Advertisement

Fraud: ಸುಧಾಮೂರ್ತಿ ಹೆಸರಿನಲ್ಲಿ ವಂಚನೆ; ಬಂಧನ

12:02 PM Sep 25, 2023 | Team Udayavani |

ಬೆಂಗಳೂರು: ಅಮೆರಿಕಾದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಡಾ ಸುಧಾಮೂರ್ತಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಸುಳ್ಳು ಜಾಹಿರಾತು ನೀಡಿ ಅಕ್ರಮವಾಗಿ ಟಿಕೆಟ್‌ ಮಾರಾಟ ಮಾಡಿ ವಂಚಿಸಿದ ಇಬ್ಬರು ಮಹಿಳೆಯರ ವಿರುದ್ಧ ಸುಧಾಮೂರ್ತಿ ಅವರ ಎಕ್ಸಿಕ್ಯೂಟಿವ್‌ ಅಸಿಸ್ಟೆಂಟ್‌ ಮಮತಾ ಸಂಜಯ್‌ ಎಂಬವರು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ಲಾವಣ್ಯ ಮತ್ತು ಶೃತಿ ಎಂಬುವವರ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು, ತನಿಖೆ ನಡೆ ಯುತ್ತಿದೆ ಎಂದು ಪೊಲೀಸರು ಹೇಳಿದರು. ಕಳೆದ ಏ.5ರಂದು ಕನ್ನಡ ಕೂಟ ಆಫ್ ನಾರ್ತ್‌ ಕ್ಯಾಲಿಫೋರ್ನಿಯಾ (ಕೆಕೆಎನ್‌ ಸಿ)ಯ 50ನೇ ವಾರ್ಷಿಕೋತ್ಸವ ಸಂಬಂಧ ಈ ಕಾರ್ಯಕ್ರಮಕ್ಕೆ ಭಾಗಿಯಾಗುವಂತೆ ಡಾ.ಸುಧಾಮೂರ್ತಿ ಅವರಿಗೆ ಇ-ಮೇಲ್‌ ಮೂಲಕ ಮನವಿ ಬಂದಿತ್ತು. ಆದರೆ, ಆ ದಿನ ಸುಧಾಮೂರ್ತಿ ಅವರು ಭಾಗಿಯಾಗಲು ಸಾಧ್ಯವಾಗದ ಕಾರಣ, ಅದೇ ದಿನ ಇ-ಮೇಲ್‌ ಮೂಲಕ ವಿಷಾದಿಸಿ ಪ್ರತಿಕ್ರಿಯೆ ನೀಡಲಾಗಿತ್ತು. ಆದರೂ ಸುಧಾಮೂರ್ತಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಧಾಮೂರ್ತಿ ಫೋಟೋ ಹಾಗೂ ಹೆಸರು ಬಳಸಿಕೊಂಡು ಜಾಹೀರಾತು ನೀಡಲಾಗಿತ್ತು. ಅದನ್ನು ಆ.30ರಂದು ಗಮನಿಸಿ ಅಚ್ಚರಿಗೊಂಡ ಮಮತ ಸಂಜಯ್‌, ಆಯೋಜಕರ ಬಳಿ ವಿಚಾರಿಸಿದ್ದಾರೆ.

ಆಗ ಲಾವಣ್ಯ ಎಂಬವರು ‘ನಾನು ಸುಧಾಮೂರ್ತಿ ಅವರ ಪರ್ಸನಲ್‌ ಅಸಿಸ್ಟೆಂಟ್‌’ ಎಂದು ಪರಿಚಯಿಸಿಕೊಂಡು ಸುಧಾಮೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಅಲ್ಲದೆ, ಆಗಸ್ಟ್‌ ಮೊದಲ ವಾರದಲ್ಲಿ ಸುಧಾಮೂರ್ತಿ ವಿಡಿಯೊ ಕಾನ್ಫರೆನ್ಸ್‌ ಕರೆ ಮಾಡಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ಖಚಿತ ಪಡಿಸಿದ್ದಾರೆ ಎಂದು ಲಾವಣ್ಯ ಆಯೋಜಕರಿಗೆ ತಿಳಿಸಿದ್ದಾರೆ ಎಂಬುದು ಗೊತ್ತಾಗಿದೆ.

ಜಾಲತಾಣದಲ್ಲಿ ಜಾಹೀರಾತು: ಕೇಸು ದಾಖಲು: ಅಮೆರಿಕಾದ ಸೇವಾ ಮಿಲಿಪಿಟಸ್‌ನಲ್ಲಿ ಸೆ.26ರಂದು ಡಾ.ಸುಧಾಮೂರ್ತಿ ಜತೆಗೆ ‘ಮೀಟ್‌ ಆ್ಯಂಡ್‌ ಗ್ರೀಟ್‌ ವಿತ್‌ ಡಾ.ಸುಧಾಮೂರ್ತಿ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಹೀಗೆ ಡಾ.ಸುಧಾಮೂರ್ತಿ ಹೆಸರನ್ನು ಮುಖ್ಯ ಅತಿಥಿ ಎಂದು ನಮೂದಿಸಿ ಜಾಹೀರಾತು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಟಿಕೆಟ್‌ ದರ ತಲಾ 40 ಡಾಲರ್‌ ಸಂಗ್ರಹಿಸಲಾಗಿದೆ. ಲಾವಣ್ಯ ಜತೆಗೆ ಶೃತಿ ಎಂಬಾಕೆ ಸೇರಿ ಅನಧಿಕೃತವಾಗಿ ಟಿಕೆಟ್‌ ಮಾರಾಟ ಮಾಡಿ ಹಣ ಸಂಗ್ರಹಿಸಿದ್ದಾರೆ. ಲಾವಣ್ಯ ಎಂಬುವವರು ಡಾ.ಸುಧಾಮೂರ್ತಿ ಅವರ ಪರ್ಸನಲ್‌ ಅಸಿಸ್ಟೆಂಟ್‌ ಎಂದು ಸುಳ್ಳು ಹೇಳಿಕೊಂಡು ಸುಧಾಮೂರ್ತಿ ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸಿದ್ದಾರೆ. ಹೀಗಾಗಿ ಲಾವಣ್ಯ ಮತ್ತು ಶೃತಿ ಎಂಬವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಮತಾ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next