ಬೆಂಗಳೂರು: ಮ್ಯಾಟ್ರಿಮೊನಿಯಲ್ ಮೂಲಕ ಪರಿಚಯವಾದ ಮಹಿಳೆಯೊಬ್ಬರು ಟೆಕಿಯಿಂದ ಬರೋಬ್ಬರಿ 1.14 ಕೋಟಿ ರೂ. ದೋಚಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ 41 ವರ್ಷದ ಟೆಕಿಯೊಬ್ಬರು ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೂಂದೆಡೆ ದೂರುದಾರ ಎಚ್ಚೆತ್ತು ಕೂಡಲೇ ದೂರು ನೀಡಿದ ಪರಿಣಾಮ ಕೆಲವೇ ಹೊತ್ತಿನಲ್ಲಿ ಆರೋಪಿಯ ಖಾತೆಯಿಂದ 84 ಲಕ್ಷ ರೂ. ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿದೇಶಿ ಮೂಲದ ಕಂಪನಿಯ ಉದ್ಯೋಗಿಯಾಗಿರುವ ದೂರುದಾರ ಸಾಫ್ಟ್ ವೇರ್ ವೊಂದರ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಮದುವೆಯಾಗುವ ಉದ್ದೇಶದಿಂದ ಮ್ಯಾಟ್ರಿಮೊನಿಯಲ್ಲಿ ನೋಂದಣಿಯಾಗಿದ್ದರು. ಅದೇ ಮ್ಯಾಟ್ರಿಮೊನಿಯಲ್ಲಿ ಸಾನ್ವಿ ಅರೋರಾ ಎಂಬ ಹೆಸರಿನಲ್ಲಿ ಪರಿಚಯವಾದ ಮಹಿಳೆ, ಜುಲೈ 7ರಂದು ದೂರುದಾರರಿಗೆ ವಿಡಿಯೋ ಕರೆ ಮಾಡಿದ್ದಾಳೆ. ಕರೆ ಸ್ವೀಕರಿಸಿದಾಗ ಆರೋಪಿ ಮಹಿಳೆ ನಗ್ನವಾಗಿದ್ದು, ದೂರುದಾರನಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾಳೆ. ಬಳಿಕ ಕೆಲ ಹೊತ್ತು ಮಾತನಾಡಿ, ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ತನ್ನ ಅಶ್ಲೀಲ ವಿಡಿಯೋ ನೋಡಿ ಹೆದರಿದ ದೂರುದಾರ ಬ್ಯಾಂಕ್ ಖಾತೆಗಳು, ಯುಪಿಐಗಳಿಗೆ ಹಂತ-ಹಂತವಾಗಿ ಒಟ್ಟು 1.14 ಕೋಟಿ ರೂ. ವರ್ಗಾಯಿಸಿದ್ದಾರೆ. ಕೂಡಲೇ ಎಚ್ಚೆತ್ತ ದೂರುದಾರ ವೈಟ್‌ಫೀಲ್ಡ್ ಠಾಣೆಗೆ ದೂರು ನೀಡಿದ್ದಾರೆ. ಇದೇ ವೇಳೆ ಕಾರ್ಯಪ್ರವೃತ್ತರಾದ ಸೈಬರ್ ಪೊಲೀಸರು 84 ಲಕ್ಷ ರೂ. ಜಪ್ತಿ ಮಾಡಿಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.