ಕಾರವಾರ: ಚಿತ್ರ ನಿರ್ಮಾಪಕ ಮೋಹನ್ ನಾಯಕ ಮತ್ತು ಅವರ ಮಗ ಹಾಗೂ ನನ್ನ ಹೆಸರಲ್ಲಿ ದ್ವಾರಕ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಇಟ್ಟ ಒಟ್ಟು 10 ಲಕ್ಷ ರೂ. ಠೇವಣಿ ಹಣವನ್ನು ಮರಳಿಸದೇ ವಂಚನೆ ಮಾಡಿದ್ದಾರೆ. ನನಗೆ ಜಾತಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮೋಹನ್ ಅವರ ಪತ್ನಿ ಪದ್ಮಲತಾ ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣನ ಲವ್ ಸ್ಟೋರಿ ಸಿನಿಮಾದ ನಿರ್ಮಾಪಕ ಮೋಹನ್ ನಾಯ್ಕ, ನಂಬಿಕೆಯಿಂದ ಸೌಹಾರ್ದ ಸಹಕಾರಿಯಲ್ಲಿ ಇಟ್ಟ ಠೇವಣಿ ಹಣ ನೀಡದೆ ವಂಚಿಸಲಾದ ಘಟನೆಯನ್ನು ವಿವರಿಸಿದರು.
ಹಿಲ್ಲೂರು ನನ್ನ ಹುಟ್ಟೂರು, ಸೂರ್ವೆ ಮತ್ತು ಗೋಕರ್ಣದಲ್ಲಿ ಹಲವು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ ನನಗೆ ಬಾವಿಕೇರಿ ಮಂಜುನಾಥ ನಾಯಕ ಎಂಬುವವರು ಸ್ನೇಹದಿಂದ ಸೌಹಾರ್ದ ಸಹಕಾರಿಯಲ್ಲಿ ಹಣ ಠೇವಣಿ ಇಡಿಸಿದರು. ದ್ವಾರಕ ಸೌಹಾರ್ದದಲ್ಲಿ ಮಗನ ಭವಿಷ್ಯದ ದೃಷ್ಟಿಯಿಂದ 2010 ರಲ್ಲಿ ನನ್ನ ಹಾಗೂ ಪತ್ನಿ ಹೆಸರಲ್ಲಿ ತಲಾ 3.5 ಲಕ್ಷ, ಮಗನ ಹೆಸರಲ್ಲಿ 3 ಲಕ್ಷ ರೂ. ಒಟ್ಟು 10 ಲಕ್ಷ ರೂ, ಠೇವಣಿ ಇಟ್ಟಿದ್ದೆವು. 2017ರಲ್ಲಿ ಠೇವಣಿ ಅವಧಿ ಮುಗಿದಿತ್ತು. 2019 ಮಾರ್ಚ್‌ನಲ್ಲಿ ಠೇವಣಿ ಹಣವನ್ನು ನಮ್ಮ ಖಾತೆಗೆ ಹಾಕಿ ಅಥವಾ ವಾಪಸ್ ಕೊಡಿ ಎಂದು ಕೇಳಲು ಸೊಸೈಟಿಗೆ ಹೋದಾಗ ಠೇವಣಿ ಹಣವನ್ನು ಮಾಡಿದ ಸಾಲಕ್ಕೆ ಮುಟ್ಟುಗೋಲು ಹಾಕಿರುವ ಸಂಗತಿ ತಿಳಿಯಿತು.
ಮಂಜುನಾಥ ನಾಯಕ ಜೊತೆ ಜಂಟಿಯಾಗಿ ಅಂಕೋಲಾದಲ್ಲಿ ಖರೀದಿಸಿದ ಜಮೀನನ್ನು, ವ್ಯಕ್ತಿಯೊಬ್ಬರು ಬ್ಯಾಂಕ್‌ಗೆ ಅಡವಿಟ್ಟು ಸಾಲ ಪಡೆದಿದ್ದಾರೆ ಎನ್ನಲಾಗುತ್ತಿದೆ. ನನ್ನ ಸಹಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಫೂರ್ಜರಿ ಮಾಡಿ ಜಮೀನು ಸಹ ಲಪಟಾಯಿಸಲಾಗಿದೆ. ಸೇಲ್ ಡೀಡ್ ಮತ್ತು ಪಹಣಿಯಲ್ಲಿ ಮೋಹನ್ ನಾಯಕ ಮತ್ತು ಮಂಜುನಾಥ ನಾಯಕ ಹೆಸರಿತ್ತು. ಈಗ ನನ್ನ ಹೆಸರೇ ಪಹಣಿಯಿಂದ ಕಾಣೆಯಾಗಿದೆ. ಸೌಹಾರ್ದ ಸೊಸೈಟಿ ಈ ಬಗ್ಗೆ ಕೇಳಿದರೆ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಅವರು ವಿವರಿಸಿದರು.
ಈ ಸಂಬಂಧ ದ್ವಾರಕ ಸೌಹಾರ್ದ ಸೊಸೈಟಿ ಅಧ್ಯಕ್ಷರು ನನ್ನ ಪತ್ನಿಯ ಜಾತಿ ಹಿಡಿದು ನಿಂದಿಸಿದ ಕಾರಣ ಪೊಲೀಸ್ ಠಾಣೆಯಲ್ಲಿ ಪತ್ನಿ ಪದ್ಮಲತಾ ದೂರು ನೀಡಿದ್ದಾರೆ. ಜಮೀನನ್ನು ಸೊಸೈಟಿಯಲ್ಲಿ ಅಡವಿಟ್ಟು, ಸಾಲ ಮಾಡಿ, ಸಹಿ ಫೂರ್ಜರಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಆಸ್ತಿ ನೋಂದಣಿ ಅಧಿಕಾರಿ ವಿರುದ್ಧ ಸಹ ದೂರು ನೀಡಿದ್ದೇನೆ ಎಂದು ಹೇಳಿದರು.
ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಬಡವರಿಗೂ ಹೀಗೆ ವಂಚಿಸಿದರೆ ಹೇಗೆ? ನನಗಾದ ಅನ್ಯಾಯ ಯಾರಿಗೂ ಆಗಬಾರದು. ಮಯೂರ ಹತ್ರ ನಾನು ಭಿಕ್ಷೆ ಬೇಡುವ ರೀತಿಯಲ್ಲಿ ಹಣ ಮರಳಿಸಲು ಕೇಳಿಕೊಂಡೆ. ಆದರೆ ಅವರು ಸ್ಪಂದಿಸಲಿಲ್ಲ. ಮನೆಯ ಹತ್ತಿರ ಹೋದಾಗ ನಮ್ಮನ್ನು ಎರಡು ತಾಸು ಕಾಯಿಸಿದರು. ಕಾಗದ ಪತ್ರಗಳ ಗೋಲ್ ಮಾಲ್ ನಡೆದಿದೆ. ನಾನು ಬೆಂಗಳೂರಿನಲ್ಲಿ ಇರುತ್ತೇವೆ. ದೂರದ ಅಂಕೋಲಾದಲ್ಲಿ ಇರುವವರನ್ನು ಸ್ನೇಹಿತರೆಂದು ನಂಬಿದೆ. ಈಗ ಮೋಸವಾಗಿದೆ. ನಾನು ಸಹ ಲಾ ಓದಿದ್ದೇನೆ. ಪ್ರಾಕ್ಟೀಸ್ ಮಾಡುತ್ತೇನೆ. ನನ್ನಂಥವರಿಗೆ ನಂಬಿಕೆ ದ್ರೋಹ ಮಾಡುತ್ತಾರೆ ಎಂದರೆ ಹೇಗೆ? ಇನ್ನು ಜನ ಸಾಮಾನ್ಯರ ಪಾಡೇನು? ತಾತ್ವಿಕ ಹೋರಾಟ ಮಾಡಲು ಪೊಲೀಸ್ ದೂರು ನೀಡಲಾಗಿದೆ. ಈ ಸಂಬಂಧ ಕಾನೂನು ಹೋರಾಟ ನಡೆಯಲಿದೆ ಎಂದರು.
ಪದ್ಮಲತಾ ನಾಯಕ ಮಾತನಾಡಿ ಠೇವಣಿ ಇಟ್ಟ ಹಣವನ್ನು ಅವಧಿ ಮುಗಿದ ನಂತರ ಕೇಳಲು ಹೋದರೆ ಸೌಹಾರ್ದ ಸಹಕಾರ ನಿಯಮಿತದ ಅಧ್ಯಕ್ಷ ಮಯೂರ ಎಂಬಾತ ನನ್ನ ಜಾತಿ ಹಿಡಿದು ನಿಂದಿಸಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಅಲ್ಲದೇ ಠೇವಣಿ ವಂಚಿಸುವಲ್ಲಿ ಕಾರಣರಾದ ಬಾವಿಕೇರಿ ದ್ವಾರಕ ಸೌಹಾರ್ದ ಸಹಕಾರ ನಿಯಮಿತ ಸಿಬ್ಬಂದಿಗಳಾದ ಮಂಜುನಾಥ ನಾಗೇಶ್ ನಾಯಕ, ಮಂಜುಳಾ ನಾಯಕ, ಪ್ರಕಾಶ್ ನಾಯಕ ವಿರುದ್ಧವೂ ದೂರು ನೀಡಿದ್ದೇನೆ ಎಂದು ಪದ್ಮಲತಾ ವಿವರಿಸಿದರು.
ವಕೀಲ ನಾರಾಯಣ ರೆಡ್ಡಿ ಮಾತನಾಡಿ ಈ ಪ್ರಕರಣ ವಂಚನೆಗೆ ಹಾಗೂ ಫೂರ್ಜರಿಗೆ ಸಂಬಂಧ ಪಟ್ಟದ್ದು. ಅಲ್ಲದೇ ನನ್ನ ಕಕ್ಷಿದಾರರಾದ ಪದ್ಮಾಲತಾ ಅವರನ್ನು ಜಾತಿ ಹಿಡಿದು ನಿಂದಿಸಲಾಗಿದೆ. ಇದು ಗಂಭೀರ ಪ್ರಕರಣ, ಪೊಲೀಸರು ದೂರು ಸ್ವೀಕರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದೆ ಕಾನೂನಿನಂತೆ ಕ್ರಮ ಕೈಗೊಳ್ಳಲಿ ಎಂದರು.