ಬಂಟ್ವಾಳ: ಕಳ್ಳಿಗೆ ಗ್ರಾಮದ ತೊಡಂಬಿಲದ ಮಹಿಳೆಯೊಬ್ಬರ ಮಕ್ಕಳಿಗೆ ಬಲ್ಗೇರಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಆರೋಪಿಯೋರ್ವ 6.30 ಲಕ್ಷ ರೂ. ಮೊತ್ತವನ್ನು ಪಡೆದು ವಂಚಿಸಿದ್ದು, ಜತೆಗೆ ಮಕ್ಕಳನ್ನು ಮುಂಬಯಿಗೆ ಬರ ಹೇಳಿ ಬಳಿಕ ಆರೋಪಿ ಅಲ್ಲಿಂದ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರು ಬಿಜೈ ಹೊಸ ರಸ್ತೆ 2ನೇ ಅಡ್ಡ ರಸ್ತೆ ನಿವಾಸಿ ವಿ.ಆರ್. ಸುಧೀರ್ ರಾವ್ ಪ್ರಕರಣದ ಆರೋಪಿಯಾಗಿದ್ದು, ತೊಡಂಬಿಲ ನಿವಾಸಿ ನೆಲ್ಲಿ ಲೀನಾ ಮೊಂತೊರೊ ಅವರು ವಂಚನೆಗೊಳಗಾದ ಮಹಿಳೆಯಾಗಿದ್ದಾರೆ.
ಮಹಿಳೆಯ ಸಂಬಂಧಿ ಲವೀನಾ ಲೋಬೊ ಅವರ ಮೂಲಕ ಆರೋಪಿ ಸುಧೀರ್‌ರಾವ್ ನ ಪರಿಚಯವಾಗಿದ್ದು, ಮಕ್ಕಳಿಗೆ ಉದ್ಯೋಗ ನಗದು ಹಾಗೂ ಬ್ಯಾಂಕ್ ಖಾತೆಗೆ ಹಲವು ಬಾರಿ ಮೊತ್ತವನ್ನು ಹಾಕಿಸಿಕೊಂಡಿದ್ದಾರೆ.
ಫೆ. 22ರಂದು ಬಿ.ಸಿ.ರೋಡಿನಲ್ಲಿ 2,83,800 ರೂ., 28ರಂದು ಆನ್‌ಲೈನ್ ಮೂಲಕ 50 ರೂ. ಹಾಗೂ 84,950 ರೂ, ಜತೆಗೆ ಬೇರೆ ಬೇರೆ ದಿನಗಳಲ್ಲಿ 71 ಸಾವಿರ ರೂ., 60 ಸಾವಿರ ರೂ., 16 ಸಾವಿರ ರೂ., 2,500 ರೂ., 2,100 ರೂ., 49 ಸಾವಿರ ರೂ, 45 ಸಾವಿರ ರೂ.ಗಳನ್ನು ಬ್ಯಾಂಕೊಂದರ ಬೆಂಗಳೂರು ಶಾಖೆಯ ಉಳಿತಾಯ ಖಾತೆಗೆ ಹಾಕಿಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಮಾ. 19ರಂದು ಮಕ್ಕಳನ್ನು ಮುಂಬಯಿಗೆ ಬರ ಹೇಳಿ ಅಲ್ಲಿ ಅವರಿಂದ 15,600 ರೂ. ಪಡೆದು ಬಲ್ಗೇರಿಯಾದಲ್ಲಿ ಚಳಿ ಇದ್ದು ಜಾಕೆಟ್ ತರುವುದಾಗಿ ಹೇಳಿ ಹೋದವನು ಪರಾರಿ ಯಾಗಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.
ಆತನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸ್ವಿಟ್ಚ್ಡ್ ಆಫ್ ಬರುತ್ತಿದೆ ಎನ್ನಲಾಗಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಅಟ್ಟಿಸಿಕೊಂಡು ಬಂದ ಬೀದಿ ನಾಯಿಗಳು; ನಿಂತಿದ್ದ ಕಾರಿಗೆ ಸ್ಕೂಟರ್ ಢಿಕ್ಕಿ ;ವೈರಲ್ ವಿಡಿಯೋ