ಬೆಂಗಳೂರು: ಪೀಠೊಪಕರಣಗಳನ್ನು ಫೇಸ್‌ಬುಕ್ ನಲ್ಲಿ ಮಾರಾಟ ಮಾಡಲು ಮುಂದಾದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಸೈಬರ್ ಕಳ್ಳರ ಗಾಳಕ್ಕೆ ಸಿಲುಕಿ 98 ಸಾವಿರ ರೂ. ಕಳೆದುಕೊಂಡಿದ್ದಾರೆ.
ದೊಡ್ಡತೋಗೂರು ನಿವಾಸಿ ಪ್ರಭಾಕರ್ ಜೈಸ್ವಾಲ್ (40) ವಂಚನೆಗೊಳಗಾದವನು.
ಮನೆಯಲ್ಲಿರುವ ಪೀಠೊಪಕರಣ ಮಾರಾಟ ಮಾಡುವುದಾಗಿ ಖಾಸಗಿ ಕಂಪನಿ ಉದ್ಯೋಗಿ ಪ್ರಭಾಕರ್ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದರು. ಪ್ರಭಾಕರ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, “ನೀವು ಫೇಸ್‌ಬುಕ್‌ನಲ್ಲಿ ಉಲ್ಲೇಖೀಸಿರುವ ಪೀಠೊಪಕರಣ ಖರೀದಿಸುವುದಾಗಿ ಹೇಳಿದ್ದ. ತಾನು ಕಳುಹಿಸುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಕೂಡಲೇ ಮುಂಗಡ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ’ ಎಂದು ತಿಳಿಸಿದ್ದ.
ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿದ ಪ್ರಭಾಕರ್ ಆತ ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಪ್ರಭಾಕರ್ ಅವರ ಬ್ಯಾಂಕ್ ಖಾತೆಯಿಂದ 98 ಸಾವಿರ ರೂ. ಕಡಿತಗೊಂಡಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.