Advertisement

ಬಹುಮಾನ ವಂಚನೆ: ಹೇಳಿದ್ದು ಬೆಳ್ಳಿನಾಣ್ಯ, ಕಳುಹಿಸಿದ್ದು ಕಬ್ಬಿಣದತುಂಡು

08:00 AM Aug 02, 2017 | Team Udayavani |

ಕೋಟ: ಅದೃಷ್ಟ ಡ್ರಾದಲ್ಲಿ ನಿಮಗೆ ಮೊಬೈಲ್‌, ಬೆಳ್ಳಿನಾಣ್ಯ ಬಹುಮಾನ ಬಂದಿದೆ; ಪೋಸ್ಟಲ್‌ ಚಾರ್ಜ್‌ ನೀಡಿ ಬಹುಮಾನ ಪಡೆದುಕೊಳ್ಳಿ ಎಂದು ಕಬ್ಬಿಣದ ಯಂತ್ರದ ತುಂಡುಗಳನ್ನು ಪೋಸ್ಟ್‌ ಮೂಲಕ ಕಳುಹಿಸಿ ವಂಚಿಸಿದ ಘಟನೆ ಕೋಟದಲ್ಲಿ ಪರಿಸರದಲ್ಲಿ  ಇತ್ತೀಚೆಗೆ ಸಂಭವಿಸಿದೆ. ಇಲ್ಲಿನ ನಿವಾಸಿ ಬ್ಯಾಂಕ್‌ವೊಂದರ ನಿವೃತ್ತ ಮ್ಯಾನೇಜರ್‌ ಅವರ ಮೊಬೈಲ್‌ಗೆ ಪ್ರತಿಷ್ಠಿತ ಮೊಬೈಲ್‌ ಕಂಪೆನಿಯೊಂದರ ಹೆಸರಲ್ಲಿ 9071735842, 9844193580 ಸಂಖ್ಯೆಯಿಂದ ಬೆಂಗಳೂರಿನಿಂದ ಕರೆ ಬಂದಿದ್ದು, ನೀವು ನಮ್ಮ ಸಂಸ್ಥೆಯ ಅದೃಷ್ಟ ಗ್ರಾಹಕರಾಗಿ ಆಯ್ಕೆಯಾಗಿದ್ದೀರಿ. ನಾವು ನಿಮಗೆ ಪೋಸ್ಟ್‌ ಮೂಲಕ ಬಹುಮಾನ ಕಳುಹಿಸುತ್ತೇವೆ. ಪೋಸ್ಟ್‌ ಚಾರ್ಜ್‌ ನೀಡಿ ಬಹುಮಾನ ಪಡೆದುಕೊಳ್ಳಿ ಎಂದು ನಂಬಿಸಲಾಗಿತ್ತು.

Advertisement

ಹಿಂದೊಮ್ಮೆ ಅದೇ ಕಂಪೆನಿಯ ಮೊಬೈಲ್‌ ಅನ್ನು ಅವರು ಖರೀದಿಸಿದ್ದರಿಂದ ಹಾಗೂ ಕರೆ ಮಾಡಿದವರು ಅದೇ ವಿಳಾಸವನ್ನು ಹೇಳಿದ್ದರಿಂದ ನಿವೃತ್ತ ಮ್ಯಾನೇಜರ್‌ ಬಹುಮಾನವನ್ನು ಸ್ವೀಕರಿಸಲು ಮುಂದಾದರು. ಅನಂತರ ಎರಡು-ಮೂರು ದಿನಗಳಲ್ಲೇ ಪೋಸ್ಟ್‌ ಮೂಲಕ ಬಹುಮಾನ ಕೂಡ ಬಂತು. 1,800 ರೂ, ನೀಡಿ ಪಾರ್ಸೆಲ್‌ ಬಿಡಿಸಿಕೊಳ್ಳಲು ಹೇಳಿದಾಗ ಸ್ವಲ್ಪ ಅನುಮಾನಗೊಂಡರು. ಕುತೂಹಲದಿಂದ ಪಾರ್ಸೆಲ್‌ ಪಡೆದು ಬಿಚ್ಚಿ ನೋಡಿದಾಗ ಅದರಲ್ಲಿ ಮೊಬೈಲ್‌ ಹಾಗೂ ಬೆಳ್ಳಿ ನಾಣ್ಯಗಳ ಬದಲಿಗೆ ಕಬ್ಬಿಣದ ಹಳೆಯ ಯಂತ್ರದ ತಂಡುಗಳು, ದೇವರ ಮೂರ್ತಿಗಳು ಇತ್ತು. ಅನಂತರ ಆ ನಂಬರ್‌ಗೆ ಕರೆ ಮಾಡಿದಾಗ ಒಂದು ಸಂಖ್ಯೆ ಸ್ವಿಚ್ಡ್ ಆಫ್‌ ಆಗಿತ್ತು ಹಾಗೂ ಇನ್ನೊಂದು ಸಂಖ್ಯೆಯಲ್ಲಿ ಕರೆ ಸ್ವೀಕರಿಸಿದರು ಸರಿಯಾದ ಉತ್ತರ ನೀಡಲಿಲ್ಲ. ಇದೇ ರೀತಿ ಅನೇಕ ಮಂದಿಗೆ ಕರೆಗಳು ಬರುತ್ತಿದ್ದು, ಜನರನ್ನು ಮೋಸಗೊಳಿಸಲು ವ್ಯವಸ್ಥಿತ ಜಾಲವೊಂದು ಕಾರ್ಯಾಚರಿಸುತ್ತಿದೆ. ಸಾರ್ವಜನಿಕರು ಈ ಕುರಿತು ಎಚ್ಚರದಿಂದಿರಬೇಕು ಎಂದು ಮೋಸಕ್ಕೊಳಗಾದ ಅವರು ಪತ್ರಿಕೆಗೆ ತಿಳಿಸಿದ್ದಾರೆ ಹಾಗೂ ಪೊಲೀಸರಿಗೆ ದೂರು ನೀಡುವ ಕುರಿತು ಚಿಂತನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next