Advertisement

ಮಹಿಳೆಗೆ ವಂಚನೆ: ಪೊಲೀಸರ ಬಲೆಗೆ ನಕಲಿ ಜ್ಯೋತಿಷಿ

10:30 AM Jul 22, 2019 | Team Udayavani |

ಬೆಳಗಾವಿ: ಪತಿಯ ಮನಸ್ಸು ಬದಲಿಸುತ್ತೇನೆ ಎಂದು ಪತ್ನಿಯನ್ನು ನಂಬಿಸಿ ಮೋಸ ಮಾಡಿದ ನಕಲಿ ಜ್ಯೋತಿಷಿಯನ್ನು ಬಂಧಿಸುವಲ್ಲಿ ನಗರದ ಎಪಿಎಂಸಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ರಾಯಚೂರು ಜಿಲ್ಲೆಯ ಹಟ್ಟಿಯ ವಿಜಯಕುಮಾರ ಸಸುಗತೆ (40) ಬಂಧಿತ ಆರೋಪಿ. ತಾನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ವಿ.ಆರ್‌. ಗುರೂಜಿ ಎಂದು ಹೇಳಿಕೊಂಡು ವಂಚನೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕರ ಪತ್ರದಲ್ಲಿ ಮುದ್ರಿತ ಜ್ಯೋತಿಷಿಯ ನಂಬಿದ್ದ ನಗರದ ಗೃಹಣಿಯೊಬ್ಬರು ಈ ಜ್ಯೋತಿಷಿಯ ಮುಂದೆ ತನ್ನ ನೋವು ತೋಡಿಕೊಂಡು ತನ್ನ ಪತಿ ತನ್ನಿಂದ ದೂರಾದ ಬಗ್ಗೆ ತಿಳಿಸಿದ್ದನ್ನೇ ಬಂಡವಾಳವಾಗಿಸಿಕೊಂಡ ಜ್ಯೋತಿಷಿಯು ಮಹಿಳೆಯಿಂದ ಪೂಜೆ ಹಾಗೂ ಇತ್ಯಾದಿಗಳಿಗಾಗಿ ಹಂತ ಹಂತವಾಗಿ ಸುಮಾರು 2,60,000 ರೂ. ಗಳನ್ನು ಫೋನ್‌ ಮೂಲಕವೇ ತಮ್ಮ ಬ್ಯಾಂಕ್‌ ಖಾತೆಗೆ ಹಾಕಿಸಿಕೊಂಡು ಅವಳಿಗೆ ಸುಳ್ಳು ಹೇಳುತ್ತ ಮೋಸ ಮಾಡುತ್ತಿದ್ದ.

ಈ ಬಗ್ಗೆ ನೀಡಿದ ದೂರಿನನ್ವಯ ಆತನ ಬ್ಯಾಂಕ್‌ ಖಾತೆ ಹಾಗೂ ಕರಪತ್ರದ ಜಾಡು ಹಿಡಿದು ಎಪಿಎಂಸಿ ಠಾಣೆಯ ಪೊಲೀಸರು ಬೆಂಗಳೂರಿನ ಸುಂಕದ ಕಟ್ಟೆಯಲ್ಲಿ ಡೋಂಗಿ ಜ್ಯೋತಿಷಿಯನ್ನು ಬಂಧಿಸಿ ವಿಚಾರಿಸಲಾಗಿ ಅವನು ಈ ಬೆಂಗಳೂರಿನ ಸುಂಕದಕಟ್ಟೆಯ ನಿವಾಸಿ. ಮೂಲತಃ ಹಟ್ಟಿಯ ವಿಜಯಕುಮಾರ ತಂದೆ ರಾಮಣ್ಣಾ ಸುಗತ ಎಂದು ತಿಳಿದು ಬಂದಿತು. ಆರೋಪಿಯಿಂದ 1.30 ಲಕ್ಷ ರೂ. ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ. ನಕಲಿ ಜ್ಯೋತಿಷಿಯನ್ನು ಬಂಧಿಸುವಲ್ಲಿ ಶ್ರಮಿಸಿದ ಎಪಿಎಂಸಿ ಠಾಣೆಯ ಪಿಐ ಜೆ.ಎಂ ಕಾಲಿಮಿರ್ಚಿ ಹಾಗೂ ಸಿಬ್ಬಂದಿಗಳಾದ ಪ್ರಕಾಶ ಗಂಡವ್ವಗೋಳ ಮತ್ತು ನಾಗರಾಜ ಭೀಮಗೋಳ ಅವರ ಕಾರ್ಯವನ್ನು ಪೊಲೀಸ್‌ ಆಯುಕ್ತರು ಶ್ಲಾಘಿಸಿದ್ದಾರೆ. ಬೆಳಗಾವಿಯ ನಾಗರಿಕರು ಈ ರೀತಿಯ ಖೊಟ್ಟಿ ಕರಪತ್ರಗಳ ಬಗ್ಗೆ ಹಾಗೂ ಡೋಂಗಿ ಜ್ಯೋತಿಷಿಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಯಾರಾದರೂ ಅಪರಿಚಿತರು ನೀಡುವ ಕರಪತ್ರಗಳನ್ನು ದಿನ ಪತ್ರಿಕೆಗಳಲ್ಲಿ ಸೇರಿಸಿ ಹಂಚದಂತೆ ಪತ್ರಿಕಾ ಏಜೆಂಟ್ ಮತ್ತು ಪೇಪರ್‌ಬಾಯ್‌ಗಳಿಗೂ ಸಹ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next