ಬೆಂಗಳೂರು: ಹೊಸದಾಗಿ ಕಾಲ್ ಸೆಂಟರ್ ಮತ್ತು ಔಟ್ ಸೋರ್ಸಿಂಗ್ ಕಂಪನಿ ತೆರೆದರೆ ಪ್ರತಿಷ್ಠಿತ ಕಂಪನಿಗಳಿಂದ ಪ್ರಾಜೆಕ್ಟ್ ಕೆಲಸಗಳನ್ನು ಕೊಡಿಸುತ್ತೇವೆ ಎಂದು ನಂಬಿಸಿ ಕೋಟ್ಯಂತರ ರೂ ಹಣ ಪಡೆದು ವಂಚಿಸಿದ್ದ ಇಂಜಿನಿಯರ್, ಹಾಗೂ ಆತನ ವಂಚನೆಗೆ ಸಾಥ್ ನೀಡುತ್ತಿದ್ದ ರೌಡಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಹಳ್ಳಿ ಗೌಡನಪಾಳ್ಯದ ನಿವಾಸಿ ದರ್ಶನ್ ಶ್ರೀರಾಮ್(32), ಬಿಟಿಎಂ ಲೇಔಟ್‌ನ ಷಣ್ಮುಗ(46) ಬಂಧಿತರು. ಈ ವಂಚನೆಯಲ್ಲಿ ದರ್ಶನ್ ಪತ್ನಿ ನಿಖೀತಾ ಕೂಡ ಭಾಗಿಯಾಗಿದ್ದು ಆಕೆಯನ್ನು ವಿಚಾರಣೆ ನಡೆಸಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕಾ ನೋಂದಣಿಯ “ಡಿಎನ್‌ಎಸ್ ಪ್ರೈಮ್’ ಹೆಸರಿನಲ್ಲಿ 2015ರಲ್ಲಿ ಕಂಪನಿ ತೆರೆದಿದ್ದ ದರ್ಶನ್ ಹಾಗೂ ನಿಖೀತಾ, ಬೆಂಗಳೂರು, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ರಾಜ್ಯಗಳಲ್ಲಿ ಹೊಸದಾಗಿ ಸಾಫ್ಟ್‌ವೇರ್, ಕಾಲ್‌ಸೆಂಟರ್, ಔಟ್ ಸೋರ್ಸಿಂಗ್ ಪ್ರೋಸೆಸಿಂಗ್ ಕಂಪನಿ ತೆರೆಯಲು ಬಯಸುವವರಿಗೆ ಇನ್‌ಫೋಸಿಸ್, ಎಚ್.ಪಿ, ಐಬಿಎಂ, ಒರ್‌ಸೆಲ್, ವಿಎಮ್‌ವೇರ್ ಸೇರಿ ಹಲವಾರು ಪ್ರತಿಷ್ಠಿತ ಕಂಪನಿಗಳ ಔಟ್ ಸೋರ್ಸಿಂಗ್ ಪ್ರಾಜೆಕ್ಟ್ ಕೊಡಿಸುವುದಾಗಿ ಹೇಳಿಕೊಂಡಿದ್ದರು.
ಈ ಜಾಹಿರಾತುಗಳನ್ನು ಗಮನಿಸಿದ್ದ ಕೆಲ ಟೆಕ್ಕಿಗಳು ಆರೋಪಿಗಳನ್ನು ಸಂಪರ್ಕಿಸಿದ್ದರು. ಅವರಿಂದ ಹಣ ಪಡೆದು, ಬಳಿಕ ಉದ್ದೇಶಪೂರ್ವಕಾಗಿ ಅವರ ಒಪ್ಪಂದ ರದ್ದುಗೊಳಿಸುತ್ತಿದ್ದರು. ಕಟ್ಟಿಸಿಕೊಂಡ ಹಣ ವಾಪಾಸ್ ನೀಡುತ್ತಿರಲಿಲ್ಲ. ಇದುವರೆಗಿನ ತನಿಖೆಯಲ್ಲಿ ಆರೋಪಿಗಳು ಹತ್ತಕ್ಕೂ ಅಧಿಕ ಜನರಿಗೆ ಒಟ್ಟು 2.10 ಕೋಟಿ ರೂ.ವಂಚಿಸಿರುವುದು ಕಂಡು ಬಂದಿದೆ. ಆರೋಪಿಗಳಿಂದ 1 ಕಾರು, 1 ಲ್ಯಾಪ್‌ಟಾಪ್, ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಯಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಇ ಮೇಲ್: ಪ್ರತಿಷ್ಠಿತ ಕಂಪನಿಗಳ ನಕಲಿ ಈ-ಮೇಲ್ ಐಡಿಗಳನ್ನು ತಾವೇ ಸೃಷ್ಟಿಸಿ ತಮ್ಮ ಗ್ರಾಹಕರಿಗೆ ಕಳುಹಿಸುತ್ತಿದ್ದರು. ಆರೋಪಿಗಳ ಮಾತು ನಂಬುತ್ತಿದ್ದ ಗ್ರಾಹಕರು ಹೊಸ ಕಾಲ್ ಸೆಂಟರ್ ತೆರೆಯುತ್ತಿದ್ದರು. ಕಂಪನಿಯ ಪ್ರಾಜೆಕ್ಟ್ ಕೊಡಿಸಲು ಲಕ್ಷಾಂತರ ರೂ. ದುಡ್ಡನ್ನು ಪಡೆಯುತ್ತಿದ್ದರು. ನಕಲಿ ಪ್ರಾಜೆಕ್ಟ್ಗಳನ್ನು ಗ್ರಾಹಕರಿಗೆ ನೀಡಿದ ಎರಡು ತಿಂಗಳಲ್ಲಿಯೇ ಪ್ರಾಜೆಕ್ಟ್ ಕೆಲಸ ಸರಿಯಾಗಿ ಮಾಡಲಿಲ್ಲ ಎಂದು ಹೇಳಿ ಒಪ್ಪಂದ ಕಾಂಟ್ರಾಕ್ಟ್‌ನು° ರದ್ದು ಮಾಡುತ್ತಿದ್ದರು.
ಆದರೆ, ಗ್ರಾಹಕರಿಂದ ಹಣ ಹಿಂದಿರುಗಿಸುತ್ತಿರಲಿಲ್ಲ. ಹಣ ವಾಪಾಸ್ ನೀಡುವಂತೆ ಒತ್ತಾಯಿಸಿದರೆ, ತಮ್ಮ ಪರಿಚಿತ ರೌಡಿ ಷಣ್ಮುಗ ಮೂಲಕ ಅವರಿಗೆ ಬೆದರಿಕೆ ಹಾಕಿಸುತ್ತಿದ್ದರು. ಇತ್ತೀಚೆಗೆ ತಮ್ಮ ಹಳೆ ಕಂಪನಿ ಮುಚ್ಚಿದ್ದ ಆರೋಪಿಗಳು ಫಾಕ್ಸ್ ರನ್ ಹೆಸರಿನ ಹೊಸ ನಕಲಿ ಕಂಪನಿ ತೆರೆದು ವಂಚಿಸಲು ಯತ್ನಿಸುತ್ತಿದ್ದರು ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.
ಮಾಜಿ ಶಾಸಕರ ಹೆಸರು ಬಳಕೆ: ಆರೋಪಿ ನಿಖೀತಾ ಗಾಡ್ವೆ ಮಾಜಿ ಶಾಸಕರೊಬ್ಬರ ಸಹೋದರಿ ಪುತ್ರಿಯಾಗಿದ್ದಾರೆ. ಹಲವು ವರ್ಷಗಳ ಹಿಂದೆ ದರ್ಶನ್‌ನನ್ನು ಪ್ರೀತಿಸಿ ವಿವಾಹವಾಗಿದ್ದರು. 2013ರವರೆಗೂ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್, ಆನ್‌ಲೈನ್ ಪೋರ್ಟಲ್‌ನಲ್ಲಿ ಕಂಪನಿ ನಡೆಸುತ್ತಿದ್ದ ಸಂಜಿತ್ ಬೋಹಾ ಎಂಬಾತನನ್ನು ಸಂಪರ್ಕಿಸಿ, ಹೊಸ ಕಾಲ್ ಸೆಂಟರ್ ಮತ್ತು ಔಟ್ ಸೋರ್ಸಿಂಗ್ ಕಂಪನಿ ತೆರೆಯಲು ಸಲಹೆ ಪಡೆದು ಅದರಂತೆ ಬೆಂಗಳೂರಿನಲ್ಲಿ ಐದಾರು ಕಂಪನಿ ಆರಂಭಿಸಿದ್ದ ಬಳಿಕ ಎಲ್ಲವನ್ನೂ ಮುಚ್ಚಿದ್ದಾನೆ. ಗ್ರಾಹಕರು ಹಣ ವಾಪಾಸ್ ಕೇಳಿದರೆ ಮಾಜಿ ಶಾಸಕರ ಸಂಬಂಧಿ ಗೊತ್ತಾ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದರು.