ಬೆಂಗಳೂರು: ಇತ್ತೀಚೆಗೆ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ನಿಲ್ದಾಣದ ಬಳಿ ಬಿಎಂಟಿಸಿ ಬಸ್ ನಿರ್ವಾಹಕ ಹಾಗೂ ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಕಾರ್ತಿಕ್ (20) ಹಾಗೂ ಕಿರಣ್(20) ಬಂಧಿತರು. ಆರೋಪಿಗಳು ಅ.27 ರಂದು ಚಾಲಕ ಗಗನ್ ಮತ್ತು ನಿರ್ವಾಹಕ ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಗಗನ್ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಚಾಲಕ ಗಗನ್, ಯಲಹಂಕದಿಂದ ಶಿವಾಜಿನಗರಕ್ಕೆ ಬಿಎಂಟಿಸಿ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಟ್ಯಾನರಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಕಿಡಿಗೇಡಿಗಳು ಬಸ್‌ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಚಾಲನೆ ಮಾಡಿದ್ದಾರೆ. ಹೀಗಾಗಿ, ಗಗನ್ ಹಾರ್ನ್ ಮಾಡಿ ಬಸ್ ಚಲಾಯಿಸಿಕೊಂಡು ಮುಂದಕ್ಕೆ ಹೋಗಿದ್ದಾರೆ. ಅದರಿಂದ ಕೆರಳಿದ ಕಿಡಿಗೇಡಿಗಳು ಬಸ್ ಅನ್ನು ಹಿಂಬಾಲಿಸಿಕೊಂಡು ಬಂದಿದ್ದು, ಅದೇ ವೇಳೆ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿತ್ತು. ಈ ವೇಳೆ ಅಲ್ಲಿಗೆ ವಾಹನದಲ್ಲಿ ಬಂದಿದ್ದ ಆರೋಪಿಗಳು, ಬಸ್ ಒಳ ಪ್ರವೇಶಿಸಿ ಗಗನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಈ ವೇಳೆ ತಡೆಯಲು ಮುಂದಾದ ನಿರ್ವಾಹಕ ಶಿವಕುಮಾರ್ ಅವರನ್ನೂ ಸಹ ಬಸ್‌ನಿಂದ ಹೊರಗಡೆ ಎಳೆದು ಹಲ್ಲೆ ಮಾಡಿದ್ದರು. ಈ ಎಲ್ಲ ದೃಶ್ಯಗಳು ಸಮೀಪದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ಹೇಳಿದರು.
ಈ ಘಟನೆ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹಲ್ಲೆಕೋರರ ವಿರುದ್ಧ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುವುದಾಗಿ ಹೇಳಿದ್ದರು.