Advertisement

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

12:58 PM Oct 21, 2024 | Team Udayavani |

ಬೆಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 9 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ಐವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಚಿಕ್ಕಬಾಣವಾರದ ಗಾಣಿಗರಹಳ್ಳಿ ಗಣಪತಿನಗರ ನಿವಾಸಿ ಶ್ರೀಪಾದ ಭಟ್‌(34) ವಂಚನೆಗೊಳಗಾದವರು. ಅವರು ನೀಡಿದ ದೂರಿನ ಮೇರೆಗೆ ಕೊಪ್ಪಳ ಮೂಲದ ಅಪ್ರಮೆಯ, ಸುಳ್ಯ ಮೂಲದ ಪ್ರವೀಣ್‌, ಪ್ರೀತಮ್‌ ಶೆಟ್ಟಿ, ಕುಂದಾಪುರ ಮೂಲದ ಮಮತಾ ಶೆಟ್ಟಿ ಹಾಗೂ ಬೆಂಗಳೂರಿನ ಪ್ರಸನ್ನ ಎಂಬುವರ ವಿರುದ್ಧ ವಂಚನೆ ಆರೋಪದಡಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಏನಿದು ಪ್ರಕರಣ?: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶ್ರೀಪಾದ್‌ ಭಟ್‌ಗೆ ಕಳೆದ ವರ್ಷ ಅಜಯ್‌ ಎಂಬ ಸ್ನೇಹಿತನ ಮೂಲಕ ಅಪ್ರಮೆಯನ ಪರಿಚಯವಾಗಿದೆ. ಈ ಅಪ್ರಮೆಯ ದೂರವಾಣಿ ಕರೆ ಮಾಡಿ ಪ್ರವೀಣ್‌ ಎಂಬುವರನ್ನು ಶ್ರೀಪಾದ ಭಟ್‌ಗೆ ಪರಿಚಯಿಸಿದ್ದಾನೆ. ಈ ವೇಳೆ ಪ್ರವೀಣ್‌, ನಾನು ಬೆಹ್ರೇನ್‌ ದೇಶದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಬಳಿಕ ನಿಮಗೂ ಬೆಹ್ರೇನ್‌ ದೇಶದಲ್ಲಿ ಕೆಲಸ ಕೊಡಿಸುತ್ತೇನೆಂದು ದೂರುದಾರರಿಗೆ ನಂಬಿಸಿ, ವಿವಿಧ ಹಂತಗಳಲ್ಲಿ ಅಪ್ರಮೆಯ, ಪ್ರವೀಣ್‌, ಪ್ರೀತಮ್‌ ಶೆಟ್ಟಿ, ಮಮತಾ ಶೆಟ್ಟಿ ಹಾಗೂ ಪ್ರಸನ್ನ ಎಂಬುವರು 9.08 ಲಕ್ಷ ರೂ. ಪಡೆದುಕೊಂಡಿದ್ದಾರೆ.

ಹಣ ನೀಡಿದ ಬಳಿಕ ಕೆಲಸದ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು, ಸದ್ಯದಲ್ಲೇ ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸುತ್ತಿದ್ದರು. ಆದರೆ, ಕಳೆದ ನಾಲ್ಕೈದು ತಿಂಗಳಿಂದ ದೂರುದಾರರ ಸಂಪರ್ಕಕ್ಕೆ ಸಿಕ್ಕಿಲ್ಲ. ಹಣವನ್ನೂ ವಾಪಾಸ್‌ ನೀಡಿಲ್ಲ. ಹೀಗಾಗಿ ಶ್ರೀಪಾದ್‌ ಭಟ್‌ ಈ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next