ಚಿಂಚೋಳಿ: ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಇರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಇದರಲ್ಲಿ ನಡೆದಿರುವ ಅವ್ಯವಹಾರ ತನಿಖೆ ನಡೆಸಬೇಕೆಂದು ಮಾಜಿ ಸಚಿವ ವೈಜನಾಥ ಪಾಟೀಲ ಚಿಂಚೋಳಿ ಸಕ್ಕರೆ ಕಾರ್ಖಾನೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಹೈದ್ರಾಬಾದ ಮೂಲದ ಟಬೋ ಕಂಪನಿ ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದಾಗಿ ಹೇಳಿ ಕಾರ್ಖಾನೆ ಹೆಸರಿನಲ್ಲಿ ಇರುವ ಆಸ್ತಿ ಮೇಲೆ ಹೈದ್ರಾಬಾದ್ ನಲ್ಲಿರುವ ಪಂಜಾಬ ನ್ಯಾಶನಲ್ ಬ್ಯಾಂಕ್‌ನಲ್ಲಿ 380ಕೋಟಿ ರೂ.ಸಾಲ ಪಡೆದುಕೊಂಡಿತ್ತು. ಆದರೆ ಚಿಂಚೋಳಿ ಸಕ್ಕರೆ ಕಾರ್ಖಾನೆ ಮಾಲೀಕರು ಅಭಿವೃದ್ಧಿ ಕೆಲಸಗಳನ್ನು ಕೇವಲ ತೋರಿಕೆಗಾಗಿ ಮಾಡಿ ನಂತರ ಸ್ಥಗಿತಗೊಳಿಸಿತು ಎಂದು ದೂರಿದರು.
ಕಾರ್ಖಾನೆ ಪ್ರಾರಂಭದಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸದೇ ತುಂಬಾ ಹಳೆಯದಾಗಿರುವ ಕಬ್ಬು ನುರಿಸುವ ಯಂತ್ರ ಮತ್ತು ಹೊಗೆ ಹೊರಗೆ ಹಾಕುವ ಚಿಲುವೆ ಅಳವಡಿಸಿ ಯಂತ್ರ ತಯಾರಿಕೆ ಕಂಪನಿಗಳಿಂದ ಬಿಲ್ಲು ಪಾವತಿಸಿಕೊಂಡಿದೆ ಎಂದು ಆರೋಪಿಸಿದರು. ತಾಲೂಕಿನಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆ ಪ್ರಾರಂಭಗೊಳ್ಳಲಿದೆ ಎನ್ನುವ ವಿಷಯ ಅರಿತ ರೈತರು ಬ್ಯಾಂಕಿನಿಂದ ಲಕ್ಷಾಂತರ ರೂ. ಸಾಲ ಪಡೆದು ಕಬ್ಬು ಬೆಳೆದರು. ಆದರೆ ಚಿಂಚೋಳಿ ಸಕ್ಕರೆ ಕಾರ್ಖಾನೆ ರೈತರು ಬೆಳೆದ ಕಬ್ಬು ಖರೀದಿಸಲೇ ಇಲ್ಲ. ಕಡೆಗೆ ಆಕ್ರೋಶಗೊಂಡ ಕೆಲವು ರೈತರು ಕಡಿಮೆ ಬೆಲೆಗೆ ಮಾರಿದರೆ, ಇನ್ನು ಕೆಲವರು ಹೊಲದಲ್ಲಿಯೇ ಕಬ್ಬು ಸುಟ್ಟು ಹಾಕಿದರು ಎಂದು ಅಸಮಾಧಾನ ವಕ್ತಪಡಿಸಿದರು.
ಹೈದ್ರಾಬಾದ್‌ನ ಟಬೋ ಕಂಪನಿ ಜಾರ್ಖಂಡ ರಾಜ್ಯದಲ್ಲಿಯೂ ಇದೇ ರೀತಿ ವಂಚಿಸಿದೆ. ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಪಡೆದುಕೊಂಡ ಸಾಲವನ್ನು ಕಾರ್ಖಾನೆ ಅಭಿವೃದ್ಧಿಗೆ ಬಳಸದೇ ಜೈದ್ರಾಬಾದಿನಲ್ಲಿನ ಟರ್ಬೊ ಕಂಪನಿಯ ಶಿಕ್ಷಣ ಸಂಸ್ಥೆಗೆ ಬಳಸಿಕೊಂಡಿದೆ ಎಂದು ಆರೋಪಿಸಿದರು.
ಚಿಂಚೋಳಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರು ಇದರಲ್ಲಿ ಭಾಗಿ ಆಗಿದ್ದಾರೆ. ನಾವು ನೀಡಿದ ದೂರಿನ ಮೇರೆಗೆ ಸಿಬಿಐ ತಂಡ ಚಿಂಚೋಳಿಗೆ ಇನ್ನು ವರೆಗೂ ಭೇಟಿ ನೀಡಿಲ್ಲ. ಚಿಂಚೋಳಿ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ನಡೆದಿರುವ ಸಾಲದ ವಂಚನೆ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಸದಸ್ಯ ಗೌತಮ ಪಾಟೀಲ ಮಾತನಾಡಿದರು. ಆರ್. ಗಣಪತರಾವ್, ಉಮೇಶ ಪಾಟೀಲ, ಸತೀಶ ಇಟಗಿ, ಶಿವರಾಜ ಸಿಂಧೋಲ, ದಿಲೀಪ ಪಾಟೀಲ, ಮಲ್ಲಿಕಾರ್ಜುನ ಭೂಶೆಟ್ಟಿ, ಪ್ರಭು ಲೇವಡಿ, ಜಗನ್ನಾಥರೆಡ್ಡಿ ತುಮಕುಂಟಾ, ಶರಣಗೌಡ ಮುದ್ದಾ, ತಮ್ಮರೆಡ್ಡಿ ಕೊಳ್ಳೂರ, ತಿಪ್ಪಾರೆಡ್ಡಿ ಭಂಟ್ವಾರ, ಚೆನ್ನಬಸಪ್ಪ ಪಾಟೀಲ, ರಾಜಪ್ಪ ಪೂಜಾರಿ, ರಮೇಶ ಸೀಳಿನ, ಶಂಕರ ಕೊಳ್ಳೂರ, ಬಕ್ಕಪ್ಪ ಕೊಳ್ಳೂರ, ಸಂತೋಷ ರೆಡ್ಡಿ, ರಾಜಶೇಖರ ಪಾಟೀಲ, ಶಂಕರ ಶಿವಪುರಿ, ಪರೀಧ ನಾಗಾಇದಲಾಯಿ ಇದ್ದರು.