ಮಂಗಳೂರು: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಇವರಿಂದ ಕರೆ ಮಾಡುವುದಾಗಿ ತಿಳಿಸಿ, ಮೊಬೈಲ್ ಸಿಮ್ ಖರೀದಿಸಿ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿರುವ ಬಗ್ಗೆ ಆರೋಪಿಸಿ 1.71 ಕೋ.ರೂ. ವಂಚಿಸಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ. 11ರಂದು ದೂರುದಾರರು ಮನೆಯಲ್ಲಿರುವಾಗ ಅಪರಿಚಿತ ವ್ಯಕ್ತಿಯೊಬ್ಬ ಟ್ರಾಯ್ ಪ್ರತಿನಿಧಿ ಎಂದು ಕರೆ ಮಾಡಿದ್ದಾನೆ. ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದು, ಮುಂಬಯಿನ ಅಂಧೇರಿ (ಪೂ)ದಲ್ಲಿ ಅದರ ಮೂಲಕ ಹಲವು ಕಾನೂನು ಬಾಹಿರ ಚಟುವಟಿಕೆ ನಡೆದಿವೆ. ಮಾರ್ಕೆಟಿಂಗ್ ನೆಪದಲ್ಲಿ ಆ ಮೊಬೈಲ್ ನಂಬರ್‌ನಿಂದ ಕರೆ ಮಾಡಿ ಕಿರುಕುಳ ನೀಡುತ್ತಿರುವ ಬಗ್ಗೆ ಎಫ್‌ಐಆರ್ ಆಗಿದೆ. ಕೂಡಲೇ ಅಂಧೇರಿ ಪೂರ್ವ ಠಾಣೆಯನ್ನು ಸಂಪರ್ಕಿಸಬೇಕು. ಇಲ್ಲದಿದ್ದಲ್ಲಿ ನಿಮ್ಮ ಮೊಬೈಲ್ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದ.
ಬಳಿಕ ಅಪರಿಚತ ವ್ಯಕ್ತಿ ಪ್ರದೀಪ್ ಸಾವಂತ್ ಎನ್ನುವಾತನಲ್ಲಿ ದೂರುದಾರರು ಮಾತನಾಡಿದ್ದು, ನರೇಶ್ ಗೋಯೆಲ್ ವಂಚನೆ ಪ್ರಕರಣವನ್ನು ಒಳಗೊಂಡಿರುವ ಮನಿ ಲ್ಯಾಂಡರಿಂಗ್ ಯೋಜನೆಯಲ್ಲಿ ಭಾಗಿಯಾಗಿರುವುದರಿಂದ ಇನ್ನೊಂದು ಎಫ್‌ಐಆರ್ ದಾಖಲಾಗಿದೆ. ಅಂಧೇರಿಯ ಬ್ಯಾಂಕ್‌ನ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದ್ದು, ಅದಕ್ಕೆ ಐಡೆಂಟಿಟಿ ಬಳಸಿ ಸಿಮ್ ಖರೀದಿಸಲಾಗಿದ್ದು, ಆ ಕಾರಣದಿಂದ ಬಂಧನ ಮಾಡಲಾಗುವುದು ಎಂದು ತಿಳಿಸಿದ್ದ.
ಅನಂತರ ವಾಟ್ಸಾಪ್ ಮೂಲಕ ವೀಡಿಯೋ ಕರೆಯಲ್ಲಿ ರಾಹುಲ್ ಕುಮಾರ್ ಎನ್ನುವಾತ ಪೊಲೀಸ್ ಅಧಿಕಾರಿ ಮತ್ತು ಆಕಾಂಕ್ಷ ಎನ್ನುವ ಮಹಿಳೆ ಸಿಬಿಐ ಅಧಿಕಾರಿಯೆಂದು ತಿಳಿಸಿ, ಸಿಬಿಐ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ದೂರುದಾರರ ವಾಟ್ಸಾಪ್ ನಂಬರ್‌ಗೆ ಕಳುಹಿಸಿದ್ದಳು. ಪ್ರಕರಣದಿಂದ ಮುಕ್ತಗೊಳ್ಳಬೇಕಾದರೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಳು. ಅದರಂತೆ ನ. 13ರಿಂದ 19ರ ನಡುವೆ 53 ಲಕ್ಷ ರೂ., 74 ಲಕ್ಷ ರೂ., 44 ಲಕ್ಷ ರೂ. ಹೀಗೆ ಒಟ್ಟು 1.71 ಕೋ.ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಳು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಮೆರಿಕದಲ್ಲಿ ಉದ್ಯೋಗದಲ್ಲಿದ್ದು ಮಾಡಿದ ಸಂಪಾದನೆ?
ದೂರುದಾರರು ಮೂಲತಃ ಮುಂಬಯಿಯವರಾಗಿದ್ದು, ಈ ಮೊದಲು ಅಮೆರಿಕದಲ್ಲಿ ಐಟಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿಂದ ವಾಪಸಾದ ಬಳಿಕ ಮಂಗಳೂರಿನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿ ವಾಸವಾಗಿದ್ದರು. ಅವರು ಅವಿವಾಹಿತರಾಗಿದ್ದು, ಒಬ್ಬರೇ ಇದ್ದರು. ಉದ್ಯೋಗದ ಮೂಲಕ ಮಾಡಿದ ಉಳಿತಾಯದ ಸಂಪಾದನೆಯನ್ನು ಈ ಮೂಲಕ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.