ಬೆಂಗಳೂರು: ಎಲೆಕ್ಟ್ರಾನಿಕ್ ವಸ್ತು ರಿಪೇರಿ ಅಥವಾ ಬೇರೆ ಯಾವುದೇ ಸಂದರ್ಭದಲ್ಲಿ ಗೂಗಲ್‌ನಲ್ಲಿ ಸಿಗುವ ಮೊಬೈಲ್ ನಂಬರ್ ಅಥವಾ ವೆಬ್‌ಸೈಟ್ ಗಳಲ್ಲಿ ದೊರೆವ ಮೊಬೈಲ್ ನಂಬರ್‌ಗೆ ಡಯಲ್ ಮಾಡುವ ಮುನ್ನ ಎಚ್ಚರ ವಹಿಸಿ.
ರಿಫ್ರೀಜರೇಟರ್ ರಿಪೇರಿಗಾಗಿ ಗೂಗಲ್‌ನಲ್ಲಿ ದೊರೆತ ಮೊಬೈಲ್ ನಂಬರ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬರಿಗೆ 9 ಸಾವಿರ ರೂ. ಪಡೆದು ವಂಚಿಸಿದ ಸೈಬರ್ ವಂಚಕನನ್ನು ಈಶಾನ್ಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ.
ಗುರಪ್ಪಪಾಳ್ಯ ನಿವಾಸಿ ಅಬ್ದುಲ್ ಸುಭಾನ(25) ಬಂಧಿತ. ಆರೋಪಿಯಿಂದ 2 ಮೊಬೈಲ್, ನಾಲ್ಕು ಸಿಮ್‌ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ದೂರುದಾರರ ಎಲ್.ಜಿ ಕಂಪನಿಯ ರಿಫ್ರೀಜರೇಟರ್ ಹಾಳಾಗಿದ್ದು, ರಿಪೇರಿ ಮಾಡಿಸಲು ಗೂಗಲ್‌ನಲ್ಲಿ ಶೋಧಿಸಿದ್ದಾರೆ. ಆಗ ವೆಬ್‌ಸೈಟ್ ವೊಂದರಲ್ಲಿದ್ದ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿದ್ದಾರೆ. ಆಗ ಕರೆ ಸ್ವೀಕರಿಸಿದ ವ್ಯಕ್ತಿ ರಿಪೇರಿ ಮಾಡುವ ಸಿಬ್ಬಂದಿ ತಮ್ಮನ್ನು ಸಂಪರ್ಕಿಸುತ್ತಾನೆ ಎಂದು ಕರೆ ಸ್ಥಗಿತಗೊಳಿಸಿದ್ದಾನೆ.
ನಂತರ ಆರೋಪಿ ದೂರುದಾರರಿಗೆ ಕರೆ ಮಾಡಿ ಎಲ್.ಜಿ. ಕಂಪನಿ ಅಧಿಕೃತ ಸರ್ವಿಸ್ ಸಿಬ್ಬಂದಿ ಎಂದು ಹೇಳಿಕೊಂಡಿದ್ದಾನೆ. ನಂತರ ರಿಫ್ರೀಜರೇಟರ್‌ನ ಫೋಟೋ ಕಳುಹಿಸಿ ಎಂದಿದ್ದು, ಚಿತ್ರವನ್ನು ನೋಡಿ ರೆಫ್ರೀಜರೇಟರ್‌ನ ಬೋರ್ಡ್ ಹೋಗಿದ್ದು, 9,500 ರೂ. ಆಗಲಿದೆ. ಅದನ್ನು ಖರೀದಿಸಿ ತಮ್ಮ ಮನೆಗೆ ಬಂದು ರಿಪೇರಿ ಮಾಡುತ್ತೇನೆ ಎಂದಿದ್ದಾನೆ. ಬಳಿಕ ಯುಪಿಐ ಮೂಲದ 9000 ಸಾವಿರ ರೂ. ವರ್ಗಾಯಿಸಿದ್ದಾರೆ.
ಬಳಿಕ ದೂರುದಾರರ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ದೂರದಾರರಿಗೆ ವಂಚನೆಯಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿದೆ.