ಬೆಂಗಳೂರು: ಮಾಜಿ ಸಚಿವ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವ ಶಂಕರಪ್ಪ ಅವರ ನಕಲಿ ಸಹಿ ಮಾಡಿ ಮತ್ತು ಲೆಟರ್ ಡೆಡ್ ಬಳಸಿ ವಿಧಾನಸಭೆ ಸಚಿವಾಲ ಯಕ್ಕೆ ಪತ್ರ ಬರೆದು ಉದ್ಯೋಗ ಪಡೆದು ಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಸಚಿವಾಲಯದ ಅಧಿಕಾರಿ ಲಲಿತಾ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಾಮನಗರ ಜಿಲ್ಲೆ ಕುದೂರು ನಿವಾಸಿ ಸ್ವಾಮಿ(35) ಹಾಗೂ ಅಂಜನ್ ಕುಮಾರ್ ಎಂಬವರನ್ನು ಬಂಧಿಸಿದ್ದಾರೆ.
ಪ್ರಕರಣದ ಮತ್ತೂಬ್ಬ ಆರೋಪಿ ಕೆ.ಸಿ.ವಿನುತಾ ಎಂಬುವವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ಓದಿರುವ ಸ್ವಾಮಿ, ಈ ಹಿಂದೆ ಪರಿಚಿತ ಶಾಸಕರ ನೆರವಿನಿಂದ ವಿಧಾನ ಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಆ ಕೆಲಸ ಬಿಟ್ಟು ರಾಜಕಾರಣಿಗಳ ಜತೆ ಓಡಾಡಿಕೊಂಡಿದ್ದ. ಶಾಮನೂರು ಶಿವಶಂಕರಪ್ಪ ವಿನುತಾಳನ್ನು ತಮ್ಮ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸು ಮಾಡಿದಂತೆ ಸ್ವಾಮಿ, ನಕಲಿ ಲೆಟರ್‌ಹೆಡ್ ಸೃಷ್ಟಿಸಿ ಅದಕ್ಕೆ ಅವರ ನಕಲು ಸಹಿ ಮಾಡಿದ್ದ. ನಂತರ ಆ ಶಿಫಾರಸು ಪತ್ರವನ್ನು ವಿಧಾನಸಭೆ ಸಚಿವಾಲಯಕ್ಕೆ ಕಳುಹಿಸಿದ್ದ. ಆ ಪತ್ರದ ನೈಜತೆಯನ್ನು ಪರಿಶೀಲಿಸದ ವಿಧಾನಸಭೆ ಸಚಿವಾಲಯ ಸಿಬ್ಬಂದಿ ವಿನುತಾಳನ್ನು ಶಾಮ ನೂರು ಶಿವಶಂಕರಪ್ಪರ ಆಪ್ತ ಸಹಾಯಕಿಯಾಗಿ ನೇಮಿಸಿ 2023ರ ಮೇ ತಿಂಗಳಲ್ಲಿ ಆದೇಶ ಹೊರಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಹೆರಿಗೆ ರಜೆಗೆ ಮುಂದಾದಾಗ ಪ್ರಕರಣ ಬೆಳಕಿಗೆ: ಪ್ರಕರಣದ ಪ್ರಮುಖ ಆರೋಪಿಯಾದ ಸ್ವಾಮಿ ಪತ್ನಿ ವಿನುತಾ, ವಿಧಾನಸೌಧದಲ್ಲಿನ ಶಾಮನೂರು ಶಿವಶಂಕರಪ್ಪರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗದೆ ಮನೆಯಲ್ಲೇ ಇದ್ದುಕೊಂಡು ಕಳೆದೊಂದು ವರ್ಷದಿಂದ ವೇತನ ಪಡೆದಿದ್ದಳು. ವಿಧಾನಸಭೆ ಸಚಿವಾಲ ಯದಿಂದ ಪ್ರತಿ ತಿಂಗಳು ವಿನುತಾಳ ಬ್ಯಾಂಕ್ ಖಾತೆಗೆ 30 ಸಾವಿರ ರೂ. ಸಂಬಳ ಪಾವತಿಸ ಲಾಗಿತ್ತು. ಗರ್ಭಿಣಿಯಾದ ವಿನುತಾ, ಶಾಸಕರ ಆಪ್ತ ಸಹಾಯಕಿ ಹುದ್ದೆಯ ಜವಾಬ್ದಾರಿಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಇತ್ತೀಚೆಗೆ ವಿಧಾನಸಭೆ ಸಚಿವಾಲಯಕ್ಕೆ ಪತ್ರ ಬರೆದಿದ್ದಳು. ವಿಧಾನಸಭೆ ಸಚಿವಾಲಯದ ಸಿಬ್ಬಂದಿ ಈ ಪತ್ರದ ಬಗ್ಗೆ ಅನುಮಾನಗೊಂಡು ಪರಿಶೀಲಿ ಸಿದಾಗ ದಂಪತಿಯ ವಂಚನೆ ಗೊತ್ತಾಗಿದೆ. ವಿನುತಾ ಗರ್ಭಿಣಿಯಾಗಿರುವ ಕಾರಣ ಅವರನ್ನು ಬಂಧಿಸಿಲ್ಲ. ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಹೆರಿಗೆಯ ನಂತರ ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕ ರಘು ಹೆಸರಿನಲ್ಲೂ ವಂಚನೆ: ಸ್ವಾಮಿ ದಂಪತಿಯ ವಂಚನೆ ಸಂಬಂಧ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ.ಲಲಿತಾ ಆ.20ರಂದು ದೂರು ದಾಖಲಿಸಿದ್ದಾರೆ. ಈ ದೂರು ಆಧರಿಸಿ ತನಿಖೆ ಕೈಗೊಂಡು ಸ್ವಾಮಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆತ ಇದೇ ರೀತಿ ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ರಘು ಹೆಸರಿನನಲ್ಲೂ ನಕಲಿ ಲೆಟರ್‌ಹೆಡ್ ಸೃಷ್ಟಿಸಿ ನಕಲಿ ಸಹಿ ಮಾಡಿ ಅಂಜನ್‌ಕುಮಾರ್ ಎಂಬಾತನಿಗೆ ಶಾಸಕರ ಆಪ್ತ ಸಹಾಯಕನ ಹುದ್ದೆ ಕೊಡಿಸಿದ್ದ ಸಂಗತಿ ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಗಡಿ ತಾಲೂಕಿನ ಅಂಜನ್‌ಕುಮಾರ್, ಸ್ವಾಮಿಯ ನೆರವಿನಿಂದ ಶಾಸಕ ರಘುರ ಆಪ್ತ ಸಹಾಯಕನ ಹುದ್ದೆ ಗಿಟ್ಟಿಸಿದ್ದ. ವಿಧಾನಸಭೆ ಸಚಿವಾಲಯವು ಹಲವು ತಿಂಗಳಿಂದ ಅಂಜನ್‌ಕುಮಾರ್‌ನ ಬ್ಯಾಂಕ್ ಖಾತೆಗೆ ಸಂಬಳ ಪಾವತಿ ಯಾಗಿದೆ. ಅಂಜನ್‌ಕುಮಾರ್, ಶಾಸಕ ರಘು ಅವರ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾಗದೆ ವೇತನ ಪಡೆಯುತ್ತಿದ್ದ. ಅಂಜನ್‌ಕುಮಾರ್ ವೇತನದ ಹಣದಲ್ಲಿ 5 ಸಾವಿರ ರೂ. ಮಾತ್ರ ಇಟ್ಟುಕೊಂಡು ಉಳಿದ ಹಣವನ್ನು ಸ್ವಾಮಿಗೆ ಕೊಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.