ಮಂಗಳೂರು: ಆನ್‌ಲೈನ್ ಮೂಲಕ ಪಾರ್ಟ್ ಟೈಂ ಉದ್ಯೋಗದ ಆಮಿಷ ನೀಡಿ 70,000 ರೂ. ವಂಚಿಸಿರುವ ಘಟನೆ ನಡೆದಿದೆ. ಪಾರ್ಟ್ ಟೈಂ ಕೆಲಸದ ಬಗ್ಗೆ ದೂರುದಾರರೊಬ್ಬರಿಗೆ ಸಂದೇಶ ಬಂದಿತ್ತು. ಆ ಬಗ್ಗೆ ವಿಚಾರಿಸಿದಾಗ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದರು. ಬಳಿಕ ಟೆಲಿಗ್ರಾಂನಲ್ಲಿ ಲಿಂಕ್‌ವೊಂದನ್ನು ಕ್ಲಿಕ್ ಮಾಡಿ ಆ್ಯಪ್ ಡೌನ್‌ಲೋಡ್ ಮಾಡಲು ತಿಳಿಸಿದರು.
ಅದರಲ್ಲಿ 10,000 ರೂ.ಗಳ ಟಾಸ್ಕ್ ಮುಗಿಸಿದರೆ 4,000 ರೂ. ಲಾಭ ಬರುತ್ತದೆ ಎಂದು ತಿಳಿಸಲಾಗಿತ್ತು. ಅದರಂತೆ 10,000 ರೂ. ವರ್ಗಾವಣೆ ಮಾಡಿದರು. ಅವರ ಖಾತೆಗೆ 14,000 ರೂ. ಜಮೆಯಾಗಿರುವಂತೆ ತೋರಿಸಿದರು. ಬಳಿಕ ಮತ್ತೂಂದು ಇನ್‌ಸ್ಟಾಗ್ರಾಂ ಖಾತೆಯನ್ನು ಅನುಸರಿಸುವಂತೆ ತಿಳಿಸಿದರು. ಅದರಂತೆ ದೂರುದಾರರು ಅದನ್ನು ಅನುಸರಿಸಿದರು. ಅದರಲ್ಲಿ ಅವರ ಖಾತೆಗೆ 300 ರೂ. ಜಮೆಯಾಗುವಂತೆ ತೋರಿಸಿದರು. ಬಳಿಕ 10,000 ರೂ., 30,000 ರೂ. ವರ್ಗಾಯಿಸಿದರು. ಅವರ ಆ್ಯಪ್‌ನಲ್ಲಿದ್ದ ಖಾತೆಗೆ 56,000 ರೂ. ಜಮೆ ಆಗಿರುವಂತೆ ತೋರಿಸಲಾಯಿತು. ಆ ಮೊತ್ತವನ್ನು ದೂರುದಾರರು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಅದನ್ನು ಪಡೆಯಲು ಮತ್ತೆ ಹಣ ವರ್ಗಾಯಿಸುವಂತೆ ತಿಳಿಸಿದರು. ದೂರುದಾರರು ಮತ್ತೆ 30,000 ರೂ. ವರ್ಗಾಯಿಸಿದರು. ಆದರೆ ಅವರ ಬ್ಯಾಂಕ್ ಖಾತೆಗೆ ಯಾವುದೇ ಹಣ ಜಮೆ ಆಗಿರಲಿಲ್ಲ. ಒಟ್ಟು 70,000 ರೂ. ವಂಚಿಸಲಾಗಿದೆ.