Advertisement

Fraud; ಸರಕಾರದ ಯೋಜನೆ ಹೆಸರಲ್ಲಿ ವಂಚನೆ ಹೆಚ್ಚಳ, ನಕಲಿ ಗ್ರಾಹಕಸೇವಾ ಕೇಂದ್ರಗಳು

12:30 AM Apr 03, 2024 | Team Udayavani |

ಕೋಟ: ಆನ್‌ಲೈನ್‌ ವಂಚನೆ ಜಾಲಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ವಂಚಕರು ಕೂಡ ಜನರನ್ನು ತಮ್ಮ ಖೆಡ್ಡಾಕ್ಕೆ ಬೀಳಿಸಲು ಹೊಸ-ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಸರಕಾರದ ಯೋಜನೆ ಹೆಸರಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚುತ್ತಿದ್ದು, ಗೂಗಲ್‌ನಲ್ಲೂ ನಕಲಿ ಗ್ರಾಹಕಸೇವಾ ಕೇಂದ್ರಗಳ ಮೂಲಕ ವಂಚಿಸಲಾಗುತ್ತಿದೆ.

Advertisement

ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿದ್ಕಲ್‌ಕಟ್ಟೆಯ ಹರ್ಷವರ್ಧನ ಅವರಿಗೆ ಇತ್ತೀಚೆಗೆ ಫೇಸುºಕ್‌ನಿಂದ ಪಿಎಂ ಜನಧನ್‌ ಯೋಜನೆ ಹೆಸರಲ್ಲಿ ನಂಬರ್‌ ಪ್ಲೇಟ್‌ ಉದ್ಯೋಗ ಮಾಡಲು ಪಿಎಂವೈಜಿ ಯೋಜನೆಯಡಿ ಸಬ್ಸಿಡಿ ಲೋನ್‌ ಮಾಡಿಕೊಡುವುದಾಗಿ ಸಂದೇಶ ಬಂದಿತ್ತು. ಅದರಂತೆ ಸಂಪರ್ಕಿಸಿದಾಗ ಗುರುತಿನ ದಾಖಲೆಗಳನ್ನು ಪಡೆದು ಸಾಲ ಮಂಜೂರಾತಿ ಪ್ರಕ್ರಿಯೆಗಳಿಗೆ ಎಂದು 98,551 ರೂ.ಗಳನ್ನು ಆನ್‌ಲೈನ್‌ ಮೂಲಕ ವಂಚಕರು ಪಡೆದಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕೊಲ್ಲೂರು ಸಮೀಪದ ಶ್ರೀಕಾಂತ್‌ ಅವರನ್ನು ಪ್ರಧಾನಮಂತ್ರಿ ಜನಧನ್‌ ಯೋಜನೆಯಡಿ ಸಾಲ ಕೊಡಿಸುವುದಾಗಿ ಆನ್‌ಲೈನ್‌ ಮೂಲಕ ಸಂಪರ್ಕಿಸಿದ್ದು, ದಾಖಲೆ ಪತ್ರಗಳನ್ನು ಪಡೆದು 1 ಲಕ್ಷ ರೂ.ಗೂ ಅಧಿಕ ಪಡೆಯಲಾಗಿದೆ.

ಮಂಗಳೂರಿನ ಶ್ರೀಧರ್‌ ಅವರಿಗೆ ಕರೆ ಮಾಡಿ ಸ್ವಂತ ಉದ್ಯೋಗಕ್ಕೆ ಸಬ್ಸಿಡಿ ಸಾಲ ನೀಡುವುದಾಗಿ ದಾಖಲೆ ಪಡೆದು ಸಾಲ ಮಂಜೂರಾಗಿರುವಂತೆ ನಕಲಿ ಪತ್ರ ಕಳುಹಿಸಿ ಮುಂಗಡವಾಗಿ 1 ಲಕ್ಷ ರೂ. ಪಡೆಯಲಾಗಿದೆ. ಈ ರೀತಿಯ ಹಲವು ಪ್ರಕರಣಗಳು ದಾಖಲಾಗುತ್ತಿವೆ.

ನಕಲಿ ಕಸ್ಟಮರ್‌ ಕೇರ್‌
ನಮ್ಮ ಖಾತೆಯಿಂದ ತಪ್ಪಾಗಿ ಹಣ ಪಾವತಿಯಾದಾಗ ಅಥವಾ ಎಲೆಕ್ಟ್ರಾನಿಕ್‌ ವಸ್ತುಗಳ ಬಳಕೆಯಲ್ಲಿ ಸಮಸ್ಯೆಯಾದರೆ ಕಸ್ಟಮರ್‌ ಕೇರ್‌ ಮೊರೆ ಹೋಗುವುದು ಸಾಮಾನ್ಯ. ಆದರೆ ಆನ್‌ಲೈನ್‌ ವಂಚನೆ ಜಾಲಗಳು ಗೂಗಲ್‌ನಲ್ಲಿ ನಕಲಿ ಕಸ್ಟಮರ್‌ ಕೇರ್‌ ಸಂಪರ್ಕವನ್ನು ನಮೂದಿಸಿವೆ. ಆ ಸಂಖ್ಯೆಗೆ ಕರೆ ಮಾಡಿದರೆ ಸಹಾಯ ಮಾಡುವುದಾಗಿ ನಂಬಿಸಿ ಖಾತೆಯಲ್ಲಿನ ಹಣವನ್ನು ದೋಚುತ್ತಾರೆ. ಹಿರಿಯಡ್ಕದ ಕುಮಾರ್‌ ಗೂಗಲ್‌ ಪೇಯಲ್ಲಿ ಕೈತಪ್ಪಿ ಬೇರೊಬ್ಬರ ಖಾತೆಗೆ ಹಣ ಪಾವತಿಸಿದ್ದು ಅದನ್ನು ವಾಪಸು ಪಡೆಯಲೋಸುಗ ಗೂಗಲ್‌ನಲ್ಲಿ ಕಸ್ಟಮರ್‌ ಕೇರ್‌ ಸಂಪರ್ಕ ಸಂಖ್ಯೆಯನ್ನು ಹುಡುಕಿ ಕರೆ ಮಾಡಿದಾಗ 5 ಅಂಕಿಗಳ ಒಟಿಪಿ ಕಳುಹಿಸಿ ದಾಖಲಿಸುವಂತೆ ತಿಳಿಸಿದರು. ಪಾಸ್‌ವರ್ಡ್‌ ದಾಖಲಿಸುತ್ತಿದ್ದಂತೆ ಖಾತೆಯಿಂದ 75,040 ರೂ. ಮಾಯವಾಗಿತ್ತು. ಮಂಗಳೂರಿನ ರಿತೀಶ್‌ ಇದೇ ರೀತಿ ಲಕ್ಷಾಂತರ ರೂ. ಕಳೆದುಕೊಂಡಿದ್ದರು. ಕುಂದಾಪುರದ ಪ್ರದೀಪ್‌ ಗೂಗಲ್‌ ಪೇ ಮುಖಾಂತರ 25,700 ರೂ.ಗಳನ್ನು ತಪ್ಪಾಗಿ ಪಾವತಿಸಿದ್ದು, ಗೂಗಲ್‌ನಲ್ಲಿ ಸಿಕ್ಕಿದ ಕಸ್ಟಮರ್‌ ಕೇರ್‌ಗೆ ಕರೆ ಮಾಡಿದಾಗ 24 ಗಂಟೆಯೊಳಗೆ ಹಣವನ್ನು ಮರಳಿ ಕೊಡಿಸುವುದಾಗಿ ಒಟಿಪಿ ಪಡೆದು 76,195 ರೂ. ವಂಚಿಸಲಾಗಿದೆ. ಹೀಗಾಗಿ ಗೂಗಲ್‌ನಿಂದ ಕಸ್ಟಮರ್‌ ಕೇರ್‌ ಸಂಖ್ಯೆಯನ್ನು ಪಡೆದು ಸಂಪರ್ಕಿಸುವ ಮೊದಲು ಸಾಕಷ್ಟು ಯೋಚಿಸಬೇಕಿದೆ.

Advertisement

1930 ದೂರು ನೀಡಿ
ಆನ್‌ಲೈನ್‌ ವಂಚನೆ ಪ್ರಕರಣ ಈ ಹಿಂದೆ ಸೆನ್‌ ಠಾಣೆಯಲ್ಲಿ ದಾಖಲಾಗುತ್ತಿದ್ದು ಈಗ ಸ್ಥಳೀಯ ಠಾಣೆಯಲ್ಲೇ ದೂರು ಪಡೆಯಲಾಗುತ್ತಿದೆ. ವಂಚನೆಗೊಳಗಾದ ಕೆಲವೇ ನಿಮಿಷಗಳಲ್ಲಿ 1930 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ವಂಚಕರ ಕೈಸೇರಿದ ಹಣವನ್ನು ಖಾತೆಯಿಂದ ವರ್ಗಾಯಿಸದಂತೆ ತಡೆಹಿಡಿಯುವ ವ್ಯವಸ್ಥೆ ಇದೆ.

ಹೆಚ್ಚಿನ ಜನರು ಸರಕಾರದ ಯೋಜನೆಗಾಗಿ ಗೂಗಲ್‌, ಯೂಟ್ಯೂಬ್‌ ಮುಂತಾದ ಆ್ಯಪ್‌ಗ್ಳ ಮೊರೆ ಹೋಗುತ್ತಾರೆ. ಈ ರೀತಿ ಶೋಧ ನಡೆಸಿದಾಗ ವಂಚನೆಗೆ ಸಿಲುಕುವ ಸಾಧ್ಯತೆ ಹೆಚ್ಚು. ಪ್ರಮುಖ ಬ್ಯಾಂಕ್‌ಗಳು ಸೇರಿದಂತೆ, ಕಂಪೆನಿಗಳ ತಪ್ಪು ಗ್ರಾಹಕ ಸಂಪರ್ಕವನ್ನು ವಂಚಕರು ನಮೂದಿಸಿದ್ದು, ಕರೆ ಮಾಡಿದಾಗ ಮೋಸ ಮಾಡಲಾಗುತ್ತಿದೆ. ಯಾವುದೇ ಯೋಜನೆ ಬಗ್ಗೆ ಮಾಹಿತಿ ಬೇಕಾದರೆ ಸಂಬಂಧಪಟ್ಟ ಇಲಾಖೆಯಿಂದಲೇ ಪಡೆಯಿರಿ.
– ರಾಮಚಂದ್ರ ನಾಯಕ್‌, ಪೊಲೀಸ್‌ ನಿರೀಕ್ಷಕರು, ಉಡುಪಿ ಸೆನ್‌ ಠಾಣೆ

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next