ಕಾರವಾರ: ಬ್ರಿಟಿಷ್ ಏರ್‌ವೇಸ್‌ನಲ್ಲಿ ಗ್ರೌಂಡ್ ಸ್ಟಾಫ್ ಕೆಲಸ ಕೊಡಿಸುವುದಾಗಿ ಹೇಳಿ ವಿವಿಧ ಜಿಲ್ಲೆಗಳ ಯುವಕರಿಗೆ ವಂಚಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದ್ದು, ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರವಾರ ಶಿರವಾಡ ನಿವಾಸಿ ಮಾರ್ವಿನ್ ಡಿಸೋಜಾ ಎಂಬಾತ ತಲಾ 1-1.50 ಲಕ್ಷ ರೂ.ಗಳನ್ನು ಪಡೆದು ಹಾಸನ, ಹೊನ್ನಾವರ, ಸಿದ್ಧಾಪುರ, ಶಿರಸಿ ಸೇರಿದಂತೆ ವಿವಿಧ ಜಿಲ್ಲೆಗಳ 40 ಯುವಕರಿಗೆ ಮೋಸ ಮಾಡಿದ್ದು, ಸದ್ಯ ಪರಾರಿಯಾಗಿದ್ದಾನೆ. ಮಾರ್ವಿನ್ ಜತೆ ಅಂಕಿತಾ ಹಾಗೂ ದಿಶಾ ಎಂಬುವವರು ಸಹ ಸೇರಿ ವಂಚಿಸಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ಒಂದು ತಿಂಗಳು ತರಬೇತಿ ನೀಡಿದಂತೆ ಮಾಡಿ ಯುವಕರನ್ನು ನಂಬಿಸಿ ಹಣ ಕೀಳಲಾಗಿತ್ತು. ಬ್ರಿಟಿಷ್ ಏರ್‌ವೇಸ್ ಗ್ರೌಂಡ್ ವರ್ಕರ್ ಎಂದು ಟೀಶರ್ಟ್ ಸಹ ಮಾಡಿಸಿ ಯುವಕರಿಗೆ ನೀಡಲಾಗಿತ್ತು. ಇದನ್ನು ಕಂಡ ಯುವಕರು ನೌಕರಿ ಸಿಕ್ಕಷ್ಟೇ ಖುಷಿಯಲ್ಲಿದ್ದರು. ಬೆಂಗಳೂರಿನ ಬ್ರಿಟಿಷ್ ಏರ್‌ವೇಸ್ ಕಚೇರಿಗೆ ಟೀ ಶರ್ಟ್ ಹಾಕಿಕೊಂಡು ಹೋದಾಗಲೇ ಇದು ನಕಲಿ ಎಂದು ಗೊತ್ತಾಗಿದೆ.
ವಿದೇಶಿ ಕಂಪನಿಯಾದ ಕಾರಣ ಹಣ ಠೇವಣಿ ಮಾಡಬೇಕಾಗುತ್ತದೆ. ಅಲ್ಲದೇ ಅಧಿಕಾರಿಗಳಿಗೆ ಸ್ವಲ್ಪ ಹಣ ನೀಡಬೇಕಾಗುತ್ತದೆ ಎಂದು ಹೇಳಿ ಯುವಕರನ್ನು ಮಾರ್ವಿನ್ ವಂಚಿಸಿದ್ದು, ಎಲ್ಲಾ ವಿವರಗಳನ್ನು ಬರೆದು ಪೊಲೀಸರಿಗೆ ನೀಡಿದ್ದಾರೆ.
ದಿಶಾ ರಾಯ್ಕರ್ ಎಲ್ಲಿಯ ನಿವಾಸಿ ಎಂಬುದು ತಿಳಿದಿಲ್ಲ. ಕೆಂಪೇಗೌಡ ಇಂಟರ್‌ನ್ಯಾಶನಲ್ ಏರ್‌ಪೋರ್ಟ್‌ನಲ್ಲಿ ಆಡ್ಮಿನಿಸ್ಟ್ರೇಟಿವ್ ಆಫೀಸ್ ಅಸಿಸ್ಟೆಂಟ್ ಎಂದು ಎಫ್‌ಬಿ ಖಾತೆಯಲ್ಲಿ ಆಕೆ ಬರೆದುಕೊಂಡಿದ್ದಾಳೆ. ಈಕೆಯದ್ದು ಕಾರವಾರ ಮೂಲದ ವಿಳಾಸವಿದ್ದು, ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದಿರುವುದಾಗಿ ವಿವರಗಳಲ್ಲಿದೆ. ಯುವಕರು ನೀಡಿದ ಮಾಹಿತಿ ಪ್ರಕಾರ ಅಂಕಿತಾ ರಾಯ್ಕರ್ ಯಲ್ಲಾಪುರದ ಮಂಚಿಕೇರಿ ನಿವಾಸಿ. ಈಕೆಯ ಜತೆ ಸೇರಿ ಮಾರ್ವಿನ್ ಡಿಸೋಜಾ ಕನಿಷ್ಠ 100 ಯುವಕರಿಂದ 1ರಿಂದ 1.50 ಲಕ್ಷ ರೂ. ಸಂಗ್ರಹಿಸಿದ್ದಾರೆ ಎಂದು ಠಾಣೆಗೆ ಬಂದ ಯುವಕರು ಆರೋಪಿಸಿದ್ದಾರೆ.
ಹಾಸನದ ಕೆಲ ಯುವಕರೂ ಮೋಸ ಹೋಗಿದ್ದಾರೆ. ಬ್ರಿಟಿಷ್ ಏರ್‌ವೇಸ್‌ನಲ್ಲಿ ಕೆಲಸ ಸಿಗುತ್ತದೆ ಎಂದು ದುಬೈನಲ್ಲಿದ್ದ ಕೆಲಸ ಬಿಟ್ಟು ಬಂದ ಯುವಕರು ಇದ್ದಾರೆ. ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ನೊಂದ ವಂಚಿತ ಯುವಕರ ಬೆಂಬಲಕ್ಕೆ ನಿಂತಿದ್ದಾರೆ.
ಯುವಕ ಶಿರವಾಡ ನಿವಾಸಿಯಾದ ಕಾರಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಮಡಿವಾಳ ಸ್ಟೇಶನ್‌ನಲ್ಲಿ ಯುವಕರು ದೂರು ನೀಡಲು ಹೋದರೆ, ವಂಚನೆ ಮಾಡಿದ ಯುವಕ-ಯುವತಿ ಕಾರವಾರದವರು. ಕಾರಣ ಸಂಬಂಧಪಟ್ಟ ಠಾಣೆಯಲ್ಲೇ ದೂರು ದಾಖಲಿಸಿ ಎಂದು ಅಲ್ಲಿನ ಪೊಲೀಸರು ಕಳುಹಿಸಿದ್ದಾಗಿ ನೊಂದ ಯುವಕರು ಹೇಳುತ್ತಿದ್ದಾರೆ.