Advertisement

ಮನ್‌ಮುಲ್ ಹಾಲಿಗೆ ನೀರು ಬೆರೆಸಿ ವಂಚನೆ: ಉನ್ನತ ಮಟ್ಟದ ತನಿಖೆಗೆ ಆದೇಶ

06:04 PM May 30, 2021 | Team Udayavani |

ಮಂಡ್ಯ: ಮದ್ದೂರಿನ ಗೆಜ್ಜಲಗೆರೆಯಲ್ಲಿರುವ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್)ದಲ್ಲಿ ಅಕ್ರಮವಾಗಿ ಹಾಲನ್ನು ಅರ್ಧ ನೀರಿಗೆ, ಅರ್ಧ ಹಾಲಿಗೆ ಕಲಬೆರಕೆ ಮಾಡಿ ಮಹಾ ವಂಚನೆ ಎಸಗಿರುವ ಪ್ರಕರಣ ಬಯಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

Advertisement

ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಇರುವ ಮನ್‌ಮುಲ್‌ನಲ್ಲಿ ಹಾಲು ಸರಬರಾಜು ಮಾಡುವ ಟೆಂಡರ್ ಪಡೆದಿರುವ ಗುತ್ತಿಗೆದಾರರು ಅರ್ಧ ಟ್ಯಾಂಕರ್‌ಗೆ ನೀರು ಮಿಶ್ರಣ ಮಾಡಿ ಇನ್ನರ್ಧ ಟ್ಯಾಂಕರ್‌ನಲ್ಲಿ ಹಾಲು ಪೂರೈಕೆ ಮಾಡಿಕೊಂಡು ರೈತರಿಂದ ನೇರವಾಗಿ ಪಡೆಯುವ ಹಾಲನ್ನು ಕಲಬೆರಕೆ ಮಾಡಿ ಮಹಾ ಮೋಸ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮೇಲ್ನೋಟಕ್ಕೆ ಒಕ್ಕೂಟದ ಕೆಲ ಸಿಬ್ಬಂದಿಗಳು ಶಾಮೀಲಾಗಿ ಈ ಅವ್ಯವಹಾರಕ್ಕೆ ಸಾಥ್ ನೀಡಿರುವುದು ತಿಳಿದು ಬಂದಿದ್ದು, ಹಗರಣವನ್ನು ಸ್ವತಃ ಮನ್‌ಮುಲ್‌ನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ನಿರ್ದೇಶಕರು ಪತ್ತೆ ಹಚ್ಚಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಅವರಿಗೆ ದೂರು ನೀಡಿದ್ದು, ಎಸ್ಪಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಾಗಮಂಗಲ ಡಿವೈಎಸ್ಪಿ ನವೀನ್‌ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಒಕ್ಕೂಟದ ಬಿಎಂಸಿ ಕೇಂದ್ರದಲ್ಲಿ ನಿತ್ಯ ಸಂಗ್ರಹವಾಗುವ ಹಾಲನ್ನು ಗೆಜ್ಜಲಗೆರೆ ಡೈರಿಗೆ ತರಲು ಆರ್‌ಎಂಟಿ ವಾಹನಗಳಿಗೆ ಗುತ್ತಿಗೆ ನೀಡಲಾಗಿದ್ದು, ಈ ವಾಹನಗಳು ಪ್ರತಿ ಮಧ್ಯಾಹ್ನ 2ಕ್ಕೆ ಹಾಲನ್ನು ತರಬೇಕು. ಪ್ರಕರಣದಲ್ಲಿ ಶಾಮೀಲಾಗಿರುವ ಟೆಂಡರ್‌ದಾರರು ಮದ್ದೂರು ತಾಲೂಕಿನ ಬಿಎಂಸಿ ಘಟಕಗಳಾದ ತಗ್ಗಹಳ್ಳಿ, ಚಿಕ್ಕೋನಹಳ್ಳಿ, ಮರಳಿಗ ಹಾಗೂ ಕೆರಮೇಗಳದೊಡ್ಡಿಯಿಂದ ಹಾಲನ್ನು ತರಲು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ವಾಹನವನ್ನು ರಿಪೇರಿಗೆ ಬಂದಿರುವುದರಿಂದ ಬದಲಿ ವಾಹನಕ್ಕೆ ಪತ್ರ ನೀಡಿದ್ದರು.

ಮೇ 27ರಂದು ಗುತ್ತಿಗೆದಾರರು ಬಿಎಂಸಿ ಘಟಕಗಳಿಂದ ಸಂಗ್ರಹಿಸಿರುವ ಹಾಲನ್ನು ಗುತ್ತಿಗೆ ಪಡೆದ ವಾಹನದಲ್ಲಿ ಒಕ್ಕೂಟಕ್ಕೆ ಸರಬರಾಜು ಮಾಡದೇ ಅಕ್ರಮವಾಗಿ ತುಂಬಿ ಬೇರೆ ಖಾಸಗಿ ಡೇರಿಗೆ ಮಾರಾಟ ಮಾಡುವ ಉದ್ದೇಶದಿಂದ ಮದ್ದೂರಿನ ಸೋಮನಹಳ್ಳಿ ಬಳಿ ಖಾಸಗಿ ಹಾಲು ಮಾರಾಟ ಮಾಡುವ ಶೇಖರಣಾ ಕೇಂದ್ರಕ್ಕೆ ಸಾಗಿಸಲು ಪ್ರಯತ್ನ ಮಾಡಿದ್ದು, ಈ ವೇಳೆ ಒಕ್ಕೂಟದವರು ದಾಳಿ ನಡೆಸಿ ಈ ವಾಹನ ಯಾವುದು ಎಂದು ವಿಚಾರಿಸಿದಾಗ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಆಗ ಸ್ಥಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಿದಾಗ ವಿವಿಧ ಗ್ರಾಮಗಳ ಬಿಎಂಸಿ ಘಟಕಗಳಿಂದ ಹಾಲು ತುಂಬಿಕೊಂಡು ಬಂದಿದ್ದು, ಈ ವಾಹನಕ್ಕೆ ಹಾಗೂ ಒಕ್ಕೂಟಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಎನ್ನಲಾಗಿದೆ. ಹಾಗೆಯೇ ಪಕ್ಕದ 2 ಬಿಎಂಸಿ ಕೇಂದ್ರದಲ್ಲಿ ಹಾಲನ್ನು ವಿಚಾರಿಸಿದಾಗ ಬೇರೊಂದು ವಾಹನದಲ್ಲಿ ತುಂಬಿಕೊಂಡು ಕಲಬೆರಕೆ ಮಾಡಲು ಸಾಗಿಸಿರುವುದು ತಿಳಿದು ಬಂದಿದೆ.

Advertisement

ಹಾಲಿನ ಟ್ಯಾಂಕರ್‌ನ ಅರ್ಧ ಭಾಗ ನೀರು ಮಿಶ್ರಣ ಮಾಡಿ ಉಳಿದರ್ಧ ಭಾಗಕ್ಕೆ ಹಾಲು ತುಂಬುವಂತೆ ಟ್ಯಾಂಕರ್ ಅನ್ನು ವಿನ್ಯಾಸ ಮಾಡಿ, ಹಾಲು ತುಂಬಿಸಲಾಗುತ್ತಿತ್ತು. ಹಾಲು ತುಂಬ ಸಮಯದಲ್ಲೇ ನೀರಿನ ಜತೆ ಸೇರಿಕೊಳ್ಳುವಂತೆ ಬ್ಯಾಟರಿ ವ್ಯವಸ್ಥೆಯೊಂದಿಗೆ ಸ್ವಿಚ್ ವ್ಯವಸ್ಥೆ ಮಾಡಿಕೊಂಡು ಗುತ್ತಿಗೆ ಪಡೆದ ವಾಹನಗಳನ್ನು ದುರಸ್ಥಿ ನೆಪದಲ್ಲಿ ಬೇರೆ ಬೇರೆ ವಾಹನಗಳಿಗೆ ಹಾಲನ್ನು ತುಂಬಿಸಿಕೊಂಡು ಉತ್ತಮವಾದ ಹಾಲನ್ನು ಖಾಸಗಿ ಡೈರಿಗಳಿಗೆ ಕಲಬೆರಕೆ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಲಾಗುತ್ತಿತ್ತು.

ಈ ಪ್ರಕರಣದಿಂದ ಮಂಡ್ಯ ಜಿಲ್ಲೆಯ ಹಾಲು ಉತ್ಪಾದಕರು ನಂದಿನಿ ಹಾಲು ಖರೀದಿದಾರರು ಹಾಗೂ ಒಕ್ಕೂಟದ ನಿರ್ದೇಶಕರು ಬೆಚ್ಚಿ ಬಿದ್ದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬುದು ಹಾಲು ಉತ್ಪಾದಕರ ಆಗ್ರಹವಾಗಿದೆ.

ಇದನ್ನೂ ಓದಿ: 35ನೇಯ ಗೋವಾ ರಾಜ್ಯತ್ವ ದಿನ: ಮುಖ್ಯಮಂತ್ರಿಯಿಂದ ಅನಾಥ ಆಧಾರ ಯೋಜನೆ ಘೋಷಣೆ

ಒಕ್ಕೂಟದ ನಿರ್ದೇಶಕರು ಭಾಗಿಯಾಗಿಲ್ಲ:

ಹಾಲು ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಗರಣವನ್ನು ಬಯಲಿಗೆ ತರುವಲ್ಲಿ ಒಕ್ಕೂಟದ ಎಲ್ಲ ನಿರ್ದೇಶಕರು ಶ್ರಮವಹಿಸಿದ್ದಾರೆ. ಇದರಲ್ಲಿ ಒಕ್ಕೂಟದ ಯಾವ ನಿರ್ದೇಶಕರು ಭಾಗಿಯಾಗಿಲ್ಲ ಎಂದು ಅಧ್ಯಕ್ಷ ರಾಮಚಂದ್ರು ಸ್ಪಷ್ಟಪಡಿಸಿದರು.

ಡೈರಿಯ ಆವರಣದಲ್ಲಿ ಲಾರಿಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಬಗ್ಗೆ ಎಸ್ಪಿ ಅವರಿಗೆ ದೂರು ನೀಡಿ, ಉನ್ನತ ಮಟ್ಟದಲ್ಲಿ ಅಧಿಕಾರಿಗಳ ಹಂತದಲ್ಲೂ ತನಿಖೆ ನಡೆಸಲು ಡೈರಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಪ್ರಕರಣದಲ್ಲಿ ಲಾರಿ ಮಾಲೀಕರಾದ ಚನ್ನಪಟ್ಟಣ ಮೂಲದ ಪಿ.ರಾಜು ಹಾಗೂ ಕೋಣಸಾಲೆ ಗ್ರಾಮದ ರಂಜನ್ ಕುಮಾರ್ ಎಂಬುವವರು ಭಾಗಿಯಾಗಿದ್ದು, ಸದ್ಯ ಇಬ್ಬರು ಪರಾರಿಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆದ ಬಳಿಕ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಒಕ್ಕೂಟದ ಉಪಾಧ್ಯಕ್ಷ ರಘುನಂದನ್, ನಿರ್ದೇಶಕರಾದ ಎಚ್.ಟಿ.ಮಂಜು, ನೆಲ್ಲಿಗೆರೆ ಬಾಲು, ಬೋರೇಗೌಡ, ರೂಪಾ, ರವಿ, ತಮ್ಮಣ್ಣ, ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್, ಆಡಳಿತಾಧಿಕಾರಿ ಸಂತೋಷ್, ಇಂಜಿನಿಯರ್ ರುದ್ರಯ್ಯ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next