ಬೆಂಗಳೂರು: ರಾಜ್ಯ ಅಪರಾಧ ದಾಖಲೆಗಳ ವಿಭಾಗ(ಎಸ್‌ಸಿಆರ್‌ಬಿ)ದ ಇನ್‌ಸ್ಪೆಕ್ಟರ್‌ವೊಬ್ಬರಿಗೆ ಸೈಬರ್‌ವಂಚಕನೊಬ್ಬ ಬ್ಯಾಂಕ್ ಖಾತೆಯ ಕೆವೈಸಿ ಮತ್ತು ಪಾನ್‌ಕಾರ್ಡ್ ಅಪ್‌ಡೇಟ್ ಮಾಡುವಂತೆ ಸಂದೇಶ ಕಳುಹಿಸಿ ಬರೋಬ್ಬರಿ ಮೂರೂವರೆ ಲಕ್ಷ ರೂ. ದೋಚಿದ್ದಾನೆ.
ಈ ಸಂಬಂಧ ಎಸ್‌ಸಿಆರ್‌ಬಿಯ ಇನ್‌ಸ್ಪೆಕ್ಟರ್ ಬಿ.ನಾಗಭೂಷನ್(57) ಎಂಬುವವರು ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾ.21ರಂದು ಅಪರಿಚಿತ ವ್ಯಕ್ತಿಯೊಬ್ಬರು ನಾಗಭೂಷಣ್‌ಗೆ ಕರೆ ಮಾಡಿ, ತಮ್ಮ ಬ್ಯಾಂಕ್ ಖಾತೆಯ ಕೆವೈಸಿ ಮತ್ತು ಪಾನ್‌ಕಾರ್ಡ್ ಅಪ್‌ಡೇಟ್ ಮಾಡಿ ಎಂದು ಲಿಂಕ್ ಸಮೇತ ಸಂದೇಶ ಕಳುಹಿಸಿದ್ದಾನೆ. ಅದನ್ನು ನಂಬಿದ ಇನ್‌ಸ್ಪೆಕ್ಟರ್ ತಮ್ಮ ಪಾನ್‌ಕಾರ್ಡ್ ನಂಬರ್ ಮತ್ತು ಬ್ಯಾಂಕ್ ಮಾಹಿತಿ ದಾಖಲಿಸಿದ್ದಾರೆ. ನಂತರ ಅವರ ಖಾತೆಯಿಂದ ಹಂತ-ಹಂತವಾಗಿ 3.63 ಲಕ್ಷ ರೂ. ಕಡಿತ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ನಿರಂತರ ಸಂದೇಶಗಳನ್ನು ಬರುತ್ತಿರುವುದನ್ನು ಕಂಡ ಬ್ಯಾಂಕ್ ಖಾತೆಯ ಬಾಕಿ ಪರಿಶೀಲಿಸಿದಾಗ ವಂಚನೆಗೊಳಲಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಇನ್‌ಸ್ಪೆಕ್ಟರ್ ನಾಗಭೂಷಣ್ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.