಾಮೇಶ್ವರ ಸಾಲಕ್ಕಾಗಿ ಹುಡುಕಾಡುತ್ತಿದ್ದರು. ಆ ಸಂದರ್ಭದಲ್ಲಿ ಆರೋಪಿ ಕುಮಾರ್ ಪರಿಚಯವಾಗಿತ್ತು. ತನ್ನನ್ನು ಮೈಸೂರು ರಾಜವಂಶಸ್ಥನೆಂದು ಪರಿಚಯಿಸಿಕೊಂಡ ಕುಮಾರ್, ಕೋಟ್ಯಂತರ ರೂ. ಸಾಲ ಕೊಡಿಸುವುದಾಗಿ ನಂಬಿಸಿದ್ದ. ಇತ್ತ ರಾಮೇಶ್ವರ್ ಆತನ ಮಾತಿನ ಮೋಡಿಗೆ ಮರುಳಾಗಿ ಇದನ್ನು ನಂಬಿದ್ದ.
ಇದಾದ ಬಳಿಕ ರಾಮೇಶ್ವರಗೆ ಮತ್ತೂಬ್ಬ ಆರೋಪಿ ಮನೋಜ್ ಕುಮಾರ್ ನನ್ನು ಪರಿಚಯಿಸಿದ್ದ. ಯಾವುದೇ ಸಂದೇಹ ಮೂಡದಂತೆ ಮನೋಜ್ ಮೈ ತುಂಬ ಬಂಗಾರ ಹಾಕಿಕೊಂಡು ರಾಜರ ದಿರಿಸಿನಲ್ಲೇ ರಾಮೇಶ್ವರನನ್ನು ಭೇಟಿ ಮಾಡಿದ್ದ. ನಾನು ರಾಜರ ವಂಶಸ್ಥನಾಗಿದ್ದು, ಕೋಟ್ಯಂತರ ರೂ. ಸಾಲ ಕೊಡುವುದಾಗಿ ಹೇಳಿದ್ದ. ಸಾಲ ಕೊಡಿಸುವ ಮೊದಲು ಕಮಿಷನ್ ನೀಡಬೇಕಾಗುತ್ತದೆ. ಜತೆಗೆ ಕೆಲ ದಾಖಲೆ ರೆಡಿ ಮಾಡಲು ಹಣ ಖರ್ಚಾಗುತ್ತದೆ ಎಂದು ನಂಬಿಸಿ 1.60 ಕೋಟಿ ರೂ. ಅನ್ನು ರಾಮೇಶ್ವರ ಅವರಿಂದ ಆರೋಪಿಗಳು ಪಡೆದಿದ್ದರು.
ಹಲ್ಲೆ ನಡೆಸಿದ ಆರೋಪಿಗಳು: ಇದಾದ ಬಳಿಕ ಹಲವು ತಿಂಗಳು ಕಳೆದರೂ ಆರೋಪಿಗಳು ರಾಮೇಶ್ವರಗೆ ಸಾಲ ಕೊಡಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ಮನೋಜ್ ಕುಮಾರ್ ನಿಧನ ಹೊಂದಿದ್ದಾರೆ. ಹೀಗಾಗಿ ಸಾಲ ನೀಡುವುದು ಸ್ವಲ್ಪ ತಡವಾಗುತ್ತದೆ ಎಂದು ಇತರ ಆರೋಪಿಗಳು ಸುಳ್ಳು ಹೇಳಿದ್ದರು. ಆರೋಪಿಗಳನ್ನು ಭೇಟಿ ಮಾಡಿ ಸಾಲದ ಬಗ್ಗೆ ಚರ್ಚಿಸಲು 6ಕ್ಕೂ ಹೆಚ್ಚು ಬಾರಿ ರಾಮೇಶ್ವರ ಹೈದರಾಬಾದ್‌ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದರು. ಆರೋಪಿಗಳ ನಡೆಯಿಂದ ಬೇಸತ್ತ ರಾಮೇಶ್ವರ ಅವರು ಪೊಲೀಸರಿಗೆ ದೂರು ಕೊಡುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಇದರಿಂದ ಆತಂಕಗೊಂಡ ಆರೋಪಿಗಳು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದರು. ನಂತರ ಬೂದಿಗೆರೆಗೆ ಬರಲು ಹೇಳಿದ್ದರು.
ಬೂದಿಗೆರೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಗೊಲ್ಲಹಳ್ಳಿ ಎಂಬಲ್ಲಿ ರಾಮೇಶ್ವರ ಬರುತ್ತಿದ್ದ ಕಾರು ತಡೆದ ಆರೋಪಿಗಳು ಹಲ್ಲೆ ನಡೆಸಿ ಹಣ ಕೇಳದಂತೆ ಬೆದರಿಸಿದ್ದಾರೆ. ಇತ್ತ ರಾಮೇಶ್ವರ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.