ಬೆಂಗಳೂರು: ಮನೆಕೆಲಸಗಾರನೊಬ್ಬ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಹೆಸರಿನಲ್ಲಿ ಚೆಕ್‌ಗಳಿಗೆ ನಕಲಿ ಸಹಿ ಮಾಡಿ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕೋರಮಂಗಲ ನಿವಾಸಿ ನಿವೃತ್ತ ಐಎಎಸ್ ಅಧಿಕಾರಿ ಎಸ್.ಆರ್. ವಿಜಯ್ (84) ವಂಚನೆಗೊಳಗಾದವರು. ಈ ಸಂಬಂಧ ವಿಜಯ್ ಅವರ ಪುತ್ರ ಖಾಸಗಿ ಕಂಪನಿಯೊಂದರಲ್ಲಿ ಸಿಇಒ ಆಗಿರುವ ವಿಜಯ್ ಸಿರಗೌನಿ ಕೊಟ್ಟ ದೂರಿನ ಮೇರೆಗೆ ಗಂಗಾವತಿ ಮೂಲದ ಕಾಸಿಂಸಾಬ್ (34) ಎಂಬಾತನ ವಿರುದ್ಧ ಕೋರಮಂಗಲ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ವಿಜಯ್ ಅವರು ವಯೋಸಹಜ ಕಾಯಿಲೆಯಿಂದಬಳಲುತ್ತಿದ್ದು,ಅವರ ಆರೋಗ್ಯ ನೋಡಿಕೊಳ್ಳಲು ಖಾಸಗಿ ಸೆಕ್ಯೂರಿಟಿ ಕಂಪನಿ ಮೂಲಕ ಆರೋಪಿ ಕಾಸಿಂ ಸಾಬ್‌ನ್ನು ಮಾ.23ರಂದು ಕೆಲಸಕ್ಕೆ ನೇಮಿಸಲಾಗಿತ್ತು. ವಿಜಯ್ ಅವರನ್ನು ಆರಂಭದಲ್ಲಿ ಕಾಸಿಂ ಚೆನ್ನಾಗಿ ನೋಡಿಕೊಂಡಿದ್ದ. ಹಣದ ಅವಶ್ಯಕತೆಯಿದ್ದಾಗ ಬ್ಯಾಂಕ್‌ಗೆ ಹೋಗಿ ಈತನೇ ಡ್ರಾ ಮಾಡಿಕೊಂಡು ಬರುತ್ತಿದ್ದ. ಜೂ.21ರಂದು ಸಹೋದರನ ಮದುವೆಗೆ ಹೋಗಿದ್ದ ಆರೋಪಿ ವಾಪಸ್ ಬಂದಿರಲಿಲ್ಲ.
ಜೂ.11ರಂದು ಆರೋಪಿ 8 ಲಕ್ಷ ರೂ. ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಈ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿತ್ತು. ನಂತರ ವಿಜಯ್ ಅವರು ತಮ್ಮ ಬ್ಯಾಂಕ್‌ನ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ,ನಕಲಿ ಸಹಿ ಮಾಡಿ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಅನಂತರ ಕೂಲಂಕಷವಾಗಿ ಪರಿಶೀಲಿಸಿದಾಗ ಇದುವರೆಗೆ ಆರೋಪಿ 14.90 ಲಕ್ಷ ರೂ. ಅನ್ನು ದುರುಪಯೋಗಪಡಿಸಿಕೊಂಡಿರುವುದು ಗೊತ್ತಾಗಿದೆ. ದೂರಿನ ಸಂಬಂಧ ಆರೋಪಿಯನ್ನು ಸಂಪರ್ಕಿಸಿದಾಗಕಾಸಿಂಸಾಬ್ ಗೊಂದಲದ ಹೇಳಿಕೆ ನೀಡಿದ್ದಾನೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.