Advertisement
ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜ್ ಕುಮಾರ್ ಮೀನಾ (23) ಮತ್ತು ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಬಂಧಿತರು. ಇವರು ಮಂಗಳೂರಿನ ವಿಳಾಸ ನೀಡಿ ಅಮೆಜಾನ್ ಕಂಪೆನಿಯ ಆನ್‌ಲೈನ್ ಮಾರುಕಟ್ಟೆಯಿಂದ ವಿವಿಧ ರೀತಿಯ ಬೆಲೆ ಬಾಳುವ ಸಾಮಗ್ರಿಗಳನ್ನು ಆರ್ಡರ್ ಮಾಡಿ, ಅದನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಭಾರೀ ಮೋಸ ಮಾಡಿದ್ದಾರೆ.
ಇಬ್ಬರು ಬಂದಿದ್ದರು
ಸಾಮಗ್ರಿಗಳ ಡೆಲಿವರಿ ವೇಳೆ ಅಮಿತ್ ಹೆಸರಿನ ಓರ್ವ ವ್ಯಕ್ತಿ ಮಾತ್ರವಲ್ಲದೆ ಇನ್ನೋರ್ವ ಕೂಡ ಬಂದಿದ್ದ. ಓರ್ವ ಡೆಲಿವರಿ ಬಾಯ್ ಜತೆಗೆ ಡೆಲಿವರಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾಗ ಇನ್ನೋರ್ವ ಭಾರೀ ಚಾಕಚಕ್ಯತೆಯಿಂದ ಬಾಕ್ಸ್‌ಗಳ ಮೇಲಿನ ಲೇಬಲ್‌ಗಳನ್ನು ಬದಲಾಯಿಸಿದ್ದ. ಆರೋಪಿ ರಾಜ್ ಕುಮಾರ್ ಮೀನಾ “ಅಮಿತ್’ ಹೆಸರಿನಲ್ಲಿ ಆರ್ಡರ್ ಬುಕ್ ಮಾಡಿದ್ದ. ಸುಭಾಷ್ ಗುರ್ಜರ್ ಆತನಿಗೆ ಸಹಕರಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ತಮಿಳುನಾಡು ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ರಾಜ್‌ಕುಮಾರ್ ಮೀನಾ ಇದೇ ರೀತಿ ತಮಿಳುನಾಡಿನಲ್ಲೂ ಕೃತ್ಯ ನಡೆಸಿದ್ದ. ಆತನನ್ನು ತಮಿಳುನಾಡು ಪೊಲೀಸರು ವಶಕ್ಕೆ ಪಡೆದಿದ್ದರು. ಉರ್ವ ಪೊಲೀಸರು ಬಾಡಿ ವಾರಂಟ್ ಪಡೆದು ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆತ ನೀಡಿದ ಮಾಹಿತಿಯಂತೆ ಮತ್ತೋರ್ವ ಆರೋಪಿ ಸುಭಾಷ್ ಗುರ್ಜರ್‌ನನ್ನು ಬಂಧಿಸಲಾಗಿದೆ.
Related Articles
ಇದೇ ರೀತಿಯ ಕೃತ್ಯಗಳು ಹೈದರಾಬಾದ್, ಪುಣೆ, ಮೈಸೂರಿನಲ್ಲೂ ನಡೆದಿವೆ. ಅಲ್ಲದೆ ಈ ಇಬ್ಬರು ಆರೋಪಿಗಳ ವಿರುದ್ಧ ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ಹೊಸದಿಲ್ಲಿ, ಉತ್ತರಪ್ರದೇಶ ಸಹಿತ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಕಳೆದ 4-5 ವರ್ಷಗಳಲ್ಲಿ 30 ಕೋ.ರೂ.ಗಳಿಗೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಖರೀದಿಸಿ ಮೋಸ ಮಾಡಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
Advertisement
ಇತರ ಪ್ರಕರಣಗಳ ಜಾಡು ಪ್ರಕರಣ ದಾಖಲಾದ ಅನಂತರ ಪೊಲೀಸರು ದೇಶದ ಹಲವೆಡೆ ನಡೆದಿರುವ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಆಗ ತಮಿಳುನಾಡಿನ ಸೇಲಂನಲ್ಲಿಯೂ ಇದೇ ರೀತಿಯ ಪ್ರಕರಣ ನಡೆದಿದ್ದು ಗೊತ್ತಾಗಿತ್ತು. ಅಲ್ಲಿಂದ ಮಾಹಿತಿ ಪಡೆದಾಗ ಆರೋಪಿಗಳ ಸುಳಿವು ದೊರೆಯಿತು. ವಂಚನೆ ಹೇಗೆ?
“ಅಮಿತ್’ ಹೆಸರಿನಲ್ಲಿ ಓರ್ವ ವ್ಯಕ್ತಿ ಆನ್‌ಲೈನ್ ಮೂಲಕ ಅಮೆಜಾನ್‌ನಲ್ಲಿ ಒಟ್ಟು 11.45 ಲ.ರೂ. ಮೌಲ್ಯದ ಸೋನಿ ಕಂಪೆನಿಯ ಕೆಮರಾಗಳು ಹಾಗೂ 1 ಸಾ. ರೂ.ಗಳಿಂದ 3 ಸಾ. ರೂ. ಮೌಲ್ಯದ ಇತರ ಸಾಮಗ್ರಿಗಳು ಸಹಿತ ಒಟ್ಟು 12 ವಸ್ತುಗಳನ್ನು ಆರ್ಡರ್ ಮಾಡಿದ್ದ. ಆತ ಮಂಗಳೂರು ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ವಿಳಾಸ ನೀಡಿದ್ದ. ಅದರಂತೆ ಸೆ.21ರಂದು ಡೆಲಿವರಿ ಬಾಯ್ ಸಾಮಗ್ರಿಗಳನ್ನು ತಂದಿದ್ದ. ಅದನ್ನು ಸ್ವೀಕರಿಸಲು ಅಮಿತ್ ಹೆಸರಿನ ಓರ್ವ ಹಾಗೂ ಇನ್ನೋರ್ವ ಆಗಮಿಸಿದ್ದ. ಅಲ್ಲಿ ಡೆಲಿವರಿ ಬಾಯ್ ರಸ್ತೆ ಬದಿ ಸಾಮಗ್ರಿಗಳನ್ನು ಫುಟ್‌ಪಾತ್ ಮೇಲೆ ಇರಿಸಿದ್ದ. ಇತರ ಸಾಮಗ್ರಿಗಳನ್ನು ಆರೋಪಿಗಳು ಪಡೆದುಕೊಂಡಿದ್ದರು. ಕೆಮರಾಗಳಿಗೆ ಸಂಬಂಧಿಸಿದ ಒಟಿಪಿಯನ್ನು ಡೆಲಿವರಿ ಬಾಯ್ ಕಳುಹಿಸಿದಾಗ ಅದನ್ನು ಅಮಿತ್ ತಪ್ಪಾಗಿ ನೀಡಿದ್ದ. ಡೆಲಿವರಿ ಬಾಯ್ ಮತ್ತೂಮ್ಮೆ ಒಟಿಪಿ ಕಳುಹಿಸಿದಾಗ ಅಮಿತ್‌ನ ಮೊಬೈಲ್ ಸ್ವಿಚ್ ಆಫ್ ಆಗಿ ಒಟಿಪಿ ಸಿಗಲಿಲ್ಲ. ಆಗ ಅಮಿತ್ ಅದನ್ನು ಅನಂತರ ಪಡೆದುಕೊಳ್ಳುವುದಾಗಿ ತಿಳಿಸಿದ. ಡೆಲಿವರಿ ಬಾಯ್ ಸಾಮಗ್ರಿಗಳನ್ನು ವಾಪಸ್ ಕಚೇರಿಗೆ ತಂದಿದ್ದರು. ಮರುದಿನ ಆ ಸಾಮಗ್ರಿಗಳನ್ನು ಡೆಲಿವರಿ ಮಾಡುವುದಕ್ಕಾಗಿ ನೋಡಿದಾಗ ಆರ್ಡರನ್ನು ರದ್ದು ಮಾಡಿರುವುದು ಗೊತ್ತಾಗಿದೆ. ಅಲ್ಲದೆ ರದ್ದು ಮಾಡಿದ ಆರ್ಡರ್‌ಗಳ ಮೊತ್ತ 11.45 ಲ.ರೂ. ಅಮಿತ್‌ನ ಖಾತೆಗೆ ಮರುಪಾವತಿಯಾದ ಸಂಗತಿ ತಿಳಿಯಿತು. ಭಾರೀ ಮೊತ್ತದ ಸಾಮಗ್ರಿಗಳನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಅದರ ಬಾಕ್ಸ್ ತೆರೆದು ಪರಿಶೀಲಿಸಿದಾಗ ಕೆಮರಾಗಳಿದ್ದ ಪಾರ್ಸೆಲ್ ಬಾಕ್ಸ್ ಮೇಲಿದ್ದ ಟ್ರ್ಯಾಕಿಂಗ್ ಐಡಿಗಳಿದ್ದ ಲೇಬಲ್‌ಗಳನ್ನು ತೆಗೆದು ಅವುಗಳನ್ನು ಬೇರೆ ಎರಡು ಸಾಮಗ್ರಿಗಳಿದ್ದ ಅದೇ ರೀತಿಯ ಬಾಕ್ಸ್‌ಗಳ ಮೇಲೆ ಅಂಟಿಸಲಾಗಿತ್ತು. ಅಲ್ಲದೆ ಆ ಬಾಕ್ಸ್‌ಗಳ ಮೇಲಿದ್ದ ಲೇಬಲ್‌ಗಳನ್ನು ಕೆಮರಾದಲ್ಲಿದ್ದ ಬಾಕ್ಸ್‌ಗಳ ಮೇಲೆ ಅಂಟಿಸಿದ್ದು, ತಿಳಿಯಿತು. ಹೀಗೆ ಕಡಿಮೆ ಬೆಲೆಯ ವಸ್ತುಗಳನ್ನು ಬಾಕಿ ಇರಿಸಿಕೊಂಡು, ಕೆಮರಾವನ್ನು ಅವರು ಕೊಂಡೊಯ್ದಿದ್ದರು. ಆದರೆ ಲೇಬಲ್ ಬದಲಾಯಿಸಿದ್ದರಿಂದ ಕೆಮರಾದ ಮೊತ್ತ ಅವರ ಖಾತೆಗೆ ಜತೆಯಾಗಿತ್ತು. ಈ ಬಗ್ಗೆ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಲೇಬಲ್ ಬದಲಿಸಿ, ಆರ್ಡರ್ ಕ್ಯಾನ್ಸಲ್ ಮಾಡಿಸಿದ್ದರು. ಆರೋಪಿಗಳು ಡೆಲಿವರಿ ಪಡೆದುಕೊಳ್ಳುವ ಪ್ರಕ್ರಿಯೆ ನಡೆದುಕೊಳ್ಳುವ ಸಂದರ್ಭದಲ್ಲಿ ಚಾಕಚಕ್ಯತೆಯಿಂದ ಟ್ರ್ಯಾಕಿಂಗ್ ಐಡಿಯ ಲೇಬಲ್‌ಗಳನ್ನು ಬದಲಾಯಿಸಿದ್ದರು. ಅಲ್ಲದೆ ಅನಂತರ ಕೂಡಲೇ ಕೆಮರಾಗಳ ಆರ್ಡರನ್ನು ರದ್ದು ಮಾಡಿದ್ದರು. ವಿಮಾನದಲ್ಲಿಯೇ ಸುತ್ತಾಟ
ಆರೋಪಿಗಳು ದೊಡ್ಡ ಮೌಲ್ಯದ ಸಾಮಗ್ರಿಗಳು ಸಿಗುತ್ತಿದ್ದಂತೆ ಅದನ್ನು ಒಎಲ್‌ಎಕ್ಸ್‌ನಲ್ಲಿ ಹಾಕಿ ಸಿಕ್ಕಷ್ಟು ಮೊತ್ತಕ್ಕೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಆರೋಪಿಗಳು ನಕಲಿ ಸಿಮ್ ಮತ್ತು ನಕಲಿ ಹೆಸರುಗಳನ್ನು ಬಳಸಿ ವಂಚನೆ ಮಾಡುತ್ತಿದ್ದರು. ವಿಮಾನ ದಲ್ಲಿಯೇ ಸುತ್ತಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದರು. ತಾವು ಮೋಸದಿಂದ ಪಡೆದ ಸಾಮಗ್ರಿಗಳನ್ನು ಕೂಡ ವಿಮಾನದಲ್ಲಿಯೇ ಸಾಗಿಸುತ್ತಿದ್ದರು. ಆರೋಪಿಗಳು ಯಾವುದೇ ನಗರದಲ್ಲಿದ್ದರೂ ಜಿಪಿಎಸ್ ಟ್ರ್ಯಾಕಿಂಗ್‌ನ್ನು ಹ್ಯಾಕ್ ಮಾಡಿ ತಾವು ಬೇರೆ ಯಾವುದೋ ನಗರದಲ್ಲಿ ಇರುವಂತೆ ಲೊಕೇಶನ್ ಹಾಕಿ ಸಾಮಗ್ರಿಗಳನ್ನು ಆರ್ಡರ್ ಮಾಡುತ್ತಿದ್ದರು ಎಂಬುದು ಕೂಡ ತನಿಖೆ ವೇಳೆ ಗೊತ್ತಾಗಿದೆ.